ಕೃಷಿಯಲ್ಲಿ ಖುಷಿ ಕಂಡ ‘ಅಣ್ತಮ್ಮ’

24raju3
Published on

ಚಾಮರಾಜನಗರ: ಕೃಷಿಯೇ ಬಂಧು, ಬೆಳೆಗಳೇ ಬಳಗ ಎನ್ನುವಂತಿರುವ ಈ ‘ಅಣ್ತಮ್ಮ’ರು ಕೃಷಿಯಲ್ಲಿ ಸಖತ್ ಖುಷಿ ಕಂಡುಕೊಂಡಿದ್ದಾರೆ.

ತಾಲೂಕಿನ ಅಮಚವಾಡಿಯ ಬಂಗಾರು ಮತ್ತು ಚಿನ್ನಮ್ಮ ದಂಪತಿ ಪುತ್ರರಾದ ಮಹೇಶ್ ಮತ್ತು ಪ್ರಕಾಶ್ ವ್ಯವಸಾಯದಲ್ಲಿ ಕಮಾಲ್ ಮಾಡುತ್ತಿರುವ ಸಹೋದರರು. ಇವರು ಗ್ರಾಮದ ಹೊರವಲಯದಲ್ಲಿರುವ ಸುಮಾರು 35 ಎಕರೆ ಪ್ರದೇಶದಲ್ಲಿ ಕೃಷಿಯಲ್ಲಿ ತೊಡಗಿದ್ದಾರೆ. 18 ಎಕರೆ ಸ್ವಂತ ಭೂಮಿ, ಉಳಿದ ಭೂಮಿಯನ್ನು ಅಕ್ಕಪಕ್ಕದಲ್ಲಿ ಗುತ್ತಿಗೆ ಪಡೆದಿದ್ದಾರೆ. ಇಷ್ಟು ಎಕರೆ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ವ್ಯವಸಾಯ ಮಾಡಲು ಅಣ್ಣನಿಗೆ ತಮ್ಮ, ತಮ್ಮನಿಗೆ ಅಣ್ಣ ಸಾಥ್ ಕೊಡುತ್ತಿದ್ದಾರೆ.

ಪ್ರಸ್ತುತ 15 ಎಕರೆಯಲ್ಲಿ ಬಾಳೆ, 2 ಎಕರೆಯಲ್ಲಿ ಟೊಮ್ಯಾಟೊ, 2 ಎಕರೆಯಲ್ಲಿ ಬದನೆಕಾಯಿ ಮತ್ತು ಮಂಗಳೂರು ಸೌತೆಕಾಯಿ, ಉಳಿದ ಪ್ರದೇಶದಲ್ಲಿ ತೆಂಗು, ಅಡಕೆ ಬೆಳೆದಿದ್ದಾರೆ. ಒಟ್ಟು 15 ಬೋರ್‌ವೆಲ್‌ಗಳಿದ್ದು, ಹನಿ ನೀರಾವರಿ ಪದ್ಧತಿ ಅಳವಡಿಸಿಕೊಂಡಿದ್ದಾರೆ. ಅಲ್ಲದೆ, ಹೈನುಗಾರಿಕೆಯಲ್ಲೂ ತೊಡಗಿದ್ದಾರೆ. ಮುಖ್ಯವಾಗಿ 6 ಜೊತೆ ಗಿರ್ ತಳಿಯ ಕರುಗಳು, 2 ಹಳ್ಳಿಕಾರ್ ತಳಿ, 3 ಹಸುಗಳು, 1 ಜೊತೆ ಬಂಡೂರು ಕುರಿಗಳು, 1 ಮುಧೋಳ್ ಶ್ವಾನವನ್ನು ಸಾಕಿದ್ದಾರೆ. ದಿನಕ್ಕೆ 10ರಿಂದ 15 ಲೀಟರ್ ಹಾಲು ಸಂಗ್ರಹ ಮಾಡುತ್ತಾರೆ. ಗಂಜಲ, ಸೆಗಣಿಯನ್ನು ಗೋಬರ್ ಗ್ಯಾಸ್‌ಗೆ ಬಳಸುತ್ತಿದ್ದಾರೆ. ಉಳಿದದ್ದನ್ನು ಬೆಳೆಗಳಿಗೂ ಹಾಕುತ್ತಿದ್ದಾರೆ. ಮೂರು ಟ್ರಾೃಕ್ಟರ್‌ಗಳಿವೆ. ಮೇವು ಕತ್ತರಿಸುವ ಮತ್ತು ಹಾಲು ಕರೆಯುವ ಯಂತ್ರಗಳಿವೆ.

ಈ ರೀತಿ ದೊಡ್ಡ ಮಟ್ಟದಲ್ಲಿ ಕೃಷಿಯಲ್ಲಿ ತೊಡಗಿರುವುದಾಗಿ ಹೇಳುವ ರೈತ ಮಹೇಶ್ ವಾರ್ಷಿಕವಾಗಿ 20 ರಿಂದ 25 ಲಕ್ಷ ರೂ. ಆದಾಯ ಗಳಿಸುತ್ತಿರುವುದಾಗಿ ತಿಳಿಸಿದ್ದಾರೆ. ಕೃಷಿ ಇಲಾಖೆಯಿಂದ ಕೃಷಿ ಹೊಂಡ ನಿರ್ಮಾಣ, ಹನಿ ನೀರಾವರಿ, ಸೋಲಾರ್ ಅಳವಡಿಕೆ ಮತ್ತು ಬೆಳೆ ಸಾಲ ಸೌಲಭ್ಯವನ್ನು ಬಳಸಿಕೊಂಡಿದ್ದಾರೆ. ಬೆಳೆದ ಬೆಳೆಗಳನ್ನು ಜಮೀನಿಗೆ ಬಂದು ಮಾರಾಟಗಾರರು ಖರೀದಿ ಮಾಡುತ್ತಿದ್ದಾರೆ.

ಸೋಲಾರ್ ತಂತ್ರಜ್ಞಾನ ಬಳಕೆ: ಬೆಳೆಗಳಿಗೆ ನೀರು ಹಾಯಿಸಲು ವಿದ್ಯುತ್ ಅವಲಂಬಿಸದ ರೈತರಾದ ಮಹೇಶ್ ಮತ್ತು ಪ್ರಕಾಶ್, ಸೋಲಾರ್ ತಂತ್ರಜ್ಞಾನವನ್ನು ಪರಿಣಾಮಕಾರಿಯಾಗಿ ಬಳಕೆ ಮಾಡಿಕೊಂಡಿದ್ದಾರೆ. ಈರುಳ್ಳಿ ಸಂಗ್ರಹಿಸಲು ನಿರ್ಮಿಸಿರುವ ಕೊಠಡಿಯ ಛಾವಣಿಯ ಮೇಲೆ ಕೃಷಿ ಇಲಾಖೆಯ ನೆರವು ಪಡೆದು ಸೋಲಾರ್ ಅಳವಡಿಸಿದ್ದಾರೆ. ಇದರಿಂದ ಉತ್ಪಾದನೆಯಾಗುವ ವಿದ್ಯುತ್‌ಅನ್ನು ಪಂಪ್‌ಸೆಟ್‌ಗೆ ನೀಡಿ ಬೆಳೆಗಳಿಗೆ ನೀರು ಹಾಯಿಸುತ್ತಿದ್ದಾರೆ. ಜತೆಗೆ ಮನೆಗೂ ವಿದ್ಯುತ್ ಪೂರೈಕೆಯಾಗುತ್ತಿದೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದಾಗಿ ಇಂದಿನ ರೈತರು ಬೇಸತ್ತಿದ್ದಾರೆ. ಬೆಳೆಗಳಿಗೆ ಸರಿಯಾದ ಸಮಯಕ್ಕೆ ನೀರು ಹಾಯಿಸಲು ಸಾಧ್ಯವಾಗದೆ ಒಣಗುತ್ತಿರುವುದಕ್ಕೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಪರ್ಯಾಯ ಮಾರ್ಗವಾಗಿ ಪರಿಹಾರ ಕಂಡುಕೊಂಡಿರುವ ಈ ರೈತ ಸಹೋದರರು ಕೃಷಿ ಇಲಾಖೆಯಲ್ಲಿ ಸಬ್ಸಿಡಿ ಪಡೆದು ಸೋಲಾರ್ ಅಳವಡಿಸಿಕೊಂಡು ಸಮಸ್ಯೆಗೆ ಪರಿಹಾರ ಕಂಡುಕೊಂಡಿದ್ದಾರೆ.

ಬಿಇ ಪದವೀಧರನ ಕೃಷಿ ಪ್ರೀತಿ
ಮಹೇಶ್ ತಮ್ಮ ಪ್ರಕಾಶ್ ಬಿಇ ಪದವೀಧರರಾಗಿದ್ದು, ಇವರಿಗೆ ಇರುವ ಕೃಷಿ ಪ್ರೀತಿ ಮಣ್ಣಿನ ಮಗನನ್ನಾಗಿಸಿದೆ. ಮಹೇಶ್ ಪಿಯುಸಿ ಬಳಿಕ ಕೃಷಿಯಲ್ಲಿ ತೊಡಗಿದರು. ಆದರೆ ಪ್ರಕಾಶ್ ಬಿಇ ಓದಿದ್ದಾರೆ. ಬೆಂಗಳೂರಿನಲ್ಲಿ ಉದ್ಯೋಗ ಮಾಡುತ್ತಿದ್ದ ಇವರು ಸ್ವಯಂ ಉದ್ಯೋಗದತ್ತ ಆಸಕ್ತಿ ವಹಿಸಿದರು. ಈ ಸಂದರ್ಭದಲ್ಲಿ ಅಣ್ಣ ಮಹೇಶ್ ಗ್ರಾಮದಲ್ಲಿ ಮಾಡುತ್ತಿದ್ದ ಕೃಷಿಗೆ ಸಾಥ್ ಕೊಡಬೇಕೆಂದೆನಿಸಿ ಉದ್ಯೋಗ ತೆರೆದು ವ್ಯವಸಾಯಕ್ಕಿಳಿದಿದ್ದಾರೆ. ಹೀಗಾಗಿ ಬಿಇ ಪದವೀಧರನಿಗೆ ಈಗ ಬೆಳೆ ಬೆಳೆಯುವುದೇ ಕಾಯಕ. ಹಸು, ಕುರಿಗಳನ್ನು ಮೇಯಿಸುವುದು ಕೆಲಸದ ಭಾಗವಾಗಿದೆ. ಹೀಗೆ ವಿದ್ಯಾವಂತರೊಬ್ಬರು ಹಸು, ಕುರಿಗಳ ಸಾಕಣೆಯಲ್ಲಿ ತೊಡಗಿದ್ದಾರೆ. ಇದು ಈ ಹಿಂದೆ ಚೆನ್ನಾಗಿ ಓದದ ಮಕ್ಕಳನ್ನು ಹಸು, ಕುರಿ ಮೇಯಿಸಲು ಹಾಕುವುದಾಗಿ ಹೇಳುತ್ತಿದ್ದ ಪಾಲಕರ ಎಚ್ಚರಿಕೆಯ ಮಾತುಗಳನ್ನು ಅಣಕಿಸುತ್ತಿದೆ.

ಕೃಷಿಗೆ ಬರುವುದು ಸುಲಭ. ಬಂಡವಾಳ ಹಾಕಿದರೆ ನಾಳೆಯೇ ಬರುತ್ತದೆ ಎನ್ನುವ ಮನೋಭಾವದಿಂದ ಬರುವವರೇ ಹೆಚ್ಚು. ಆದರೆ ಇಲ್ಲಿ ಒಂದೇ ದಿನಕ್ಕೆ ಸಂಪಾದನೆಯಾಗಲ್ಲ. ಒಂದಲ್ಲ ಒಂದು ದಿನ ಹಣ ಬಂದೇ ಬರುತ್ತದೆ. ತಾಳ್ಮೆಯಿಂದ ಕಾಯಕ ಮಾಡಿದರೆ ಲ ಸಿಕ್ಕೇ ಸಿಗುತ್ತದೆ.
>ಮಹೇಶ್, ರೈತ, ಅಮಚವಾಡಿ, ಚಾಮರಾಜನಗರ

ಬಿಇ ಮಾಡಿ ಬೆಂಗಳೂರಿನಲ್ಲಿ ಕೆಲಸಕ್ಕೆ ಸೇರಿದ್ದೆ. ಮತ್ತೊಬ್ಬರ ಅಡಿಯಾಳಾಗಿ ದುಡಿಯುವುದಕ್ಕಿಂತ ಸ್ವಯಂ ಉದ್ಯೋಗ ಮಾಡಬೇಕೆಂದು ನಿರ್ಧರಿಸಿ ಉದ್ಯೋಗ ಬಿಟ್ಟೆ. ಈಗ ಕೃಷಿಯಲ್ಲಿ ತೊಡಗಿಕೊಂಡು ಆದಾಯ ಗಳಿಸುತ್ತಿದ್ದೇನೆ.

>ಪ್ರಕಾಶ್, ರೈತ, ಅಮಚವಾಡಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net