

ಕೊಳ್ಳೇಗಾಲ: ಕೊಳ್ಳೇಗಾಲವನ್ನು ಮುನ್ನಡೆಸಲು ಜನರಿಂದ ಆಯ್ಕೆಯಾಗಿರುವ ನೂತನ ಸಾರಥಿ ಮುಂದೆ ಹಲವು ಸವಾಲುಗಳಿವೆ. ಕ್ಷೇತ್ರದ ನೂತನ ಶಾಸಕ ಎ.ಆರ್.ಕೃಷ್ಣಮೂರ್ತಿಗೆ ಭಾರಿ ಮತಗಳು ಸಿಕ್ಕಿವೆ. ಜನರು ಬರೋಬ್ಬರಿ 1,08,363 ಮತಗಳನ್ನು ನೀಡಿ ಭರ್ಜರಿ ಗೆಲುವು ನೀಡಿದ್ದಾರೆ. ಮೊದಲ ದಿನದಿಂದಲೇ ಕೆಲಸ ಶುರು ಮಾಡಿ, ಇಟ್ಟಿರುವ ನಂಬಿಕೆಯನ್ನು ದುಪ್ಪಟ್ಟು ಮಾಡಿಕೊಳ್ಳಿ ಎನ್ನುವ ಸಂದೇಶವೂ ಅಡಗಿದೆ.
ಈ ಕ್ಷೇತ್ರ ಜಿಲ್ಲೆಯ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ರೇಷ್ಮೆನಗರಿ ಎನ್ನುವ ಹೆಸರು ದಿನ ಕಳೆದಂತೆ ಮಾಸಿ ಹೋಗಿದೆ. ಕಾನೂನು ಪಾಲನೆ, ಆಡಳಿತಾತ್ಮಕವಾಗಿ ಸುಧಾರಣೆಯಾಗಬೇಕಿದೆ. ಪ್ರಗತಿಪಥದಲ್ಲಿ ವೇಗವಾಗಿ ಮುನ್ನುಗ್ಗಬೇಕಿದ್ದು, ಇಂತಹ ಹಲವು ಸವಾಲುಗಳ ಕಡೆಗೆ ಬೆಳಕು ಚೆಲ್ಲಲಾಗಿದೆ.
ಜನಸಾಮಾನ್ಯರಿಗೆ ಒಳಿತಿಗಾಗಿ: ವಾಣಿಜ್ಯ ಕೇಂದ್ರವಾಗಿ ಬೆಳೆಯುತ್ತಿರುವ ಕೊಳ್ಳೇಗಾಲದ ಪರಿಪೂರ್ಣ ಅಭಿವೃದ್ಧಿ ಆಗಬೇಕಿದೆ. ಪಟ್ಟಣದ ಮಧ್ಯಭಾಗದಲ್ಲಿ ಹಾದು ಹೋಗಿರುವ ಸರ್ಕಾಟನ್ ನಾಲೆ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. 24*7 ಶುದ್ಧ ಕುಡಿಯುವ ನೀರು ಹಾಗೂ ಐದಾರು ವರ್ಷಗಳಿಂದ ಪೂರ್ಣಗೊಳ್ಳದ ಒಳಚರಂಡಿ ಕಾಮಗಾರಿ ಅಂತ್ಯವಾಗಬೇಕಿದೆ. ಈಗಾಗಲೇ ಸಾಕಷ್ಟು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ಡಾ.ಬಿ.ಅರ್.ಅಂಬೇಡ್ಕರ್ ಸಮುದಾಯ ಭವನ, ಗಡಿ ಭವನ, ನಾಯಕ ಜನಾಂಗದ ವಾಲ್ಮೀಕಿ ಭವನ, ಮುಸಲ್ಮಾನರ ಶಾದಿ ಮಹಲ್ ಕಟ್ಟಡಗಳು ಅಪೂರ್ಣ ಸ್ಥಿತಿಯಲ್ಲಿದ್ದು, ಅನುದಾನ ಜತೆ ಬದ್ಧತೆಯಿಂದ ಕಾರ್ಯೋನ್ಮುಖರಾದರೆ ಜನ ಸಾಮಾನ್ಯರಿಗೆ ಒಳಿತಾಗುತ್ತದೆ.
ರಸ್ತೆ ಅಗಲೀಕರಣ ಕೂಗು: ಜನರು ಅಭಿವೃದ್ಧಿ ಬಯಸಿದ್ದಾರೆ. ಪಟ್ಟಣದಲ್ಲಿ ಪ್ರಮುಖ ರಸ್ತೆಗಳು ಅಗಲೀಕರಣ ವಾಗಬೇಕಾಗಿದೆ. ಜನಸಂಖ್ಯೆ ಬೆಳೆಯುತ್ತಿದೆ. ವಾಣಿಜ್ಯ ಹಾಗೂ ಇನ್ನಿತರ ಚಟುವಟಿಕೆಗಾಗಿ ಸಾವಿರಾರು ಜನರು ಪ್ರತಿನಿತ್ಯ ಕೊಳ್ಳೇಗಾಲ ಟೌನ್‌ಗೆ ಆಗಮಿಸುತ್ತಾರೆ. ವಾಹನಗಳ ಓಡಾಟ ಹೆಚ್ಚಿದೆ. ಡಾ.ರಾಜ್‌ಕುಮಾರ್ ರಸ್ತೆ ಹಾಗೂ ಡಾ.ಬಿ.ಆರ್.ಅಂಬೇಡ್ಕರ್ ರಸ್ತೆ ಅಗಲೀಕರಣವಾಗದೆ ಜನಜಂಗುಳಿ ಹಾಗೂ ವಾಹನ ದಟ್ಟನೆಯಿಂದ ಜನರು ಹೈರಾಣರಾಗಿದ್ದಾರೆ. ರಸ್ತೆ ಅಗಲೀಕರಣದಿಂದ ಮಾತ್ರ ಸಮಸ್ಯೆಗೆ ಮುಕ್ತಿ ಸಾಧ್ಯ ಎಂಬುದು ಜನರ ಮಾತಾಗಿದೆ. ಕೆಲ ವರ್ಷದ ಹಿಂದೆ ರಸ್ತೆ ಅಗಲೀಕರಣ ವಿಚಾರ ಮುನ್ನೆಲೆಗೆ ಬಂದು ಗಡಿ ಗುರುತಿಸಲಾಗಿತ್ತು ಎಂದು ಹೇಳಲಾಗುತ್ತಿದೆ. ನಗರಸಭೆ ಅಧಿಕಾರಿಗಳ ಇಚ್ಛಾಶಕ್ತಿ ಹಾಗೂ ಈ ಗೋಜಿಗೆ ತಲೆ ಹಾಕದೇ ಜಾಣಕುರುಡು ಪ್ರದರ್ಶನ ಮಾಡುತ್ತಿದ್ದು, ಜನರ ನೆಮ್ಮದಿ ಕೆಡಿಸಿದೆ. ಈಗಲಾದರೂ ಬೆಳೆಯುತ್ತಿರುವ ಪಟ್ಟಣಕ್ಕೆ ಮೆರುಗು ನೀಡುವ ಪ್ರಮುಖ ರಸ್ತೆಗಳ ಅಗಲೀಕರಣ ಮಾಡುವರೆ ಎಆರ್‌ಕೆ ಎಂದು ಕಾದು ನೋಡಬೇಕಿದೆ.
ಕೆರೆಗಳ ಸಂರಕ್ಷಣೆ ಆದ್ಯತೆ
ಪಟ್ಟಣದ ಸುತ್ತಲ ಪ್ರದೇಶವನ್ನು ಕೆರೆಗಳು ಆವರಿಸಿಕೊಂಡಿದೆ. ಚಿಕ್ಕರಂಗನಾಥ ಕೆರೆ, ಪಾಪನ ಕೆರೆಯಲ್ಲಿ ಹೂಳು ಹಾಗೂ ತ್ಯಾಜ್ಯ ಸೇರಿಕೊಂಡು ಶೋಚನೀಯ ಸ್ಥಿತಿಗೆ ತಲುಪಿದೆ. ಇದರಿಂದ ಅಂತರ್ಜಲ ಮಟ್ಟ ಕುಸಿದು ರೈತರಿಗೆ ನೀರಿನ ಅಭಾವ ಆಗಬಹುದು. ಇನ್ನು ಕೊಂಗಳಕೆರೆ ಅಭಿವೃದ್ಧಿ ಕಾರ್ಯ ಪ್ರಗತಿಯಲ್ಲಿದ್ದು, ತ್ವರಿತವಾಗಿ ಪೂರ್ಣಗೊಳ್ಳಬೇಕಿದೆ. ಕೆರೆ ಒತ್ತುವರಿ ತೆರವು ಗೊಳಿಸಲು ಹಿಂದಿನಿಂದಲೂ ಹೋರಾಟ ನಡೆಸಲಾಗುತ್ತಿದೆ. ಇವೆಲ್ಲ ಕಾರಣದಿಂದ ಈ ಭಾಗದ ರೈತರ ವ್ಯವಸಾಯಕ್ಕೆ ಕೆರೆ ಅಭಿವೃದ್ಧಿಗೆ ಆದ್ಯತೆ ನೀಡಬೇಕಿದೆ.
ಹಕ್ಕುಪತ್ರ ಸಮಸ್ಯೆ
ಕೊಳ್ಳೇಗಾಲ ನಗರಸಭೆ ಎಂದು ಘೋಷಣೆಯಾಗಿ ಹಲವು ವರ್ಷಗಳೇ ಕಳೆದಿದೆ. 31 ವಾರ್ಡ್‌ಗಳಿವೆ. ಇದಕ್ಕೂ ಮುನ್ನ ಊರೊಟ್ಟಿನ ಕಾಲದಿಂದಲೂ ಇಲ್ಲಿ ಜನರು ವಾಸವಿದ್ದಾರೆ. ಆದರೆ, ಜನರಿಗೆ ತಾವು ವಾಸ ಮಾಡುವ ಮನೆಗಳಿಗೆ ದಾಖಲೆಗಳಿಲ್ಲ. ಹಕ್ಕು ಪತ್ರ, ಇ-ಸ್ವತ್ತುಗಳಿಲ್ಲದೆ ಸರ್ಕಾರದ ಯೋಜನೆಗಳಿಂದ ವಂಚಿತರಾಗಿದ್ದಾರೆ. ಇತ್ತೀಚೆಗಷ್ಟೆ ಮಾಜಿ ಶಾಸಕ ಎನ್.ಮಹೇಶ್ ಸಾರಥ್ಯದಲ್ಲಿ ನಗರಸಭೆ ಖಾತಾ ಆಂದೋಲನ ಕಾರ್ಯಕ್ರಮ ನಡೆಸಿ ಜನರ ಮನೆ ಮನೆಗೆ ತೆರಳಿ ಇ-ಸ್ವತ್ತು ನೀಡುವ ಭರವಸೆ ಹುಟ್ಟಿಸಿದರು. ಆದರೆ, ಕೆಲ ದಿನಗಳಲ್ಲೇ ಈ ಆಂದೋಲನ ಸ್ಥಗಿತಗೊಂಡು ಜನರನ್ನು ದಿಕ್ಕೆಡುವಂತೆ ಮಾಡಿದೆ.
ಆಟೋ ಚಾಲಕರ ಅಳಲು: ಪಟ್ಟಣದಲ್ಲಿ ಹತ್ತಾರು ಆಟೋ ಸಂಘ ಇದೆ. ಆದರೆ, ಆಟೋ ಚಾಲಕರಿಗೆ ಅಧಿಕೃತ ಆಟೋ ನಿಲ್ದಾಣ ವ್ಯವಸ್ಥೆಯಿಲ್ಲ. ನೆರಳಿನ ವ್ಯವಸ್ಥೆಯಿಲ್ಲ. ಮೂಲ ಸೌಕರ್ಯವಿಲ್ಲ ಎಂದು ಅಳಲು ತೋಡಿಕೊಳ್ಳುತ್ತಾರೆ. ಇತ್ತೀಚೆಗೆ ಉದ್ಘಾಟನೆಗೊಂಡ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಪಕ್ಕವೂ ಸುಸಜ್ಜಿತ ಆಟೋ ನಿಲ್ದಾಣಕ್ಕೆ ವ್ಯವಸ್ಥೆ ಕಲ್ಪಿಸದಿರುವುದು ಆಟೋ ಚಾಲಕರಿಗೆ ಬೇಸರ ಮೂಡಿಸಿದೆ.
ಸರ್ಕಾರಿ ಆಸ್ಪತ್ರೆ ಮೇಲ್ದರ್ಜೆ ಅತ್ಯಗತ್ಯ: ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಯಲ್ಲಿ ಮತ್ತಷ್ಟೂ ಸೌಲಭ್ಯಗಳು ಸಿಗಬೇಕು ಎನ್ನುವುದು ಜನರ ಬೇಡಿಕೆಯಾಗಿದೆ. ರೇಡಿಯೋಲಾಜಿಸ್ಟ್ ತಜ್ಞರು ಹಾಗೂ ಸ್ಕ್ಯಾನಿಂಗ್ ಯಂತ್ರ ಇಲ್ಲದೆ ಬಡ ರೋಗಿಗಳು ತತ್ತರಿಸುತ್ತಿದ್ದಾರೆ. ಖಾಸಗಿ ಸ್ಕ್ಯಾನಿಂಗ್‌ಗಳ ಸೇವೆ ಪಡೆಯಲು ಹೆಚ್ಚಿನ ಹಣ ಕಟ್ಟಲು ಸಾಧ್ಯವಾಗುತ್ತಿಲ್ಲ. ಹನೂರು ಹಾಗೂ ಕೊಳ್ಳೇಗಾಲ ಭಾಗದ ಜನರು ಆಸ್ಪತ್ರೆಯನ್ನು ಅವಲಂಬಿಸುವುದರಿಂದ ರಕ್ತನಿಧಿ ಕೇಂದ್ರ ಹಾಗೂ ಆಸ್ಪತ್ರೆಯಲ್ಲೇ ಕ್ಯಾಂಟೀನ್ ತೆರೆದರೆ ಅನುಕೂಲವಾಗಲಿದೆ.
ಕೈಗಾರಿಗೆ ಒತ್ತು: ವ್ಯಾಪಾರಿ ಕೇಂದ್ರವಾಗಿರುವ ಕೊಳ್ಳೇಗಾಲ ರೇಷ್ಮೆ ನಗರಿ ಎಂಬ ಖ್ಯಾತಿ ಪಡೆದಿದೆ. ಆದರೆ, ಹಂಪಾಪುರ ಹತ್ತಿರ ರೇಷ್ಮೆ ಕಾರ್ಖಾನೆ ಸ್ಥಗಿತಗೊಂಡಿದೆ. ಇದನ್ನು ಮರುಸ್ಥಾಪನೆ ಮಾಡಿದರೆ ಸ್ಥಳೀಯರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಕೈಗಾರಿಕೆಯ ಗಂಧ ಗಾಳಿಯೇ ಅರಿಯದ ಕೊಳ್ಳೇಗಾಲಕ್ಕೆ ಕೈಗಾರಿಕೆ ಸ್ಥಾಪನೆಗೆ ಒತ್ತು ನೀಡಬೇಕಿದೆ.
ಜನ ಸಂಪರ್ಕ ಸಭೆ: ಜನ ಸಾಮಾನ್ಯರ ಕಷ್ಟ ಹಾಗೂ ಬೇಡಿಕೆ ತಿಳಿಯಲು ತಿಂಗಳಿಗೊಮ್ಮೆಯಾದರೂ ಶಾಸಕರು ಕುಂದುಕೊರತೆ ಸಭೆ ನಡೆಸಿದರೆ ಸಾಕಷ್ಟು ಅಭಿವೃದ್ಧಿ ಕೆಲಸಕ್ಕೆ ಸಹಕಾರ ಆಗಬಹುದು. ಜನರ ನಾಡಿ ಮಿಡಿತ ತಿಳಿಯುತ್ತದೆ ಎಂಬುದು ಪ್ರಜ್ಞಾವಂತ ಮಾತು.
ನಿರೀಕ್ಷೆ ಇದೆ: ಎ.ಆರ್.ಕೃಷ್ಣಮೂರ್ತಿ ಗೆದ್ದು ಬೀಗಿದ ಬೆನ್ನಲೆ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರ ಹಿಡಿದಿರುವುದು ಜನರ ನಿರೀಕ್ಷೆಯನ್ನು ಇಮ್ಮಡಿಗೊಳಿಸಿದೆ. ಭರವಸೆ ನೀಡಿ ಜನರ ಆಶೀರ್ವಾದ ಪಡೆದ ಎ.ಆರ್.ಕೃಷ್ಣಮೂರ್ತಿ ಅವರಿಗೆ ತಮ್ಮ ಪಕ್ಷ ಅಧಿಕಾರ ಹಿಡಿದಿರುವುದು ನಿರೀಕ್ಷೆಗಳನ್ನು ಪೂರೈಸುವ ಶಕ್ತಿಯನ್ನು ಕೊಡಬಹುದಾಗಿದೆ.
ಜನರ ಆಶೀರ್ವಾದದಿಂದ ಗೆದ್ದಿದ್ದೇನೆ. ವಿಧಾನಸಭೆಯಲ್ಲಿ ಶಾಸಕ ಸ್ಥಾನದ ಪ್ರಮಾಣವಚನ ಸ್ವೀಕಾರ ಮಾಡುತ್ತೇನೆ. ನಂತರ ಕ್ಷೇತ್ರಕ್ಕೆ ಆಗಮಿಸಿ ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳ ಸಭೆ ಕರೆದು ಚರ್ಚಿಸುತ್ತೇನೆ. ಕ್ಷೇತ್ರಕ್ಕೆ ಬೇಕಾದ ಸಮಗ್ರ ಅಭಿವೃದ್ಧಿಗೆ ಶ್ರಮಿಸುತ್ತೇನೆ.
ಎ.ಆರ್.ಕೃಷ್ಣಮೂರ್ತಿ, ಶಾಸಕರು, ಕೊಳ್ಳೇಗಾಲ ವಿಧಾನಸಭಾ ಕ್ಷೇತ್ರ.