ಆತಂಕ ಮೂಡಿಸಿದ ಚಿರತೆ ಸಂಚಾರ

Published on

ಕೊಳ್ಳೇಗಾಲ: ಕಳೆದ ಮೂರು ದಿನಗಳಿಂದ ತಾಲೂಕಿನ ವಿವಿಧೆಡೆ ಚಿರತೆ ಪ್ರತ್ಯಕ್ಷವಾಗಿದ್ದು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಯಾಗಿದೆ.


ತಾಲೂಕಿನ ಕುಂತೂರು, ಟಗರಪುರ, ಮುಳ್ಳೂರು, ನರೀಪುರ, ಕೆಂಪನಪಾಳ್ಯ ಹೀಗೆ ಇನ್ನಿತರ ಗ್ರಾಮಗಳ ಹೊರವಲಯದ ಭತ್ತ ಹಾಗೂ ಕಬ್ಬಿನ ಜಮೀನುಗಳಲ್ಲಿ ಚಿರತೆ ಸಂಚಾರ ಪ್ರಾರಂಭವಾಗಿದೆ. ಇದನ್ನು ನೋಡಿದ ಜನರು ಗಾಬರಿಗೊಂಡಿದ್ದಾರೆ.


ಕೆಂಪನಪಾಳ್ಯ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಶನಿವಾರ ಚಿರತೆ ಕಾಣಿಸಿಕೊಂಡಿರುವುದಾಗಿ ರೈತ ನಂಜಪ್ಪ ಹೇಳಿದರು. ಇದರಿಂದ ರೈತರು ಹೊಲ ಗದ್ದೆಗಳಿಗೆ ಹೋಗಲು ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈ ಬಗ್ಗೆ ಕೊಳ್ಳೇಗಾಲ ಬಫರ್ ವಲಯದ ಆರ್‌ಎಫ್‌ಒ ಭರತ್ ಸುದ್ದಿಗಾರರೊಂದಿಗೆ ಮಾತನಾಡಿ, ಕಳೆದ ಮೂರು ದಿನಗಳಿಂದ ಚಿರತೆ ಕಾಣಿಸಿಕೊಳ್ಳುತ್ತಿರುವುದು ನಿಜ. ಈಗಾಗಲೇ ರೈತರು ಹಾಗೂ ಗ್ರಾಮಸ್ಥರು ಮೌಖಿಕವಾಗಿ ನೀಡಿದ್ದ ದೂರಿನ ಮೇರೆಗೆ ಪರಿಶೀಲನೆ ನಡೆಸಲಾಗಿದೆ. ಕೆಲ ಕಡೆ ಚಿರತೆ ಹೆಜ್ಜೆ ಗುರುತು ಪತ್ತೆಯಾಗಿದೆ ಎಂದರು.


ಟಗರಪುರ, ಮುಳ್ಳೂರು, ನರೀಪುರ ಭಾಗದ ಗ್ರಾಪಂ ಅಧಿಕಾರಿಗಳ ಜತೆ ಮಾತನಾಡಿದ್ದೇವೆ. ವಾಹನ ಮೂಲಕ ಅರಣ್ಯ ಇಲಾಖೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತದೆ. ಜನರು ಒಬ್ಬರೇ ಜಮೀನು ಕಡೆಗೆ ಹೋಗುವುದು ಹಾಗೂ ರಾತ್ರಿ ವೇಳೆ ಮನೆಯಿಂದ ಹೊರಬರುವ ಕೆಲಸ ಮಾಡಬಾರದು. ಸಾಧ್ಯವಾದರೆ ಗುಂಪಿನಲ್ಲಿ ಸಂಚರಿಸಬೇಕು ಎಂದು ಜಾಗೃತಿ ಮೂಡಿಸಲಾಗುವುದು. ದಿನಕ್ಕೊಂದು ಗ್ರಾಮದ ಬಳಿ ಚಿರತೆ ಕಾಣಿಸಿಕೊಳ್ಳುತ್ತಿದೆ ಎಂಬ ಮಾಹಿತಿ ಬರುತ್ತಿದೆ. ಆದ್ದರಿಂದ ಚಿರತೆ ಚಲನವಲನ ಗುರುತಿಸಿ ಸೆರೆಗೆ ಬೋನು ಇರಿಸಲಾಗುವುದು. ಚಿರತೆ ಎಲ್ಲಿಯೇ ಕಂಡರೂ ಅರಣ್ಯ ಸಂಚಾರಿ ತಂಡದ 1026 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಎಂದರು.


ಇತ್ತೀಚೆಗೆ ನರಸೀಪುರ ಬಾಗದ ಗ್ರಾಮವೊಂದರಲ್ಲಿ ಯುವತಿ ಮೇಲೆ ಚಿರತೆ ದಾಳಿ ಮಾಡಿದ್ದ ಪ್ರಕರಣವು ಈ ಭಾಗದ ಜನರ ಮೇಲೆ ಗಭೀರವಾಗಿ ಪರಿಣಾಮ ಬೀರಿದ್ದು, ಕೊಳ್ಳೇಗಾಲ ಭಾಗದಲ್ಲಿ ಚಿರತೆ ಕಾಣಿಸಿಕೊಳ್ಳುತ್ತಿರುವುದರಿಂದ ಜಮೀನುಗಳಿಗೆ ತೆರಳಲು ಭಯ ಪಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net