

ಚಾಮರಾಜನಗರ: ಅಂತಾರಾಷ್ಟ್ರೀಯ ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿರುವ ‘ಕೋಳಿ ಎಸ್ರು’ ಚಲನಚಿತ್ರ ಚಾಮರಾಜನಗರದ ಭಾಷಾ ಸೊಗಡಿನಿಂದ ತುಂಬಿಕೊಂಡು ಘಮಘಮಿಸುತ್ತಿದೆ. ಜಿಲ್ಲೆಯ ರಂಗಭೂಮಿ ಕಲಾವಿದರು ಅಭಿನಯದ ಮೂಲಕ ಚಿತ್ರದ ರುಚಿ ಹೆಚ್ಚಿಸಿದ್ದಾರೆ.
ಮುಂದಿನ ತಿಂಗಳು ಆಸ್ಟ್ರೇಲಿಯಾದ ಮೇಲ್ಬೋರ್ನ್‌ನಲ್ಲಿ ನಡೆಯುವ ಭಾರತೀಯ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವ ಚಂಪಾಶೆಟ್ಟಿ ನಿರ್ದೇಶನದ ಸಿನಿಮಾ ‘ಕೋಳಿ ಎಸ್ರು’. ಪ್ರತಿಭಾವಂತ ನಟಿ ಅಕ್ಷತಾ ಪಾಂಡವಪುರ ಮುಖ್ಯಭೂಮಿಕೆಯ ಈ ಸಿನಿಮಾ ಯುಎಸ್‌ಎ, ಜರ್ಮನಿ, ಕೆನಡಾ, ಔರಂಗಬಾದ್, ಕೇರಳ, ಬೆಂಗಳೂರು, ಮಂಗಳೂರು ಫಿಲ್ಮ್ ೆಸ್ಟಿವಲ್‌ಗಳಲ್ಲಿ ಪ್ರದರ್ಶನ ಕಂಡಿದೆ. ನಿರ್ದೇಶಕಿ ಚಂಪಾಶೆಟ್ಟಿ ಮತ್ತು ನಟಿ ಅಕ್ಷತಾ ಪಾಂಡವಪುರ, ಬಾಲನಟಿ ಅಪೇಕ್ಷಾ ಚೋರನಹಳ್ಳಿಗೆ ಪ್ರತಿಷ್ಠಿತ ಪ್ರಶಸ್ತಿಗಳು ಸಿಕ್ಕಿವೆ.
ಕನ್ನಡ ಚಿತ್ರರಂಗದ ಕೀರ್ತಿ ಹೆಚ್ಚಿಸುತ್ತಿರುವ ಈ ಸಿನಿಮಾದಲ್ಲಿ ಜಿಲ್ಲೆಯ ರಂಗಭೂಮಿ ಕಲಾವಿದರಾದ ಚಿತ್ರಾ ವೆಂಕಟರಾಜು, ದಾಕ್ಷಾಯಿಣಿ, ಶಿವಶಂಕರ್(ಚಟ್ಟು), ಕಿರಣ್ ಗಿರ್ಗಿ, ಶೇಖರ್ ದೇಶವಳ್ಳಿ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಮನೆ ಯಜಮಾನಿ ಪಾತ್ರಕ್ಕೆ ಚಿತ್ರಾ ವೆಂಕಟರಾಜು, ಇವರ ತಮ್ಮನಾಗಿ ಕಿರಣ್ ಗಿರ್ಗಿ ಜೀವತುಂಬಿದ್ದಾರೆ. ಚಿತ್ರದ ನಾಯಕಿ ಹುಚ್ಚೀರಿ (ಅಕ್ಷತಾ ಪಾಂಡವಪುರ) ಸ್ನೇಹಿತೆ ಚಿಕ್ಕೀರಿ ಪಾತ್ರದಲ್ಲಿ ದಾಕ್ಷಾಯಿಣಿ, ಫ್ಲೋರ್‌ಮಿಲ್ ಮಾಲೀಕರಾಗಿ ಶೇಖರ್ ದೇಶವಳ್ಳಿ ಬಣ್ಣ ಹಚ್ಚಿದ್ದಾರೆ. ಗೆಂಡೆಕಾಳನ ಸ್ನೇಹಿತನಾಗಿ ನಟಿಸಿರುವ ಶಿವಶಂಕರ್(ಚಟ್ಟು) ಚಿತ್ರದ ಸಂಭಾಷಣೆಗೆ ಚಾಮರಾಜನಗರ ಜಿಲ್ಲೆಯ ಸೊಗಡು ತುಂಬಲು ಸಹಾಯ ಮಾಡಿದ್ದಾರೆ. ಜತೆಗೆ ಸಹಾಯಕ ನಿರ್ದೇಶಕನ ಹೊಣೆಯನ್ನೂ ಹೊತ್ತಿದ್ದರು.
ನಮ್ಮೂರ ಭಾಷೆಯ ಸೊಗಡು: ಏಪ್ರಾನ್ ಪ್ರೊಡಕ್ಷನ್ಸ್ ಸಂಸ್ಥೆಯು ಖ್ಯಾತ ಸಾಹಿತಿ ಕಾ.ತಾ.ಚಿಕ್ಕಣ್ಣ ಅವರ ‘ಹುಚ್ಚೇರಿಯ ಎಸರಿನ ಪ್ರಸಂಗ’ ಕಥೆಯಾಧಾರಿತ ಕೋಳಿ ಎಸ್ರು ಚಿತ್ರವನ್ನು ನಿರ್ಮಿಸಿದೆ. ಚಾಮರಾಜನಗರದ ಭಾಷೆಯ ಸೊಗಡು ಇಷ್ಟಪಟ್ಟು ಈ ಭಾಗದಲ್ಲಿ ಚಿತ್ರೀಕರಣ ಮಾಡಲು ಚಿತ್ರತಂಡ ತೀರ್ಮಾನಿಸಿ, ಇಲ್ಲಿನ ಕಲಾವಿದರಿಗೆ ಅವಕಾಶ ನೀಡಲಾಯಿತು. ರಂಗಕರ್ಮಿ, ಚಿತ್ರನಟ ಮಂಡ್ಯ ರಮೇಶ್, ಲೇಖಕಿ ಕುಸುಮಾ ಆಯರನಹಳ್ಳಿ ಕಲಾವಿದರ ಆಡಿಷನ್ ಮಾಡಿ ಆಯ್ಕೆ ಮಾಡಿದರು. ಜಾನಪದ ಕಲಾವಿದ ಸಿ.ಎಂ.ನರಸಿಂಹಮೂರ್ತಿ, ಕುಮಾರ್, ಬಸವರಾಜು, ಚಿತ್ರೀಕರಣಕ್ಕೆ ಸಹಕಾರ ನೀಡಿದರು. ರಂಗ ಕಲಾವಿದ ಶಿವಶಂಕರ್ ಚಟ್ಟು ಚಿತ್ರದ ಸಂಭಾಷಣೆಗೆ ಚಾಮರಾಜನಗರದ ಸೊಗಬು ತುಂಬಿದರು ಎಂದು ನಿರ್ದೇಶಕಿ ಚಂಪಾಶೆಟ್ಟಿ ‘ವಿಜಯವಾಣಿ’ಗೆ ತಿಳಿಸಿದ್ದಾರೆ.
ಕೋಳಿ ಎಸ್ರು ಚಿತ್ರದಲ್ಲಿ ಚಾಮರಾಜನಗರ ಶೈಲಿಯ ಭಾಷೆ ಬಳಸಬೇಕೆಂದು ನಿರ್ಧರಿಸಿದ್ದೆವು. ಇಲ್ಲಿಂದ ನಮ್ಮ ಜರ್ನಿ ಶುರುವಾಯಿತು. ದೇಸಿ ಸೊಗಡು ತುಂಬಿರುವ ಭಾಷೆ ನಮ್ಮ ಚಿತ್ರದ ಹೈಲೈಟ್ಸ್‌ಗಳಲ್ಲಿ ಒಂದು. ಇಲ್ಲಿನ ಕಲಾವಿದರು ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ಉತ್ತಮವಾಗಿ ಅಭಿನಯಿಸಿದ್ದಾರೆ. ಇದಕ್ಕೆ ಪ್ರಶಂಸೆಗಳು ವ್ಯಕ್ತವಾಗುತ್ತಿದೆ. ಇನ್ನೂ ಹಲವು ೆಸ್ಟಿವಲ್‌ಗಳಿಗೆ ಚಿತ್ರವನ್ನು ಕಳುಹಿಸಬೇಕಿರುವುದರಿಂದ ಎರಡು ತಿಂಗಳ ನಂತರ ಸಿನಿಮಾ ಬಿಡುಗಡೆ ಮಾಡಲಾಗುವುದು.-ಚಂಪಾಶೆಟ್ಟಿ, ಕೋಳಿ ಎಸ್ರು ಚಿತ್ರದ ನಿರ್ದೇಶಕಿ ಕೋಳಿ ಎಸ್ರು ಚಿತ್ರ ಎಲ್ಲೆಡೆ ಮೆಚ್ಚುಗೆ ಪಡೆಯುತ್ತಿದೆ. ನಿಷ್ಕಲ್ಮಶ ಮನಸ್ಸುಗಳು ಒಗ್ಗೂಡಿ ಮಾಡಿದ ಚಿತ್ರವಿದೆ. ಈ ಸಿನಿಮಾದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದು ನನ್ನ ಬದುಕಿನ ದೊಡ್ಡ ಅವಕಾಶ.-ಶಿವಶಂಕರ್(ಚಟ್ಟು), ಸಹಾಯಕ ನಿರ್ದೇಶಕ, ಚಾಮರಾಜನಗರ