

ಚಾಮರಾಜನಗರ: ಕನ್ನಡ ಚಿತ್ರರಂಗದಲ್ಲಿ ಜೋರಾಗಿ ಸದ್ದು ಮಾಡುತ್ತಿರುವ ಚಿತ್ರನಟ ಕಿಚ್ಚ ಸುದೀಪ್ ಹಾಗೂ ಕೆಲವು ನಿರ್ಮಾಪಕರ ನಡುವಿನ ಕದನ ಚಾಮರಾಜನಗರದಲ್ಲಿ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ.
ನಗರದ ಪಟ್ಟಣ ಪೊಲೀಸ್ ಠಾಣೆಯಲ್ಲಿ ಆಲ್ ಇಂಡಿಯಾ ಬಾದ್‌ಷಾ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಬುಧವಾರ ಇಬ್ಬರು ನಿರ್ಮಾಪಕರ ವಿರುದ್ಧ ದೂರು ನೀಡಿದ್ದಾರೆ. ಚಿತ್ರನಟ ಕಿಚ್ಚ ಸುದೀಪ್ ವಿರುದ್ಧ ನಿರ್ಮಾಪಕ ಎಂ.ಎನ್.ಕುಮಾರ್ ಹಾಗೂ ಎಂ.ಎನ್.ಸುರೇಶ್ ಇಲ್ಲಸಲ್ಲದ ಆರೋಪಗಳನ್ನು ಮಾಡುತ್ತ, ಅವರಿಗೆ ಮಾನಹಾನಿ ಮಾಡುತ್ತಿದ್ದಾರೆ. ಅಲ್ಲದೆ, ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಸುದ್ದಿಗಳನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿ, ನಿರ್ಮಾಪಕರ ಮೇಲೆ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಿದ್ದಾರೆ.
ನಿರ್ಮಾಪಕರು ಹಾಗೂ ಸುದೀಪ್ ನಡುವಿನ ಆರೋಪ ಮತ್ತು ಪ್ರತ್ಯಾರೋಪದ ವಿಚಾರವಾಗಿ ಚಾಮರಾಜನಗರದಲ್ಲಿ ಕಿಚ್ಚ ಸುದೀಪ್ ಅಭಿಮಾನಿಗಳು ಜು. 11ರಂದು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದ್ದರು. ಈ ವಿಚಾರ ಇಷ್ಟಕ್ಕೆ ತಣ್ಣಗಾಗದೆ ಕಿಚ್ಚ ಸುದೀಪ್ ಫ್ಯಾನ್ಸ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ.
ದೂರಿನಲ್ಲೇನಿದೆ?:
ನಿರ್ಮಾಪಕ ಎಂ.ಎನ್.ಕುಮಾರ್ ಮತ್ತು ಎಂ.ಎನ್.ಸುರೇಶ್ ಜು. 1ರಂದು ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣದಲ್ಲಿ ಕಿಚ್ಚ ಸುದೀಪ್ ವಿರುದ್ಧ ವಿವಾದಾತ್ಮಕ ಹಾಗೂ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಸುದೀಪ್ ಅವರಿಗೆ ಕೋಟಿಗಟ್ಟಲೆ ಹಣ ನೀಡಿದ್ದು, ನಮ್ಮ ನಿರ್ಮಾಣದ ಸಿನಿಮಾಗಳಲ್ಲಿ ನಟನೆ ಮಾಡಲು ಮುಂದಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಆದರೆ ಈ ಆರೋಪಗಳು ದುರುದ್ದೇಶದಿಂದ ಕೂಡಿದ್ದು, ನ್ಯಾಯಯುತವಾಗಿ ಸಲ್ಲದ ಹಣವನ್ನು ಕಟ್ಟುವಂತೆ ಸುದೀಪ್ ಮೇಲೆ ವಿನಾಕಾರಣ ಒತ್ತಡ ಏರಿದ್ದಾರೆ. ಸುದೀಪ್ ತಮ್ಮ ಪ್ರತಿಭೆಯಿಂದ ಕನ್ನಡ ಚಿತ್ರರಂಗದಲ್ಲಿ ಗಳಿಸಿರುವ ಖ್ಯಾತಿ ಹಾಗೂ ಪರೋಪಕಾರಿ ಚಟುವಟಿಕೆಗಳಿಗೆ ದಕ್ಕೆ ಉಂಟುಮಾಡಲು ಹೀಗೆ ಮಾಡಿರುತ್ತಾರೆ. ಆರೋಪಿಗಳು ಯಾವುದೇ ಸಾಕ್ಷಿಯನ್ನು ಪ್ರಸ್ತುತಪಡಿಸದೆ, ಸಾಮಾಜಿಕ ಜಾಲತಾಣಗಳಲ್ಲಿ ಸುದೀಪ್ ಮೇಲೆ ಒತ್ತಡ ಏರುವ, ಎದುರಿಸುವ ಹಾಗೂ ಅವರ ಅಭಿಮಾನಿಗಳಲ್ಲಿ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡಿರುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ.