

ಚಾಮರಾಜನಗರ: ಚಾಮರಾಜನಗರ ತಾಲೂಕು 7ನೇ ಕನ್ನಡ ಸಾಹಿತ್ಯ ಸಮ್ಮೇಳನ ಮಾ.2ರಂದು ನಿಗದಿಯಾಗಿದ್ದು, ಇದರ ಯಶಸ್ವಿಗಾಗಿ ತಹಸೀಲ್ದಾರ್ ಬಸವರಾಜು ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.
ನಗರದ ತಹಸೀಲ್ದಾರ್ ಕಚೇರಿಯಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಪೂರ್ವಭಾವಿ ಸಭೆಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಆಯೋಜನೆ ರೂಪುರೇಷೆಗಳ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಮಾ.2ರಂದು ಬೆಳಗ್ಗೆ ನಗರದ ಜಿಲ್ಲಾಡಳಿತ ಭವನದಲ್ಲಿರುವ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಾಹಿತ್ಯ ಸಮ್ಮೇಳನ ಕಾರ್ಯಕ್ರಮಕ್ಕೆ ಸರ್ವ ಸಿದ್ಧತೆ ಕೈಗೊಳ್ಳಲು ತೀರ್ಮಾನಿಸಲಾಯಿತು.
ರಂಗಮಂದಿರದ ಆವರಣದಲ್ಲಿ ಧ್ವಜಾರೋಹಣ ನೆರವೇರಿಸಲು ಹಾಗೂ ಪೇಟೆ ಪ್ರೈಮರಿ ಶಾಲಾ ಆವರಣದಿಂದ ಅಲಂಕೃತ ಎತ್ತಿನಗಾಡಿ ಮೂಲಕ ಜಾನಪದ ಕಲಾ ತಂಡಗಳೊಡನೆ ಜೈ ಭುವನೇಶ್ವರಿ ಭಾವಚಿತ್ರ ಮೆರವಣಿಗೆ ಮತ್ತು ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷ ಸಾಹಿತಿ ಕೊತ್ತಲವಾಡಿ ಶಿವಕುಮಾರ್ ಅವರನ್ನು ಸಾಹಿತ್ಯ ಸಮ್ಮೇಳನದ ವೇದಿಕೆಗೆ ಮೆರವಣಿಗೆ ಮೂಲಕ ಕರೆತರಲು ಸಭೆ ನಿರ್ಣಯಿಸಿತು. ತಹಸೀಲ್ದಾರ್ ಬಸವರಾಜು ಮಾತನಾಡಿ, ಚಾಮರಾಜನಗರ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಅಧ್ಯಕ್ಷರಾಗಿರುವ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರ ಮಾರ್ಗದರ್ಶನ ಹಾಗೂ ಸಲಹೆಯೊಂದಿಗೆ ಈಗಾಗಲೇ ಸಮ್ಮೇಳನದ ಆಯೋಜನೆಗೆ ತೀರ್ಮಾನಿಸಲಾಗಿದೆ. ಶಾಸಕರ ನಿರ್ದೇಶನ ಅನುಸಾರ ಸಿದ್ದತೆಗಳನ್ನು ಕೈಗೊಳ್ಳಲಾಗುತ್ತಿದೆ. ಕಾರ್ಯಕ್ರಮ ಯಶಸ್ವಿಗೊಳಿಸಲು ಎಲ್ಲರು ಸಹಕರಿಸಬೇಕು ಎಂದರು.
ಸಮ್ಮೇಳನದಂದು ವೇದಿಕೆ ಅಲಂಕಾರ, ಮೆರವಣಿಗೆಗೆ ಕಲಾ ತಂಡಗಳ ನಿಯೋಜನೆ, ಕುಡಿಯುವ ನೀರು, ಇನ್ನಿತರ ವ್ಯವಸ್ಥೆಗೆ ಎಲ್ಲ ಸಿದ್ಧತೆಗಳನ್ನು ಅಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಬೇಕು. ನಗರದ ಪ್ರಮುಖ ಬೀದಿಗಳನ್ನು ತಳಿರು-ತೋರಣಗಳಿಂದ ಅಲಂಕರಿಸಬೇಕು. ಸ್ವಚ್ಛತೆಗೆ ವಿಶೇಷ ಗಮನಹರಿಸಬೇಕು ಎಂದು ತಹಸೀಲ್ದಾರ್ ಬಸವರಾಜು ಸೂಚಿಸಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಎಂ.ಶೈಲಕುಮಾರ್ ಹಾಗೂ ಚಾಮರಾಜನಗರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸುರೇಶ್ ಎನ್.ಋಗ್ವೇದಿ ಸಾಹಿತ್ಯ ಸಮ್ಮೇಳನದ ಆಯೋಜನೆ ಸಂಬಂಧ ಮಾತನಾಡಿದರು.
ಕನ್ನಡ ಪರ ಸಂಘಟನೆಗಳ ಮುಖಂಡರಾದ ಚಾ.ರಂ.ಶ್ರೀನಿವಾಸಗೌಡ, ಜಿ.ಬಂಗಾರು, ಇತರ ಮುಖಂಡರು ಸಾಹಿತ್ಯ ಸಮ್ಮೇಳನ ಕಾರ್ಯಕ್ರಮ ಏರ್ಪಾಡು ಕುರಿತು ಸಲಹೆ ನೀಡಿದರು. ಕನ್ನಡ ಸಾಹಿತ್ಯ ಪರಿಷತ್ತಿನ ಆರ್.ವಿ. ಮಹದೇವಪ್ಪ, ಎಸ್. ನಾಗರಾಜು, ವೆಂಕಟೇಶ್‌ಮೂರ್ತಿ (ಬಾಬು), ಕಲೆ ನಟರಾಜು, ಮಹದೇವಪ್ಪ, ಉದ್ಯಮಿ ಶಿವಕುಮಾರ್, ಕ್ಷೇತ್ರ ಶಿಕ್ಷಣಾಕಾರಿ ಸೋಮಣ್ಣೇಗೌಡ, ವಿಷಯ ಪರಿವೀಕ್ಷಕ ಶಂಕರ್, ತಾಲೂಕು ಕೃಷಿ ಅಕಾರಿ ರೂಪಾ, ಇತರ ಅಕಾರಿಗಳು, ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.