

ಚಾಮರಾಜನಗರ: ಜಿಲ್ಲೆಯ ಪ್ರಸಿದ್ಧ ಯಾತ್ರಾಸ್ಥಳ ಬಿಳಿಗಿರಿರಂಗನಬೆಟ್ಟಕ್ಕೆ ಸಂಪರ್ಕಿಸುವ ಕೆ.ಗುಡಿ ರಸ್ತೆ ಗುಂಡಿ ಬಿದ್ದಿದ್ದು, ಪ್ರವಾಸಿಗರ ಹಿತದೃಷ್ಟಿಯಿಂದ ರಸ್ತೆ ದುರಸ್ತಿಗೆ ಜಿಲ್ಲಾಡಳಿತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಬೇಕು ಎಂದು ಆಗ್ರಹಿಸಿ ಕೋಡಿಮೋಳೆ ಭಗತ್‌ಸಿಂಗ್ ಯುವಸೇನೆ ಪದಾಧಿಕಾರಿಗಳು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರಿಗೆ ಮನವಿ ಸಲ್ಲಿಸಿದರು.
ಬಿಳಿಗಿರಿರಂಗನಾಥಸ್ವಾಮಿ ಬೆಟ್ಟ ಹುಲಿ ಸಂರಕ್ಷಿತ ಅರಣ್ಯ ಪ್ರದೇಶವಾಗಿದ್ದು, ಈಚಿನ ದಿನಗಳಲ್ಲಿ ಇಲ್ಲಿಗೆ ಬರುವ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಆದರೆ, ಜವಾಹರ್ ನವೋದಯ ವಿದ್ಯಾಲಯದಿಂದ ಕೆ.ಗುಡಿವರೆಗಿನ ಆಯ್ದ ಕೆಲವು ಕಿರಿದಾದ ತಿರುವುಗಳಲ್ಲಿ ರಸ್ತೆ ಗುಂಡಿ ಬಿದ್ದಿದ್ದು, ಪ್ರವಾಸಿಗರ ಸಂಚಾರಕ್ಕೆ ತೊಂದರೆಯಾಗಿದೆ. ಕೂಡಲೇ ಗುಂಡಿ ಬಿದ್ದಿರುವ ರಸ್ತೆಯ ದುರಸ್ತಿಗೆ ಸಂಬಂಧಪಟ್ಟ ಇಲಾಖೆಯವರು ಮುಂದಾಗಬೇಕು. ಅಪಘಾತ ವಲಯದ ಸೂಚನಾಲಕ ಅಳವಡಿಸಬೇಕು. ತಿರುವುಗಳಲ್ಲಿ ತಡೆಗೋಡೆ ನಿರ್ಮಿಸಲು ಕ್ರಮವಹಿಸುವಂತೆ ಒತ್ತಾಯಿಸಿದರು. ಪದಾಧಿಕಾರಿಗಳಾದ ಕಾಂತರಾಜು, ಮಲ್ಲೇಶ್, ಮಣಿಕಂಠ ಇತರರು ಇದ್ದರು.