ವೈದ್ಯಕೀಯ ಕ್ಷೇತ್ರದಲ್ಲಿ ಪರಿಣತಿ ಅತ್ಯಗತ್ಯ

18raju1
Published on

ಚಾಮರಾಜನಗರ: ವೈದ್ಯಕೀಯ ಕ್ಷೇತ್ರದಲ್ಲಿ ವಿಶೇಷ ಪರಿಣತಿ ಅತ್ಯಗತ್ಯ ಎಂದು ಚಾ.ನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಡಾ.ಗಿರೀಶ್ ವಿ.ಪಾಟೀಲ್ ಸಲಹೆ ನೀಡಿದರು.

ನಗರದ ಜೆಎಸ್‌ಎಸ್ ಶಿಕ್ಷಣ ಸಂಸ್ಥೆಗಳ ಆವರಣದಲ್ಲಿ ಜೆಎಸ್‌ಎಸ್ ಸ್ಕೂಲ್ ಆಫ್ ನರ್ಸಿಂಗ್ ವತಿಯಿಂದ ಗುರುವಾರ ಆಯೋಜಿಸಿದ್ದ ಜಿಎನ್‌ಎಂ ವಿದ್ಯಾರ್ಥಿಗಳ ಜ್ಯೋತಿ ಬೆಳಗುವಿಕೆ ಮತ್ತು ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ ಉದ್ಘಾಟಿಸಿ ಮಾತನಾಡಿದರು.

ಜೆಎಸ್‌ಎಸ್ ಸಂಸ್ಥೆಯಲ್ಲಿ ಒಟ್ಟು 1 ಲಕ್ಷಕ್ಕಿಂತಲೂ ಅಧಿಕ ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಹೊರ ದೇಶ, ರಾಜ್ಯಗಳಲ್ಲೂ ಸಂಸ್ಥೆಯ ಸಾಕಷ್ಟು ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ, ಶಿಸ್ತು ಸಂಯಮಕ್ಕೆ ಸಂಸ್ಥೆ ಹೆಸರಾಗಿದೆ. ವಿದ್ಯಾರ್ಥಿಗಳು ತಮ್ಮ ಶಿಕ್ಷಣ ಮುಗಿಸಿ ಹೋದ ನಂತರವೂ ಬೇರೆ ಸಂಸ್ಥೆಗಳು ಗುರುತಿಸುವಂತಹ ಶಿಕ್ಷಣ ಜೆಎಸ್‌ಎಸ್ ನೀಡುತ್ತಿದೆ ಎಂದು ಶ್ಲಾಘಿಸಿದರು. ಇತ್ತೀಚೆಗೆ ವೈದ್ಯಕೀಯ ಕ್ಷೇತ್ರದತ್ತ ಯುವಕ, ಯುವತಿಯರು ಹೆಚ್ಚು ಆಸಕ್ತಿ ತೋರುತ್ತಿದ್ದಾರೆ. ಯಾವುದೇ ಒಂದು ವಿಷಯದಲ್ಲಿ ಆಸಕ್ತಿ ವಹಿಸಿ ಪರಿಣತಿ ಗಳಿಸಿದರೆ ಮುಂದಿನ ದಿನಗಳಲ್ಲಿ ಉತ್ತಮ ಅವಕಾಶ ದೊರೆಯುತ್ತದೆ ಎಂದರು.

ಸಿಮ್ಸ್ ಆಸ್ಪತ್ರೆಯ ಶುಶ್ರೂಷಕ ಅಧೀಕ್ಷಕಿ ಎನ್.ಗೀತಾ ಮಾತನಾಡಿ, ಸದಾ ನಗುಮುಖದಿಂದ ದಾದಿಯರು ರೋಗಿಗಳ ಸೇವೆ ಮಾಡಬೇಕು. ರೋಗಿಗಳು ವೈದ್ಯರು ಹಾಗೂ ಶುಶ್ರೂಷಕರನ್ನೇ ನಮ್ಮ ಪಾಲಿನ ದೇವರು ಎಂದು ಭಾವಿಸಿರುತ್ತಾರೆ. ಈ ಜಗತ್ತಿಗೆ ಕೋವಿಡ್ ಎಂಬ ಮಹಾಮಾರಿ ಬಂದು ಶುಶ್ರೂಷಕರ ಮಹತ್ವವನ್ನು ಪ್ರತಿಯೊಬ್ಬರಿಗೂ ಮನವರಿಕೆ ಮಾಡಿಕೊಟ್ಟಿದೆ ಎಂದು ಹೇಳಿದರು.


ಜೆಎಸ್‌ಎಸ್ ವೈದ್ಯಕೀಯ ಶಿಕ್ಷಣ ವಿಭಾಗದ ನಿರ್ದೇಶಕ ಡಾ.ಮಹೇಶ್ ಮಾತನಾಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಾದ ಎನ್.ದಿವ್ಯಾ, ಸತ್ಯಮೂರ್ತಿ, ಕೆ.ಬಿ.ಮಂಜುಳಾ ಮತ್ತು ರೇಖಾ ಅವರಿಗೆ ಪುರಸ್ಕಾರ ನೀಡಿ ಗೌರವಿಸಲಾಯಿತು. ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲ ಜಿ.ವಿನಯ್ ಕುಮಾರ್ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net