

ಚಾಮರಾಜನಗರ: ತಾಲೂಕಿನ ಹರದನಹಳ್ಳಿ, ಬಂಡಿಗೆರೆ ಗ್ರಾಮದಲ್ಲಿ ಜರುಗುವ ಕುಂಟಮ್ಮ, ಕಾಳಮ್ಮ ಕೊಂಡೋತ್ಸವಕ್ಕೆ ಸೌದೆ ಸಂಗ್ರಹಿಸುವ ಮೂಲಕ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ.
ತಾಲೂಕಿನ ಹರದನಹಳ್ಳಿ, ಬಂಡಿಗೆರೆ, ಛತ್ರ ಹೊಸೂರು, ಮರುಗದಕೆರೆ, ಬೋಮುಖ ಹಾಗೂ ಇನ್ನಿತರ ಗ್ರಾಮಗಳಿಂದ ಸುಮಾರು 50 ಕ್ಕಿಂತಲೂ ಹೆಚ್ಚು ಆಟೋ, ಟ್ರ್ಯಾಕ್ಟರ್, ಟಾಟಾ ಎಸಿ, ಎತ್ತಿನಗಾಡಿಗಳಲ್ಲಿ ಹುಣಸೆ ಸೌದೆಯನ್ನು ಜನರು ತುಂಬಿಕೊಂಡು ಮೆರವಣಿಗೆ ನಡೆಸುವ ಮೂಲಕ ಕೊಂಡೋತ್ಸಕ್ಕೆ ಬಳಕೆ ಮಾಡುವ ಸೌಧೆಗೆ ಪೂಜೆ ಸಲ್ಲಿಸಿದರು. ಮೆರವಣಿಗೆಯಲ್ಲಿ ಗ್ರಾಮಸ್ಥರು ಹಾಗೂ ಯುವಕರು ಭಾಗವಹಿಸಿ ಕುಣಿದು ಕುಪ್ಪಳಿಸಿದರು. ಸೌದೆಯನ್ನು ತುಂಬಿದ್ದ ಗಾಡಿಗಳನ್ನು ಹೂಗಳಿಂದ ಸಿಂಗರಿಸಲಾಗಿತ್ತು.
ಹರದನಹಳ್ಳಿ, ಬಂಡಿಗೆರೆ ಗ್ರಾಮದ ಶ್ರೀ ಮಂಟೇಸ್ವಾಮಿ ದೇವಸ್ಥಾನದ ಮುಂಭಾಗ ಜೂನ್ 12, 13 ರಂದು ಜರುಗುವ ಕುಂಟಮ್ಮ, ಕಾಳಮ್ಮ ಕೊಂಡೋತ್ಸವಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಪ್ರತಿವರ್ಷದಂತೆಯೇ ಈ ವರ್ಷವೂ ಕೊಂಡೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ ಎಂದು ಬಂಡಿಗೆರೆ ಗ್ರಾಮದ ಯಜಮಾನ ಸಿದ್ದರಾಜು ವಿಜಯವಾಣಿಗೆ ಮಾಹಿತಿ ನೀಡಿದರು.