ವಕೀಲನ ಮೇಲೆ ಹಲ್ಲೆಗೆ ಖಂಡನೆ

10CHN01- ENDUSHEKAR PRESS MEET
Published on

ಚಾಮರಾಜನಗರ: ದಕ್ಷಿಣ ಕನ್ನಡ ಜಿಲ್ಲೆಯ ಕುಂಜಾಲುಕಟ್ಟೆಯಲ್ಲಿ ವಕೀಲ ಕುಲದೀಪಶೆಟ್ಟಿ ಮೇಲೆ ಪಿಎಸ್‌ಐ ಸುತೇಶ್ ಹಲ್ಲೆ ಮಾಡಿರುವುದು ಖಂಡನೀಯ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಆಕ್ರೋಶ ವ್ಯಕ್ತಪಡಿಸಿದರು.


ದೇಶದ ಎಲ್ಲೆಡೆ ವಕೀಲರ ಮೇಲೆ ನಿರಂತರವಾಗಿ ಹಲ್ಲೆ ನಡೆಯುತ್ತಲೇ ಇದ್ದು, ನ್ಯಾಯವಾದಿಗಳ ಮೇಲಿನ ದೌರ್ಜನ್ಯ ತಡೆಗೆ ವಕೀಲರ ಸಂರಕ್ಷಣಾ ಕಾಯ್ದೆಯನ್ನು ಜಾರಿಗೆ ತರಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.


ವೈದ್ಯರ ರಕ್ಷಣೆಗಾಗಿ ಕಾಯ್ದೆ ಜಾರಿಗೆ ತರಲಾಗಿದೆ. ವೈದ್ಯರು ರೋಗಿಗಳ ಜೀವ ಉಳಿಸುವಂತೆಯೇ ವಕೀಲರು ಕಕ್ಷಿದಾರರ ಜೀವನ ಉಳಿಸುತ್ತಾರೆ. ಪೊಲೀಸರು ಮತ್ತು ವಕೀಲರು ಸಮಾಜದ ಕಣ್ಣುಗಳು. ಆದರೆ ಇತ್ತೀಚಿನ ದಿನಗಳಲ್ಲಿ ಪೊಲೀಸರು ವಕೀಲರ ಮೇಲೆ ದಬ್ಬಾಳಿಕೆ ಮಾಡುತ್ತಿರುವುದು ಸರಿಯಲ್ಲ ಎಂದು ಕಿಡಿಕಾರಿದರು.


ಕುಂಜಾಲುಕಟ್ಟೆಯ ವಕೀಲ ಕುಲದೀಪಶೆಟ್ಟಿ ಮೇಲೆ ಹಲ್ಲೆ ಮಾಡಿದ ಪಿಎಸ್‌ಐ ಸುತೇಶ್ ಅನ್ನು ವರ್ಗಾವಣೆ ಮಾಡಿದರೆ ಸಾಲದು ಅಮಾನತು ಮಾಡಬೇಕು. ಕೆಲವು ದಿನಗಳ ಹಿಂದೆ ಬೇರೆ ಬೇರೆ ಕಡೆಗಳಲ್ಲಿ ವಕೀಲರಾದ ಅರುಣ್, ಶರಣ ಬಸವಗದ್ದಡಗಿ ಮೇಲೆ ಪೊಲೀಸರು ಹಲ್ಲೆ ಮಾಡಿದ್ದಾರೆ. ವಕೀಲರು ಉದ್ದೇಶಪೂರ್ವಕವಾಗಿ ಗುರಿಯಾಗುತ್ತಿದ್ದಾರೆ ಎಂದು ಆರೋಪಿಸಿದರು.


ಸುಪ್ರೀಂಕೋರ್ಟ್ ಪ್ರಕರಣವೊಂದರಲ್ಲಿ ವಕೀಲರನ್ನು ಬಂಧಿಸಬೇಕೆಂದರೆ ಸಿಆರ್‌ಪಿಸಿ ಸೆಕ್ಷನ್ 41ರ ಪ್ರಕಾರ ನೋಟೀಸ್ ಜಾರಿ ಮಾಡಬೇಕು. ಸಂಘದ ಅಧ್ಯಕ್ಷರಿಗೂ ತಿಳಿಸಬೇಕೆಂದು ನಿರ್ದೇಶನ ನೀಡಿದೆ. ಪೊಲೀಸರು ಇದನ್ನು ಪಾಲನೆ ಮಾಡಬೇಕು. ಸಮಾಜಘಾತುಕರು, ಭ್ರಷ್ಟ ರಾಜಕಾರಣಿಗಳನ್ನು ಬಂಧಿಸಲಾಗದ ಪೊಲೀಸರಿಗೆ ವಕೀಲರೇ ಬೇಕಾ ಎಂದು ಪ್ರಶ್ನಿಸಿದರು.


ಪೊಲೀಸರು ರಾಜಕಾರಣಿಗಳ ಗುಲಾಮರಾಗಿದ್ದಾರೆ. ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ಮಾಡುತ್ತಿದ್ದಾರೆ. ನ್ಯಾಯಾಲಯಕ್ಕೆ ಬರುವ ಕಕ್ಷಿದಾರರು ಪೊಲೀಸರು ಕೇಳುವ ಲಂಚದ ವಿಚಾರಗಳನ್ನು ಹೇಳಿ ನಮ್ಮೊಂದಿಗೆ ಅಸಹಾಯಕತೆ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ದೂರು ನೀಡಲು ತಿಳಿಸಿದರೆ ಮುಂದಿನ ದಿನಗಳಲ್ಲಿ ಪೊಲೀಸರಿಂದ ತೊಂದರೆಯಾಗುತ್ತದೆಂಬ ಭಯಕ್ಕೆ ಕಕ್ಷಿದಾರರು ಹೆದರುತ್ತಾರೆ ಎಂದು ಹೇಳಿದರು. ಜಿಲ್ಲಾ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಕೆ.ವಿರೂಪಾಕ್ಷ, ಜಂಟಿ ಕಾರ್ಯದರ್ಶಿ ಮಲ್ಲು, ಖಜಾಂಚಿ ಗಿರೀಶ್ ಹಾಜರಿದ್ದರು.


ಹೆಲ್ಮೆಟ್ ಧರಿಸದೆ ದ್ವಿಚಕ್ರ ವಾಹನ ಚಲಾಯಿಸುವವರನ್ನು ಅಡ್ಡಗಟ್ಟಬಾರದೆಂದು ಆದೇಶ ಹೊರಡಿಸಲಾಗಿದೆ. ವಾಹನ ಸಂಖ್ಯೆ ದಾಖಲಿಸಿಕೊಂಡು ದಂಡ ಹಾಕಬೇಕು. ಆದರೂ ಪೊಲೀಸರು ವಾಹನಗಳನ್ನು ಹಾಕಿ ದಂಡ ವಿಧಿಸುತ್ತಿದ್ದಾರೆ. ಹಾಸನದಲ್ಲಿ ಪೊಲೀಸರು ಹೆಲ್ಮೆಟ್ ಧರಿಸದೆ ವಾಹನ ಚಲಾಯಿಸಿದರೆ ಅಮಾನತು ಮಾಡುವುದಾಗಿ ಅಲ್ಲಿನ ಎಸ್ಪಿ ಆದೇಶಿಸಿದ್ದಾರೆ. ಅದೇ ರೀತಿ ಜಿಲ್ಲೆಯಲ್ಲೂ ಆದೇಶ ಹೊರಡಿಸಬೇಕು.

ಉಮ್ಮತ್ತೂರು ಇಂದುಶೇಖರ್, ಅಧ್ಯಕ್ಷ ಜಿಲ್ಲಾ ವಕೀಲರ ಸಂಘ, ಚಾಮರಾಜನಗರ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net