ಹೆರಿಗೆ ಆಸ್ಪತ್ರೆಯಲ್ಲಿ ಕುಡುಕರ ಹಾವಳಿ

24raju1
Published on

ಚಾಮರಾಜನಗರ: ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಿತ್ಯವೂ ಕುಡುಕರ ಹಾವಳಿ ಹೆಚ್ಚಾಗಿದೆ.

ನಗರದ ಹೃದಯ ಭಾಗದಲ್ಲಿರುವ ಕಟ್ಟಡದಿಂದ ಯಡಬೆಟ್ಟದ ನೂತನ ಕಟ್ಟಡಕ್ಕೆ ಜಿಲ್ಲಾಸ್ಪತ್ರೆ ಸ್ಥಳಾಂತರಗೊಂಡಿದ್ದು, ಹಳೆಯ ಕಟ್ಟಡದಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ, ತುರ್ತು ಚಿಕಿತ್ಸಾ ಘಟಕ ಕಾರ್ಯನಿರ್ವಹಿಸುತ್ತಿವೆ. ಈ ಸ್ಥಳದಲ್ಲಿ ಕುಡುಕರ ಉಪಟಳ ಅಧಿಕವಾಗಿದೆ. ರಾತ್ರಿ ವೇಳೆ ಕುಡಿದು ಬಂದು ಆಸ್ಪತ್ರೆಯ ಆವರಣದಲ್ಲಿ ಮಲಗುವ ಕುಡುಕರು ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಮಂಗಳವಾರ ರಾತ್ರಿ ಮೊದಲನೇ ಮಹಡಿಯಲ್ಲಿ ಸಾರ್ವಜನಿಕರೊಂದಿಗೆ ಕುಡುಕನೊಬ್ಬ ಜಗಳವಾಡಿದ್ದು, ಇಂತಹ ಘಟನೆಗಳು ನಿತ್ಯವೂ ಮರುಕಳಿಸುತ್ತಲೇ ಇವೆ.

ಆಸ್ಪತ್ರೆಗೆ ಗರ್ಭಿಣಿಯರು ಬರುತ್ತಾರೆ. ಅವರೊಂದಿಗೆ ಸಾಕಷ್ಟು ಸಂಖ್ಯೆಯಲ್ಲಿ ಸಂಬಂಧಿಕರು ಹಾಗೂ ಸಾರ್ವಜನಿಕರು ಭೇಟಿ ನೀಡುತ್ತಾರೆ. ಹೊರಾಂಗಣದಲ್ಲಿ ಕೂರಲು ಸೂಕ್ತ ಆಸನ ವ್ಯವಸ್ಥೆ ಇಲ್ಲ. ರಾತ್ರಿ ವೇಳೆ ಎಲ್ಲೆಂದರಲ್ಲಿ ಸಾರ್ವಜನಿಕರು ಮಲಗುತ್ತಾರೆ. ಇವರ ನಡುವೆ ಕುಡುಕರು ಹೆರಿಗೆ ಆಸ್ಪತ್ರೆಯನ್ನೇ ಮಲಗಲು ಮನೆ ಮಾಡಿಕೊಂಡಿದ್ದು, ನಿತ್ಯವೂ ಇಲ್ಲೇ ಮಲಗುತ್ತಾರೆ. ನಡೆದಾಡುವ ಮಾರ್ಗದಲ್ಲಿಯೇ ಮಲಗಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುತ್ತಾರೆ. ಪ್ರಶ್ನಿಸಲು ಹೋಗುವ ಸಾರ್ವಜನಿಕರ ಮೇಲೆಯೇ ಜಗಳಕ್ಕೆ ಬರುತ್ತಾರೆ. ಈ ಕುರಿತು ಸಂಬಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಮೂಕಹಳ್ಳಿ ಗ್ರಾಮದ ನಾಗೇಶ್ ಒತ್ತಾಯಿಸಿದ್ದಾರೆ.

ಸೆಕ್ಯುರಿಟಿಗಳ ನಿರ್ಲಕ್ಷ್ಯ:
ಆಸ್ಪತ್ರೆಯಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳು ಕೆಲಸ ಮಾಡುತ್ತಿದ್ದಾರೆ. ಇವರ ನಿರ್ಲಕ್ಷ್ಯದಿಂದಲೇ ಕುಡುಕರ ಹಾವಳಿ ಹೆಚ್ಚಾಗಿದೆ. ಕುಡುಕರು ರಾತ್ರಿ ಸಮಯದಲ್ಲಿ ಆಸ್ಪತ್ರೆಯಲ್ಲಿ ಮಲಗಲು ಬಂದಾಗ ಅವರಿಗೆ ಅವಕಾಶ ನೀಡಬಾರದು. ಆದರೆ ಅಸ್ಪತ್ರೆಯ ಒಳಗೆ ಯಾರು ಬರುತ್ತಾರೆ, ಯಾರು ಹೋಗುತ್ತಾರೆ ಎಂಬುದನ್ನು ಸೆಕ್ಯೂರಿಟಿಗಳು ಹಾಗೂ ಸಿಬ್ಬಂದಿ ಸರಿಯಾಗಿ ನೋಡಿಕೊಳ್ಳುವುದಿಲ್ಲ. ಕೆಲವು ಸೆಕ್ಯುರಿಟಿಗಳು ಕುಡುಕರನ್ನು ಗದರಿಸಲು ಹೋದಾಗ ಅವರ ಮೇಲೆಯೂ ಜಗಳಕ್ಕೆ ಬಂದ ಉದಾಹರಣೆಗಳಿವೆ. ಹೀಗಾಗಿ ಒಂದಷ್ಟು ದಿನ ರಾತ್ರಿಯ ವೇಳೆ ಪೋಲೀಸರನ್ನು ನೇಮಿಸುವುದು ಉತ್ತಮ ಎಂದು ಹೆಸರು ಹೇಳಲು ಇಚ್ಛಿಸದ ಸಿಬ್ಬಂದಿಯೊಬ್ಬರು ವಿಜಯವಾಣಿಗೆ ಮಾಹಿತಿ ನೀಡಿದರು.

ಅನೈರ್ಮಲ್ಯ ತಾಂಡವ:
ಆಸ್ಪತ್ರೆಯಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ. ಶೌಚಗೃಹಗಳು ಗಬ್ಬು ನಾರುತ್ತಿದ್ದು, ಸೂಕ್ತ ನಿರ್ವಹಣೆ ಇಲ್ಲದೆ ಅಶುಚಿತ್ವದಿಂದ ಕೂಡಿದೆ. ಬಾತ್‌ರೂಂಗಳಿಗೆ ಬಾಗಿಲುಗಳೇ ಇಲ್ಲದಿರುವುದು ಆಸ್ಪತ್ರೆ ಅವ್ಯವಸ್ಥೆಯನ್ನು ತೋರಿಸುತ್ತದೆ. ಲ್‌ಟಿ ಕೂಡ ಕೆಟ್ಟು ನಿಂತಿದ್ದು, ವೃದ್ಧರು, ರೋಗಿಗಳು ಪರದಾಡುವಂತಾಗಿದೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಗಮನಹರಿಸಿ ಸ್ವಚ್ಛತೆಗೆ ಆದ್ಯತೆ ನೀಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಆಸ್ಪತ್ರೆಯ ಸಮೀಪವೇ ಮದ್ಯದಂಗಡಿಗಳು ಇರುವುದರಿಂದ ಕುಡುಕರು ರಾತ್ರಿ ಹೊತ್ತು ಇಲ್ಲಿ ಬಂದು ಮಲಗುತ್ತಾರೆ. ಇದರಿಂದ ಸಾರ್ವಜನಿಕರು ಹಾಗೂ ಗರ್ಭಿಣಿಯರಿಗೆ ಕಿರಿಕಿರಿ ಉಂಟಾಗುತ್ತದೆ. ಸಾಕಷ್ಟು ಬಾರಿ ಇದರಿಂದಾಗಿ ಸಣ್ಣಪುಟ್ಟ ಗಲಾಟೆಗಳು ನಡೆದಿವೆ. ಅಧಿಕಾರಿಗಳು ಆದಷ್ಟು ಬೇಗ ಈ ಸಮಸ್ಯೆ ಬಗೆಹರಿಸಬೇಕು.
ಎಂ.ಎಸ್.ನಾಗೇಶ್, ಸಾರ್ವಜನಿಕ

ಜಿಲ್ಲಾಸ್ಪತ್ರೆಯ ಎದುರೇ ಮದ್ಯದಂಗಡಿ ಇರುವುದರಿಂದ ಸಮಸ್ಯೆಯಾಗುತ್ತಿದೆ. ಈ ಸಂಬಂಧ ಹಿಂದಿನ ಜಿಲ್ಲಾಧಿಕಾರಿ ಗಮನಕ್ಕೂ ತಂದಿದ್ದೇವೆ. ಆಸ್ಪತ್ರೆಯಲ್ಲಿ ಸೆಕ್ಯುರಿಟಿ ಹೆಚ್ಚಿಸಬೇಕಿದೆ. ಶೀಘ್ರದಲ್ಲೇ ಈ ಕುರಿತು ಕ್ರಮ ಕೈಗೊಳ್ಳಲಾಗುವುದು.
ಡಾ.ಕೃಷ್ಣಪ್ರಸಾದ್, ಜಿಲ್ಲಾ ಶಸಚಿಕಿತ್ಸಕರು, ಚಾ.ನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net