

ಹನೂರು: ಕುರಿ ಸಾಕಣೆದಾರರಿಗೆ ಸರ್ಕಾರದಿಂದ ಸಿಗುವ ಸವಲತ್ತುಗಳನ್ನು ಸಮರ್ಪಕವಾಗಿ ಒದಗಿಸುವುದರ ಜತೆಗೆ ಸಂಘದ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಕರ್ನಾಟಕ ಕುರಿ ಮಹಾಮಂಡಲದ ನಿರ್ದೇಶಕ ಪಂಡಿತ್‌ರಾವ್ ಚಿದ್ರಿ ತಿಳಿಸಿದರು.
ಪಟ್ಟಣದ ಕುರಿ ಮತ್ತು ಉಣ್ಣೆ ಉತ್ಪಾದಕರ ಸಂಘದಲ್ಲಿ ಶನಿವಾರ ಕುರಿ ಸಾಕಣೆದಾರರಿಗೆ ಜಂತುಹುಳು ನಾಶಕ ಔಷಧವನ್ನು ವಿತರಿಸಿ ಮಾತನಾಡಿದ ಅವರು, ಪಶು ಸಂಗೋಪನೆ ಇಲಾಖೆ ಕುರಿಗಳ ಔಷಧಗಳನ್ನು ಪಶು ಅಸ್ಪತ್ರೆಗೆ ಒದಗಿಸುತ್ತಿದೆ. ಆದರೆ ಸಮರ್ಪಕವಾಗಿ ಕುರಿ ಸಾಕಣೆದಾರರಿಗೆ ತಲುಪುತ್ತಿಲ್ಲ. ಇತ್ತ ಕುರಿಗಳು ಅಕಸ್ಮಿಕ ಮರಣ ಹೊಂದಿದಲ್ಲಿ ಅನುಗ್ರಹ ಯೋಜನೆಯಡಿ ಸರ್ಕಾರದಿಂದ 5 ಸಾವಿರ ರೂ. ಪರಿಹಾರ ನೀಡಲಾಗುತ್ತಿದೆ. ಆದರೆ ಮೃತಪಟ್ಟ ಕುರಿಗಳ ಮರಣೋತ್ತರ ಪರೀಕ್ಷೆ ನಡೆಸಲು ಅಗತ್ಯ ವೈದ್ಯರ ಕೊರತೆ ಇದೆ. ಇದರಿಂದ ರೈತರು ತೊಂದರೆ ಅನುಭವಿಸುವಂತಾಗಿದೆ. ಈ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತಂದು ಅಗತ್ಯ ಕ್ರಮವಹಿಸಲಾಗುವುದು ಎಂದು ತಿಳಿಸಿದರು.
ಬೀದರ್ ಜಿಪಂ ಮಾಜಿ ಅಧ್ಯಕ್ಷೆ ಗೀತಾ, ಹನೂರು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘದ ಕಾರ್ಯದರ್ಶಿ ಬಿ. ಪ್ರಕಾಶ್, ಲೊಕ್ಕನಹಳ್ಳಿಯ ಬಸವರಾಜು, ಮೋಡಳ್ಳಿಯ ಶ್ರೀಕಂಠ, ಸಂಘದ ನಿರ್ದೇಶಕ ಕೃಷ್ಣಯ್ಯ ಇನ್ನಿತರರು ಇದ್ದರು.