ಕಾನೂನು ಸುವ್ಯವಸ್ಥೆ ಪಾಲನೆಗೆ ಆದ್ಯತೆ ನೀಡಲಿ

27 HANUR 2
Published on

ಹನೂರು: ರಾತ್ರಿ ವೇಳೆ ಸಿಬ್ಬಂದಿ ಗಸ್ತನ್ನು ಹೆಚ್ಚಿಸಿ, ಬಸ್ ನಿಲ್ದಾಣದ ುತ್ತಮುತ್ತ ಅಡ್ಡಾದಿಡ್ಡಿಯಾಗಿ ನಿಲ್ಲುವ ವಾಹನಗಳಿಗೆ ಕಡಿವಾಣ ಹಾಕಿ, ಶಾಲಾ ಕಾಲೇಜಿನ ಮುಂಭಾಗದಲ್ಲಿ ಯುವಕರು ಗುಂಪುಗೂಡುವುದನ್ನು ತಡೆಗಟ್ಟಿ…

ಇದು ಪಟ್ಟಣದ ಪೊಲೀಸ್ ಠಾಣೆಯಲ್ಲಿ ಶನಿವಾರ ಆಯೋಜಿಸಿದ್ದ ಪರಿಶಿಷ್ಟ ಅತಿ ಸಮುದಾಯದ ಮುಖಂಡರ ಕುಂದು ಕೊರತೆ ಸಭೆಯಲ್ಲಿ ಕೇಳಿ ಬಂದ ಪ್ರಮುಖ ದೂರುಗಳಿವು. ಈ ವೇಳೆ ಸಮುದಾಯದ ಮುಖಂಡರು ಮಾತನಾಡಿ, ಪಟ್ಟಣದ ಕ್ರಿಸ್ತರಾಜ ಶಾಲೆ ಬಿಡುವ ವೇಳೆ ಹೆಚ್ಚಿನ ವಿದ್ಯಾರ್ಥಿಗಳು ಬಂಡಳ್ಳಿ ಮುಖ್ಯ ರಸ್ತೆಯ ಮೂಲಕ ತೆರಳುತ್ತಾರೆ. ಆದರೆ ಈ ವೇಳೆ ಬೈಕ್ ಸೇರಿದಂತೆ ಹೆಚ್ಚಿನ ವಾಹನಗಳ ಸಂಚಾರವಿರುತ್ತದೆ. ಇದರಿಂದ ವಿದ್ಯಾರ್ಥಿಗಳು ಸಂಚರಿಸಲು ಕಿರಿಕಿರಿ ಅನುಭವಿಸುವಂತಾಗಿದೆ. ಆದ್ದರಿಂದ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಬೇಕು ಎಂದು ಒತ್ತಾಯಿಸಿದರು.

ಕಳ್ಳತನ ಪ್ರಕರಣಗಳು ಆಗಾಗ್ಗೆ ನಡೆಯುತ್ತಿರುವುದರಿಂದ ರಾತ್ರಿ ವೇಳೆ ಸಿಬ್ಬಂದಿ ಗಸ್ತನ್ನು ಹೆಚ್ಚಿಸಬೇಕು. ಗೌತಮ್ ಶಾಲೆಯ ಮುಂಭಾಗ ಕೆಲ ಯುವಕರು ಗುಂಪು ಗೂಡುತ್ತಿದ್ದು, ಅನವಶ್ಯಕ ಚರ್ಚೆಯಲ್ಲಿ ತೊಡಗುತ್ತಿದ್ದಾರೆ. ಇದರಿಂದ ತುಂಬ ತೊಂದರೆಯಾಗುತ್ತಿದೆ. ಹಾಗಾಗಿ ಈ ಬಗ್ಗೆ ಅಗತ್ಯ ಕ್ರಮವಹಿಸಬೇಕು ಎಂದು ಕೋರಿದರು.

ಜತೆಗೆ ಪಟ್ಟಣದ ಖಾಸಗಿ ಬಸ್ ನಿಲ್ದಾಣದ ಬಳಿ ಬಸ್‌ಗಳು ಅಡ್ಡಾದಿಡ್ಡಿಯಾಗಿ ನಿಲ್ಲುತ್ತಿವೆ. ಬೈಕ್‌ಗಳನ್ನು ಎಲ್ಲೆಂದರಲ್ಲಿ ಗಂಟೆಗಟ್ಟಲೇ ನಿಲ್ಲಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರ ಸಂಚಾರಕ್ಕೆ ತೊಡಕಾಗಿದೆಯಲ್ಲದೆ ಟ್ರಾಫಿಕ್ ಜಾಮ್‌ಗೆ ಕಾರಣವಾಗಿದೆ. ಆದ್ದರಿಂದ ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು.

ಮನವಿ ಆಲಿಸಿದ ಬಳಿಕ ಇನ್ಸ್‌ಪೆಕ್ಟರ್ ಶಶಿಕುಮಾರ್ ಮಾತನಾಡಿ, ರಾತ್ರಿ ವೇಳೆ ಸಿಬ್ಬಂದಿ ಗಸ್ತನ್ನು ಹೆಚ್ಚಿಸಲಾಗುವುದು. ಯುವಕರು ಗುಂಪುಗೂಡುವುದನ್ನು ತಡೆಗಟ್ಟಲಾಗುವುದು. ವಾಹನಗಳ ಅಡ್ಡಾದಿಡ್ಡಿಗೆ ಕಡಿವಾಣ ಹಾಕಲಾಗುವುದು, ಶಾಲಾ- ಕಾಲೇಜು ಬಳಿ ಸಿಬ್ಬಂದಿ ನಿಯೋಜಿಸುವುದರ ಮೂಲಕ ಕಾನೂನು ಶಾಂತಿ, ಸುವ್ಯವಸ್ಥತೆ ಕಾಪಾಡಲು ಸದಾ ನಿಮ್ಮೊಂದಿಗಿರುತ್ತೇವೆ. ಹಾಗಾಗಿ ನಿಮ್ಮೆಲ್ಲರ ಸಹಕಾರ ಅತ್ಯಗತ್ಯ. ಸಮಸ್ಯೆಗಳಿದ್ದಲ್ಲಿ ಖುದ್ದಾಗಿ ಠಾಣೆಗೆ ಆಗಮಿಸಿ ಅಥವಾ 112 ಸಂಖ್ಯೆಗೆ ಕರೆ ಮಾಡಿ ಬಗೆಹರಿಸಿಕೊಳ್ಳಬಹುದು ಎಂದು ಸಲಹೆ ಭರವಸೆ ನೀಡಿದರು.

ಸಭೆಯಲ್ಲಿ ಪಪಂ ಸದಸ್ಯ ಸಂಪತ್‌ಕುಮಾರ್, ಮಾಜಿ ಸದಸ್ಯ ಬಸವರಾಜು, ಹಿರಿಯ ಮುಖಂಡರಾದ ನಿಂಗರಾಜು, ಚಿಕ್ಕಣ್ಣ, ನಾಗಮಹೇಶ್, ಸಿದ್ದರಾಜು, ರಾಜಪ್ಪ, ಮಹೇಶ್ ಹಾಗೂ ಇನ್ನಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net