ಅವ್ಯವಹಾರ ತನಿಖೆಗೆ ಒತ್ತಾಯ

16 HANUR 3
Published on

ಹನೂರು: ಕಳೆದ 9 ತಿಂಗಳ ಅವಧಿಯಲ್ಲಿ ಖರ್ಚಾಗಿರುವ ಕೆಲವು ಬಾಬ್ತಿನಲ್ಲಿ ಅವ್ಯವಹಾರವಾಗಿದೆ. ಆದ್ದರಿಂದ ಈ ಬಗ್ಗೆ ತನಿಖೆ ನಡೆಸುವಂತೆ ಪಟ್ಟಣ ಪಂಚಾಯಿತಿ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು.


ಪಟ್ಟಣ ಪಂಚಾಯಿತಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಅಧ್ಯಕ್ಷೆ ಚಂದ್ರಮ್ಮ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಸದಸ್ಯರು ಮಾತನಾಡಿ, ಪಪಂನಲ್ಲಿ 2022ರ ಜನವರಿಯಿಂದ ಸೆಪ್ಟೆಂಬರ್‌ತನಕ ಆಸ್ತಿ ತೆರಿಗೆ ಖಾತೆ, ಸಾಮಾನ್ಯ ಖಾತೆ, ನೀರು ಹಾಗೂ ಅಂಗಡಿ ಮಳಿಗೆ ಖಾತೆಯಿಂದ ವಿವಿಧ ಕೆಲಸ ಕಾರ್ಯಗಳಿಗಾಗಿ ಹಣವನ್ನು ಖರ್ಚು ಮಾಡಲಾಗಿದೆ. ಅದರಲ್ಲಿ ಬ್ಲೀಚಿಂಗ್ ಪೌಡರ್ ಖರೀದಿ, ಇನ್ನಿತರ ವಸ್ತುಗಳ ಖರೀದಿ ಸೇರಿದಂತೆ ಕೈಗೊಂಡಿರುವ ಕೆಲಸ ಕಾರ್ಯಗಳಲ್ಲಿ ಹಣದ ದುರುಪಯೋಗವಾಗಿದೆ. ಇನ್ನು ಕೆಲವು ಕೆಲಸಗಳೇ ಆಗಿಲ್ಲ. ಆದರೆ ಬಿಲ್ ಮಾತ್ರ ಪಾವತಿಯಾಗಿದೆ. ಇದು ಎಷ್ಟರ ಮಟ್ಟಿಗೆ ಸರಿ? ಆದ್ದರಿಂದ ಈ ಬಗ್ಗೆ ತನಿಖೆಯಾಗಬೇಕು ಎಂದು ಎಲ್ಲ ಸದಸ್ಯರು ಒತ್ತಾಯಿಸಿದರು. ಈ ಬಗ್ಗೆ ಅಗತ್ಯ ಕ್ರಮವಹಿಸಲಾಗುವುದು ಎಂದು ಪಪಂ ಮುಖ್ಯಾಧಿಕಾರಿ ಮೂರ್ತಿ ಎಲ್ಲರನ್ನು ಸಮಾಧಾನಗೊಳಿಸಿದರು.


ಪವಿತ್ರಾ ಮಾತನಾಡಿ, ಫೆಬ್ರವರಿ ತಿಂಗಳಿನಲ್ಲಿ ವಾರ್ಡಿನಲ್ಲಿ ಗಿಡಗಂಟಿಗಳನ್ನು ತೆರವುಗೊಳಿಸಲು ಜೆಸಿಬಿ ಯಂತ್ರವನ್ನು ಒಂದೂವರೆ ಗಂಟೆ ಮಾತ್ರ ಬಳಕೆ ಮಾಡಿಕೊಳ್ಳಲಾಗಿದೆ. ಆದರೆ ಬಾಡಿಗೆ 15,300 ರೂ. ಪಾವತಿ ಮಾಡಲಾಗಿದೆ. ಇದರಲ್ಲಿ ಹಣ ದುರಪಯೋಗವಾಗಿದೆ. ಆದ್ದರಿಂದ ಈ ಬಗ್ಗೆ ಕ್ರಮವಹಿಸಬೇಕು ಎಂದು ಮನವಿ ಮಾಡಿದರು.


ಸಂಪತ್‌ಕುಮಾರ್ ಮಾತನಾಡಿ, ಸಾಮಾನ್ಯ ನಿಧಿಯಲ್ಲಿ 11ನೇ ವಾರ್ಡಿನ ಅಭಿವೃದ್ಧಿ ಕಾರ್ಯಗಳಿಗೆ ಅನುದಾನ ನೀಡಿಲ್ಲ. ಆದರೆ 13ನೇ ವಾರ್ಡಿಗೆ ಹೆಚ್ಚು ಅನುದಾನ ನೀಡಲಾಗಿದೆ. ಇದು ಹೇಗೆ ಎಂದು ಪ್ರಶ್ನಿಸಿದರು.
ಸೋಮಶೇಖರ್, ಸುದೇಶ್ ಮಾತನಾಡಿ, ವಾರ್ಡಿನಲ್ಲಿ ಚರಂಡಿ ಹೂಳು ತೆಗೆಸಿ ಒಂದು ತಿಂಗಳಾಗಿದ್ದು, ರಸ್ತೆ ಬದಿಯಲ್ಲಿ ಹಾಕಲಾಗಿದೆ. ಕೂಡಲೇ ಹೂಳು ತೆಗೆಸಬೇಕು. ಜನತೆಗೆ ಬೀದಿ ದೀಪ, ರಸ್ತೆ, ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಒದಗಿಸುವಂತೆ ಮನವಿ ಮಾಡಿದರು.


ಸಭೆಯಲ್ಲಿ ಪಟ್ಟಣದಲ್ಲಿರುವ ಡಾ.ಬಿ.ಆರ್. ಅಂಬೇಡ್ಕರ್ ಪ್ರತಿಮೆಯನ್ನು ವೃತ್ತ ಮಧ್ಯದಲ್ಲಿ ಅಳವಡಿಸುವಂತೆ ಹಾಗೂ ಕೆಂಪೇಗೌಡ ಪ್ರತಿಮೆ ಸ್ಥಾಪಿಸುವ ಸಂಬಂಧ ಚರ್ಚಿಸಿದರು. ಇದೇ ವೇಳೆ 2018-19ನೇ ಸಾಲಿನಿಂದ 2021-22ನೇ ಸಾಲಿನವರೆಗೆ ವಿವಿಧ ಯೋಜನೆಗಳ ಅನುದಾನದಲ್ಲಿ ವೈಯಕ್ತಿಕ ಫಲಾನುಭವಿಗಳ ಆಯ್ಕೆ ವಿಚಾರ ಹಾಗೂ 2022-23ನೇ ಸಾಲಿನ 15ನೇ ಹಣಕಾಸು ಯೋಜನೆಯಡಿ 22.80 ಲಕ್ಷ ರೂ. ಕ್ರಿಯಾಯೋಜನೆ ಅನುಮೋದನೆ ವಿಚಾರವನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು.


ಸಹಿ ಹಾಕುವಂತೆ ಸೂಚನೆ: ಸಭೆಗೂ ಮುನ್ನ ಮುಖ್ಯಾಧಿಕಾರಿ ಮೂರ್ತಿ ಮಾತನಾಡಿ, ಪಪಂನಲ್ಲಿ ಸರ್ವ ಸದಸ್ಯರ ಸಭೆಗಳನ್ನು ನಡೆಸಲಾಗುತ್ತಿದೆ. ಈ ವೇಳೆ ಸಭೆಗೆ ಹಾಜರಾದರೂ ಕೆಲವರು ಹಾಜರಾತಿ ಪುಸ್ತಕಕ್ಕೆ ಸಹಿ ಹಾಕುತ್ತಿಲ್ಲ. ಇದರಿಂದ ದಾಖಲೆ ಇಲ್ಲವಾಗಿದೆ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಸಹಿ ಹಾಕುವಂತೆ ಸೂಚಿಸಿದರು. ಆದರೆ ಕೆಲವರು ಸಹಿ ಹಾಕಲು ಹಿಂದೇಟು ಹಾಕಿದರು. ಈ ವೇಳೆ ಸದಸ್ಯರ ನಡುವೆಯೇ ಮಾತಿನ ಚಕಮಕಿ ನಡೆಯಿತು.
ಪಪಂ ಉಪಾಧ್ಯಕ್ಷ ಗಿರೀಶ್, ಸದಸ್ಯರಾದ ಮಂಜುಳಾ, ರೂಪಾ, ಮಮ್ತಾಜ್ ಬಾನು, ರಮ್ಯಾ, ಮಹೇಶ್, ಮಹೇಶ್‌ನಾಯ್ಕ, ಪುಟ್ಟರಾಜು, ಪಪಂ ಪ್ರಭಾರ ಕಂದಾಯ ನಿರೀಕ್ಷಕ ಮಂಜುನಾಥ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net