ಪಪಂ ಮುಖ್ಯಾಧಿಕಾರಿ ಪರಿಶೀಲನೆ

15 HANUR 5
Published on

ಹನೂರು: ಪಟ್ಟಣದ 7ನೇ ವಾರ್ಡ್‌ನ ಆಂಜನೇಯ ಬಡಾವಣೆಯಲ್ಲಿ ಅವೈಜ್ಞಾನಿಕವಾಗಿ ಚರಂಡಿ ನಿರ್ಮಿಸುತ್ತಿರುವ ಸ್ಥಳಕ್ಕೆ ಗುರುವಾರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮೂರ್ತಿ ಭೇಟಿ ನೀಡಿ ಪರಿಶೀಲಿಸಿದರು.

ಬಡಾವಣೆಯಲ್ಲಿ 5 ವರ್ಷದ ಹಿಂದೆ ಪಟ್ಟಣ ಪಂಚಾಯಿತಿ ವತಿಯಿಂದ ಚರಂಡಿ ನಿರ್ಮಿಸಲಾಗಿದ್ದು, ಅವೈಜ್ಞಾನಿಕದಿಂದ ಕೂಡಿತ್ತು. ಇದರಿಂದ ಕೊಳಚೆ ನೀರು ಸರಾಗವಾಗಿ ಹರಿಯಲು ಸಾಧ್ಯವಾಗುತ್ತಿರಲಿಲ್ಲ. ಪರಿಣಾಮ ನೀರು ನಿಂತಲ್ಲೇ ನಿಂತು ದುರ್ವಾಸನೆ ಬೀರುವುದರ ಜತೆಗೆ ಅನೈರ್ಮಲ್ಯ ಮನೆ ಮಾಡಿತ್ತು. ಸೊಳ್ಳೆಗಳ ಕಾಟ ವಿಪರೀತವಾಗಿತ್ತು. ಹೀಗಾಗಿ ವೈಜ್ಞಾನಿಕವಾಗಿ ಚರಂಡಿ ನಿರ್ಮಿಸಿಕೊಡುವಂತೆ ನಿವಾಸಿಗಳು ಪಪಂ ಆಡಳಿತವನ್ನು ಒತ್ತಾಯಿಸಿದ್ದರು. ಆದರೆ ಪಪಂ ಆಡಳಿತ ಈ ಹಿಂದೆ ನಿರ್ಮಿಸಿದ್ದ ಚರಂಡಿಯ ಒಂದು ಬದಿಯ ಗೋಡೆಯನ್ನು ಹಾಗೆಯೇ ಇರಿಸಿ ಚರಂಡಿ ನಿರ್ಮಿಸುತ್ತಿತ್ತು. ಈ ಬಗ್ಗೆ ಡಿ.14ರ ವಿಜಯವಾಣಿ ಸಂಚಿಕೆಯಲ್ಲಿ ಅವೈಜ್ಞಾನಿಕ ಕಾಮಗಾರಿಗೆ ಜನರ ಆಕ್ರೋಶ ಶೀರ್ಷಿಕೆಯಡಿ ವರದಿ ಪ್ರಕಟವಾಗಿತ್ತು.


ಈ ಹಿನ್ನೆಲೆಯಲ್ಲಿ ಮುಖ್ಯಾಧಿಕಾರಿ ಮೂರ್ತಿ ಗುರುವಾರ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿ ಪರಿಶೀಲಿಸಿ, ಚರಂಡಿಯ ಹಳೆಯ ಗೋಡೆಯನ್ನು ತೆರವುಗೊಳಿಸಿ ವೈಜ್ಞಾನಿಕವಾಗಿ ಗುಣಮಟ್ಟದ ಚರಂಡಿ ಹಾಗೂ ರಸ್ತೆಯನ್ನು ನಿರ್ಮಿಸಬೇಕು ಎಂದು ಸಂಬಂಧಪಟ್ಟವರಿಗೆ ಸೂಚಿಸಿದರು.
ಈ ವೇಳೆ ಸ್ಥಳೀಯರು ಇನ್ನುಳಿದ ಅರ್ಧ ಭಾಗಕ್ಕೂ ಚರಂಡಿ ನಿರ್ಮಿಸುವಂತೆ ಮನವಿ ಮಾಡಿದರು. ಇದಕ್ಕೆ ಮೂರ್ತಿ ಪ್ರತಿಕ್ರಿಯಿಸಿ, ಪಪಂನ 24.10ರ ಯೋಜನೆಯಡಿ ಕ್ರಿಯಾಯೋಜನೆ ತಯಾರಿಸಿ ಅನುಮೋದನೆ ಪಡೆದು ಚರಂಡಿ ನಿರ್ಮಿಸಿಕೊಡಲಾಗುವುದು ಎಂದು ಭರವಸೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net