

ಗುಂಡ್ಲುಪೇಟೆ: ವಿಧಾನಸಭಾ ಕ್ಷೇತ್ರವನ್ನು ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ನೂತನ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್ ಮುಂದೆ ಅನೇಕ ಸವಾಲುಗಳಿವೆ.
ಹಿಂದಿನ ಶಾಸಕ, ಬಿಜೆಪಿ ಅಭ್ಯರ್ಥಿ ಸಿ.ಎಸ್.ನಿರಂಜನ್‌ಕುಮಾರ್ ವಿರುದ್ಧ ಗಣೇಶ್‌ಪ್ರಸಾದ್ 107794 ಮತಗಳನ್ನು ಪಡೆದು ಗೆದ್ದಿದ್ದಾರೆ. ಅವರ ಕುಟುಂಬಕ್ಕೆ ಆಪ್ತರಾದ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿಯಾಗಿರುವುದರಿಂದ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲಿದ್ದರೆಂಬ ನಿರೀಕ್ಷೆ ಹುಟ್ಟಿಕೊಂಡಿದೆ.
ಅವ್ಯವಸ್ಥೆಯ ಆಗರವಾಗಿರುವ ಪಟ್ಟಣಕ್ಕೆ ಹೊಸ ರೂಪ ನೀಡಬೇಕಾಗಿದೆ. ಉದ್ದಕ್ಕೂ ಕುಸಿದು ಅಪಾಯಕ್ಕೆ ಆಹ್ವಾನ ನೀಡುತ್ತಿರುವ ಪಾದಚಾರಿ ಮಾರ್ಗ ದುರಸ್ತಿ, ಅಡ್ಡಾದಿಡ್ಡಿ ಸಂಚಾರ ವ್ಯವಸ್ಥೆಗಳನ್ನು ಕೂಡಲೇ ಸರಿಪಡಿಸಬೇಕಾಗಿದೆ. ಕಳೆದ 10 ವರ್ಷಗಳ ಹಿಂದೆ ತಾಲೂಕಿನ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ ನಿರ್ಮಾಣ ಕೈಗೊಂಡಾಗ ಅವೈಜ್ಞಾನಿಕವಾಗಿ ಕಾಮಗಾರಿ ಕೈಗೊಳ್ಳಲಾಗಿತ್ತು. ಪಟ್ಟಣದ ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ, ರಸ್ತೆಗಳ ನಡುವೆ ವಿಭಜಕಗಳು ಮತ್ತು ಬೀದಿ ದೀಪಗಳ ಅಳವಡಿಕೆ, ತಗ್ಗು ಪ್ರದೇಶಗಳಲ್ಲಿ ನೀರು ಹರಿದುಹೋಗಲು ಇದ್ದ ಹಳೆಯ ಸೇತುವೆಗಳನ್ನು ತೆರವು ಮಾಡಿ ಜಲಮಾರ್ಗಗಳನ್ನು ಮುಚ್ಚಿದ ಪರಿಣಾಮ ಮಳೆನೀರು ರಸ್ತೆಯ ನಡುವೆ ನಿಂತು ಅವ್ಯವಸ್ಥೆಗಳಾಗುತ್ತಿವೆ. ಇದನ್ನು ನಿವಾರಿಸಲು ಕಳೆದ 3 ವರ್ಷದಲ್ಲಿ ಪಟ್ಟಣ ವ್ಯಾಪ್ತಿಯಲ್ಲಿ 2 ಕಿಲೋಮೀಟರ್ ಉದ್ದಕ್ಕೆ ಹೊಸದಾಗಿ ಚರಂಡಿ ಹಾಗೂ ಡೆಕ್ ನಿರ್ಮಾಣ ಆರಂಭಿಸಿದರೂ ಕಳಪೆ ಕಾಮಗಾರಿಯಿಂದ ಹೆಜ್ಜೆ ಹೆಜ್ಜೆಗೂ ಕುಸಿದು ಪಾದಚಾರಿಗಳಿಗೆ ಮಾರಕವಾಗಿವೆ.
ದಿನೇ ದಿನೆ ಬೆಳೆಯುತ್ತಿರುವ ಪಟ್ಟಣದಲ್ಲಿ ವಾಹನಗಳ ಸಂಚಾರ ದುಸ್ತರವಾಗುತ್ತಿದೆ. ಪಟ್ಟಣದ ಮಾರ್ಗವಾಗಿ ನೆರೆಯ ಕೇರಳ ಹಾಗೂ ತಮಿಳುನಾಡಿಗೆ ಹೋಗುವ ವಾಹನಗಳ ಸಂಖ್ಯೆ ಹೆಚ್ಚಾಗಿದೆ. ರಾತ್ರಿ 9 ಗಂಟೆಗೆ ಚೆಕ್‌ಪೋಸ್ಟ್‌ಗಳು ಬಂದ್ ಆಗುವುದರೊಳಗೆ ಹೋಗುವ ಸಲುವಾಗಿ ವೇಗವಾಗಿ ಸಂಚರಿಸುವ ವಾಹನಗಳಿಂದ ಅಪಘಾತಗಳು ಸಂಭವಿಸುತ್ತಿವೆ. ಪಟ್ಟಣಕ್ಕೆ ಪ್ರತ್ಯೇಕ ಸಂಚಾರ ಠಾಣೆ, ಆಯಕಟ್ಟಿನ ಸರ್ಕಲ್‌ಗಳಲ್ಲಿ ಸಿಗ್ನಲ್‌ಲೈಟ್ ಅಳವಡಿಸುವ ಮೂಲಕ ಸಂಚಾರ ವ್ಯವಸ್ಥೆ ಸುಧಾರಣೆ ಮಾಡಬೇಕಾಗಿದೆ. ಹೆಚ್ಚುತ್ತಿರುವ ಪ್ರಕರಣಗಳ ನಿರ್ವಣೆಗೆ ಪಟ್ಟಣ ಪೊಲೀಸ್ ಠಾಣೆ ಮಂಜೂರು ಮಾಡಿಸಬೇಕಾಗಿದೆ.
ಶಾಸಕರ ಆದ್ಯತೆಗಳು:
ಸರ್ಕಾರಿ ಕಚೇರಿಗಳಲ್ಲಿ ವ್ಯಾಪಕವಾಗಿರುವ ಭ್ರಷ್ಟಾಚಾರ ನಿರ್ಮೂಲನೆ, ರಸ್ತೆ ಹಾಗೂ ಒಳಚರಂಡಿಗಳ ನಿರ್ಮಾಣ, ಕಳೆದ ಐದು ವರ್ಷಗಳಿಂದ ಸರ್ಕಾರ ಮಂಜೂರು ಮಾಡದ ವಸತಿ ಯೋಜನೆಯ ಫಲಾನುಭವಿಗಳಿಗೆ ಆಶ್ರಯ ಮನೆಗಳ ವಿತರಣೆ, ಕೈಗಾರಿಕಾ ಪ್ರದೇಶದಲ್ಲಿ ಗಾರ್ಮೆಂಟ್ ಆರಂಭಿಸಿ ಯುವ ಜನತೆಗೆ ಉದ್ಯೋಗ ಒದಗಿಸುವುದು, ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಮುಂದುವರಿಸುವುದು ಮೊದಲ ಆದ್ಯತೆಯಾಗಿದೆ.
ಗ್ರಾಮಾಂತರ ಪ್ರದೇಶಗಳಿಗೆ ಉತ್ತಮ ರಸ್ತೆ, ಚರಂಡಿ ನಿರ್ಮಾಣ, ಉದ್ಯಮಿಗಳ ಜತೆ ಚರ್ಚಿಸಿ ಗಾರ್ಮೆಂಟ್ ಆರಂಭಿಸುವುದಕ್ಕೆ ಮೊದಲ ಆದ್ಯತೆ ನೀಡಲಾಗುವುದು. ಸರ್ಕಾರಿ ಕಚೇರಿಗಳಲ್ಲಿ ಭ್ರಷ್ಟಾಚಾರ ತಡೆಗಟ್ಟುವುದು, ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಕ್ರಮಕೈಗೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಗೃಹಮಂತ್ರಿಗಳ ಜತೆ ಚರ್ಚಿಸಿ ಪಟ್ಟಣ ಹಾಗೂ ಸಂಚಾರ ಪೊಲೀಸ್ ಠಾಣೆ ಆರಂಭಿಸಲಾಗುವುದು.
ಎಚ್.ಎಂ.ಗಣೇಶ್‌ಪ್ರಸಾದ್, ಶಾಸಕ, ಗುಂಡ್ಲುಪೇಟೆ