ಜಾನುವಾರು ಮೇಲೆ ಚಿರತೆ ದಾಳಿ

Published on

ಗುಂಡ್ಲುಪೇಟೆ: ತಾಲೂಕಿನ ಕೊಡಸೋಗೆ ಗ್ರಾಮದ ಸುತ್ತಮುತ್ತ ಹುಲಿ, ಚಿರತೆ ಕಾಟ ಹೆಚ್ಚಾಗಿದ್ದು, ಅಲ್ಲಲ್ಲಿ ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವುದರಿಂದ ಇಡೀ ಗ್ರಾಮದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.


ಗ್ರಾಮದ ನಾಗೇಶ್ ಎಂಬುವರ ಕೊಟ್ಟಿಗೆಗೆ ಚಿರತೆ ನುಗ್ಗಿ ಹಸು ಹಾಗೂ ಕರುಗಳ ಮೇಲೆ ಸೋಮವಾರ ರಾತ್ರಿ ದಾಳಿ ನಡೆಸಿ ಕರುವನ್ನು ತೀವ್ರವಾಗಿ ಗಾಯಗೊಳಿಸಿದೆ. ಜಾನುವಾರುಗಳ ಅರಚಾಟ ಕೇಳಿದ ಮನೆಯವರು ಹೊರಬರುತ್ತಿದ್ದಂತೆ ಚಿರತೆ ಕತ್ತಲಲ್ಲಿ ಕಣ್ಮರೆಯಾಗಿದೆ. ಗ್ರಾಮಕ್ಕೆ ಚಿರತೆ ಬಂದಿರುವ ಸುದ್ದಿ ಕೇಳಿದ ಗ್ರಾಮಸ್ಥರು ತೀವ್ರ ಭೀತಿಗೊಳಗಾಗಿದ್ದಾರೆ. ವಿಷಯ ತಿಳಿದ ಬಫರ್ ವಲಯದ ಉಪ ವಲಯಾರಣ್ಯಾಧಿಕಾರಿ ಮುದ್ದುರಾಜ್ ಹಾಗೂ ಸಿಬ್ಬಂದಿ ಚಿರತೆಯನ್ನು ಓಡಿಸಲು ಪಟಾಕಿ ಸಿಡಿಸಿದ್ದಾರೆ.


ಕಳೆದ ಹತ್ತು ದಿನಗಳ ಹಿಂದೆ ಗ್ರಾಮದ ರವಿ ಎಂಬುವರ ಜೋಳದ ಜಮೀನಿನಲ್ಲಿ ಹುಲಿ ಮತ್ತು ಮರಿ ಕಾಣಿಸಿಕೊಂಡಿದ್ದವು. ಈಗ ಚಿರತೆ ಊರಿಗೇ ಬಂದು ಕೊಟ್ಟಿಗೆಗೆ ದಾಳಿ ಮಾಡಿರುವುದರಿಂದ ಜನರು ರಾತ್ರಿ ವೇಳೆ ಮನೆಗಳಿಂದ ಹೊರಬರಲು ಹೆದರುತ್ತಿದ್ದಾರೆ. ಕೂಡಲೇ ಹುಲಿ ಮತ್ತು ಚಿರತೆಯನ್ನು ಸೆರೆಹಿಡಿಯಲು ಕ್ರಮಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಗ್ರಾಮದಲ್ಲಿ ಚಿರತೆ ಸೆರೆಗೆ ಅರಣ್ಯ ಇಲಾಖೆ ಬೋನು ಇಟ್ಟಿದ್ದು, ಹುಲಿ, ಚಿರತೆಗಳನ್ನು ಸೆರೆಹಿಡಿಯಲು ಅನುಮತಿ ಕೋರಿ ಪತ್ರಬರೆಯಲಾಗಿದ್ದು, ಅನುಮತಿ ದೊರೆತ ಕೂಡಲೇ ಕಾರ್ಯಾಚರಣೆ ನಡೆಸಲಾಗುವುದು. ಚಿರತೆ ಸಂಚರಿಸುತ್ತಿರುವ ಸ್ಥಳದಲ್ಲಿ ಬೋನು ಅಳವಡಿಸಲಾಗುವುದು ಎಂದು ಅರಣ್ಯಾಧಿಕಾರಿಗಳು ಭರವಸೆ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net