

ಗುಂಡ್ಲುಪೇಟೆ: ಸುತ್ತೂರು ಮಠವು ಕೇವಲ ಜ್ಞಾನ ದಾಸೋಹವಲ್ಲದೆ ಸುಸಜ್ಜಿತ ಆಸ್ಪತ್ರೆಗಳನ್ನು ತೆರೆಯುವ ಮೂಲಕ ಆರೋಗ್ಯ ದಾಸೋಹ ನೀಡುತ್ತಿದ್ದು, ಸದ್ಯ ಗ್ರಾಮಾಂತರ ಜನರಿಗೆ ಆರೊಗ್ಯ ಉಚಿತ ಸೌಲಭ್ಯ ನೀಡಲು ಮುಂದಾಗಿದೆ ಎಂದು ಶಾಸಕ ಸಿ.ಎಸ್. ನಿರಂಜನಕುಮಾರ್ ಶ್ಲಾಘಿಸಿದರು.
ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆ ವತಿಯಿಂದ ಪಟ್ಟಣದ ಜೆಎಸ್‌ಎಸ್ ಅನುಭವ ಮಂಟಪದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ಆರೋಗ್ಯ ತಪಾಸಣಾ ಶಿಬಿರ ಹಾಗೂ ರಂಗೋತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ತಾಲೂಕಿಗೂ, ಸುತ್ತೂರು ಮಠಕ್ಕೂ ಅವಿನಾಭಾವ ಸಂಬಂಧವಿದ್ದು ಜನರ ಆರೋಗ್ಯದ ಕಾಳಜಿಯಿಂದ ಸಂಸ್ಥೆಯು ಪ್ರತಿ ತಿಂಗಳು ಎರಡನೇ ಭಾನುವಾರ ಪಟ್ಟಣದಲ್ಲಿ ಆರೋಗ್ಯ ಉಚಿತ ತಪಾಸಣೆ ನಡೆಸಿ ಸ್ಥಳದಲ್ಲಿಯೇ ಉಚಿತ ಔಷಧ ಹಾಗೂ ಚಿಕಿತ್ಸಾ ಶಿಬಿರ ಆಯೋಜಿಸಿದೆ. ಹೆಚ್ಚಿನ ಚಿಕಿತ್ಸೆ ಅಗತ್ಯವಿರುವ ರೋಗಿಗಳಿಗೆ ರಿಯಾಯಿತಿ ದರದಲ್ಲಿ ಮೈಸೂರಿನಲ್ಲಿ ಚಿಕಿತ್ಸೆ ನೀಡಲು ಮುಂದಾಗಿದೆ. ತಾಲೂಕಿನ ಜನತೆ ಇದರ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಸಚಿವೆ ಡಾ. ಗೀತಾ ಮಹದೇವಪ್ರಸಾದ್ ಮಾತನಾಡಿ, ಅನಾರೋಗ್ಯಕ್ಕೊಳಗಾದವರು ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಹೋಗಲು ಹೆಚ್ಚಿನ ಸಮಯ ಹಾಗೂ ವೆಚ್ಚವಾಗುತ್ತಿದೆ. ಈ ಹಿನ್ನೆಲೆಯಲ್ಲಿ ಜೆಎಸ್‌ಎಸ್ ಸಂಸ್ಥೆಯು ಪಟ್ಟಣದಲ್ಲಿ ಇಡೀ ವರ್ಷ ಉಚಿತ ಶಿಬಿರ ನಡೆಸಿ ತಜ್ಞ ವೈದ್ಯರಿಂದ ಸುಮಾರು 70ಕ್ಕೂ ಹೆಚ್ಚಿನ ರೋಗಗಳಿಗೆ ಉಚಿತ ಚಿಕಿತ್ಸೆ ನೀಡಲು ಮುಂದಾಗಿದೆ ಎಂದು ಹೇಳಿದರು.
ರಂಗೋತ್ಸವ ಕಾರ್ಯಕ್ರಮ ಉದ್ಘಾಟಿಸಿದ ರಂಗಕರ್ಮಿ ಎಂ.ವೈ. ಪುಟ್ಟಣ್ಣಯ್ಯ ಮಾತನಾಡಿ, ಜನರ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ಜೆಎಸ್‌ಎಸ್ ತನ್ನದೆ ಆದ ಶೈಲಿಯಲ್ಲಿ ರಂಗೋತ್ಸವ ಹಾಗೂ ಆರೋಗ್ಯ ತಪಾಸಣಾ ಶಿಬಿರ ಆಯೋಜಿಸಿದೆ ಎಂದು ಪ್ರಶಂಸಿಸಿದರು. ಜೆಎಸ್‌ಎಸ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಎಸ್.ಪಿ. ಮಂಜುನಾಥ್, ಚಿಕ್ಕತುಪ್ಪೂರು ಶಿವಪೂಜಾ ಮಠದ ಚನ್ನವೀರ ಸ್ವಾಮೀಜಿ, ವೈದ್ಯಕೀಯ ಮಹಾವಿದ್ಯಾಲಯದ ಪ್ರಾಂಶುಪಾಲ ಡಾ.ಎಚ್. ಬಸವನಗೌಡಪ್ಪ, ಕಲಾ ಮಂಟಪದ ಸಂಚಾಲಕ ಚಂದ್ರಶೇಖರ್ ಹೆಗ್ಗೊಠಾರ, ಡಾ.ಆರ್. ಮಹೇಶ್, ಡಾ. ಮಧು, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಮರಿಸ್ವಾಮಪ್ಪ ಸೇರಿದಂತೆ ಹಲವರು ಇದ್ದರು.