ಗ್ರಾಮ ಒನ್ ಕೇಂದ್ರಗಳಿಗೆ ತೊಡಕಾದ ಗೃಹಲಕ್ಷ್ಮೀ

12325f0c-65ca-4627-8692-39365e9bd2c1
Published on

ಚಾಮರಾಜನಗರ: ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮೀ’ ಗ್ರಾಮ ಒನ್ ಕೇಂದ್ರಗಳಿಗೆ ತೊಡಕಾಗಿದ್ದು, ಇಲ್ಲಿನ ನೌಕರರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು 170 ಗ್ರಾಮ ಒನ್ ಕೇಂದ್ರಗಳಿದ್ದು, ಆರ್ಥಿಕ ಹೊರೆ ಹಾಗೂ ಸರ್ಕಾರದಿಂದ ಸೂಕ್ತ ರೀತಿಯಲ್ಲಿ ಸಹಕಾರ ದೊರಕದ ಕಾರಣ 50 ಕೇಂದ್ರಗಳು ಈಗಾಗಲೇ ಸ್ಥಗಿತಗೊಂಡಿವೆ. ಈಗ ಉಳಿದಿರುವ 120 ಕೇಂದ್ರಗಳಲ್ಲಿ 200ಕ್ಕಿಂತಲೂ ಹೆಚ್ಚು ಆಪರೇಟರ್‌ಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಕೊಂಡಿಯಾಗಿ ಕೆಲಸ ಮಾಡುವ ಗ್ರಾಮ ಒನ್ ಕೇಂದ್ರಗಳಲ್ಲಿ ಆರೋಗ್ಯ ಭಾರತ್ ಕಾರ್ಡ್, ಪಾನ್‌ಕಾರ್ಡ್, ಬೆಳೆವಿಮೆ ನೋಂದಣಿ, ಆಯುಷ್ಮಾನ್ ಕಾರ್ಡ್ ಹಾಗೂ ಇನ್ನತರ ಸೇವೆಗಳನ್ನು ಒದಗಿಸಲಾಗುತ್ತಿದೆ.

ಗೃಹಲಕ್ಷ್ಮೀ ಯೋಜನೆಯನ್ನು ಉಚಿತವಾಗಿ ನೋಂದಣಿ ಮಾಡುವಂತೆ ನಾಡಕಚೇರಿ, ಬಾಪೂಜಿ ಸೇವಾಕೇಂದ್ರ, ಕರ್ನಾಟಕ ಒನ್, ಬೆಂಗಳೂರ್ ಒನ್ ಹಾಗೂ ಗ್ರಾಮ ಒನ್ ಕೇಂದ್ರಗಳಿಗೆ ಸರ್ಕಾರ ಆದೇಶ ಹೊರಡಿಸಿದೆ. ಸರ್ಕಾರದ ಅಧೀನದಲ್ಲಿ ಬರುವ ಎಲ್ಲ ಕೇಂದ್ರಗಳಲ್ಲೂ ಕಂಪ್ಯೂಟರ್ ಆಪರೇಟರ್‌ಗಳ ಸಂಬಳ, ವಿದ್ಯುತ್, ಪ್ರಿಂಟರ್‌ಗಳನ್ನು ಸರ್ಕಾರ ನೀಡುತ್ತದೆ. ಆದರೆ ಗ್ರಾಮ ಒನ್ ಸೇವಾ ಕೇಂದ್ರ ಸರ್ಕಾರದ ಅಧೀನದಲ್ಲಿ ಬಂದರೂ ಎಲ್ಲ ಖರ್ಚು-ವೆಚ್ಚಗಳನ್ನು ಆಪರೇಟರ್‌ಗಳೇ ಭರಿಸಬೇಕಾಗುತ್ತದೆ. ಗೃಹಲಕ್ಷ್ಮೀ ಯೋಜನೆಯನ್ನು ಉಚಿತವಾಗಿ ನೋಂದಣಿ ಮಾಡಿದರೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ ಎಂದು ಗ್ರಾಮ ಒನ್ ಕೇಂದ್ರದಲ್ಲಿ ಕೆಲಸ ನಿರ್ವಹಿಸುವ ಜಿಲ್ಲಾ ಸಂಯೋಜಕರು ಅಳಲು ತೋಡಿಕೊಂಡಿದ್ದಾರೆ.

ಆರೋಗ್ಯ ಭಾರತ್ ಕಾರ್ಡ್ ಹಣವೂ ಬಂದಿಲ್ಲ:
ಗ್ರಾಮ ಒನ್ ಕೇಂದ್ರಗಳಲ್ಲಿ ಆರೋಗ್ಯ ಭಾರತ್ ಕಾರ್ಡ್ ಹಾಗೂ ಆಯುಷ್ಮನ್ ಕಾರ್ಡ್ ನೋಂದಣಿಗೆ ಆದೇಶ ನೀಡಲಾಗಿತ್ತು. ಒಂದು ಆರೋಗ್ಯ ಭಾರತ್ ಕಾರ್ಡ್ ಮತ್ತು ಆಯುಷ್ಮಾನ್ ಕಾರ್ಡ್ ನೋಂದಣಿಗೆ 8-10 ರೂ. ನೀಡುವುದಾಗಿ ತಿಳಿಸಲಾಗಿತ್ತು. ಆಪರೇಟರ್‌ಗಳು 4000-5000 ಕಾರ್ಡ್‌ಗಳನ್ನು ನೋಂದಣಿ ಮಾಡಿದ್ದು, ಈವರೆಗೂ ಅದರ ಕಮಿಷನ್ ಹಣವನ್ನು ಜಮಾ ಮಾಡಿಲ್ಲ. ಜನರಿಗೆ ಇಲಾಖೆ ಆರೋಗ್ಯ ಭಾರತ್ ಕಾರ್ಡ್ ಕೂಡ ನೀಡಿಲ್ಲ. ಕೆಲವರಿಗೆ 2000-3000 ರೂ. ಸೇವಾ ಶುಲ್ಕ ಮಾತ್ರ ಜಮಾ ಮಾಡಿದ್ದು, ಈಗಾಗಲೇ ಸಂಕಷ್ಟದಲ್ಲಿರುವ ಗ್ರಾಮ ಒನ್ ಕೇಂದ್ರಗಳಿಗೆ ಗೃಹಲಕ್ಷ್ಮೀ ಯೋಜನೆಯ ನೋಂದಣಿಯನ್ನು ಉಚಿತ ಮಾಡಿ ಇಲ್ಲಿನ ನೌಕರರನ್ನು ಸಂಕಷ್ಟಕ್ಕೆ ದೂಡುತ್ತಿದೆ.

ಈಗಾಗಲೇ ಸಂಕಷ್ಟದಲ್ಲಿರುವ ಕೇಂದ್ರಗಳು:
ಜಿಲ್ಲೆಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಗ್ರಾಮ ಒನ್ ಕೇಂದ್ರಗಳನ್ನು ತೆರೆಯಲು 10-20 ಸಾವಿರ ರೂ. ಬಾಡಿಗೆ ಕಟ್ಟಿ, ವಿದ್ಯುತ್ ಬಿಲ್, ಪೇಪರ್, ಇಂಕ್ ಹಾಗೂ ಇನ್ನಿತರ ಖರ್ಚುಗಳನ್ನು ಸರಿದೂಗಿಸಲಾಗದೆ. ಗ್ರಾಮ ಒನ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಈಗಾಗಲೇ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಖಾಸಗಿ ಕಂಪ್ಯೂಟರ್ ಕೇಂದ್ರಗಳ ಸೇವಾ ಶುಲ್ಕ ಹೆಚ್ಚಳದಿಂದಾಗಿ ಮತ್ತಷ್ಟು ತೊಂದರೆ ಅನುಭವಿಸುವಂತಾಗಿದೆ. ಇದರ ನಡುವೆ ಒಬ್ಬರು ಅಥವಾ ಇಬ್ಬರನ್ನೂ ಕೆಲಸಕ್ಕೆ ನೇಮಿಸಿಕೊಂಡು ಅವರಿಗೆ ಸಂಬಳ ಕೊಡುವಲ್ಲಿ ಗ್ರಾಮ ಒನ್ ಕೇಂದ್ರಗಳ ಸಿಬ್ಬಂದಿ ತೊಂದರೆಗೆ ಸಿಲುಕಿದ್ದಾರೆ.

ಸೇವಾ ಶುಲ್ಕ ನಿಗದಿಗೊಳಿಸಿ:
ಗೃಹಲಕ್ಷ್ಮೀ ಯೋಜನೆಯ ಉಚಿತ ನೋಂದಣಿಗೆ ಅವಕಾಶ ನೀಡಿದ್ದು, ಒಂದು ಅರ್ಜಿ ಸಲ್ಲಿಸುವ ಆಪರೇಟರ್‌ಗಳಿಗೆ 15 ರೂ. ಸೇವಾ ಶುಲ್ಕ ನಿಗದಿ ಮಾಡಿದೆ. ಈಗಾಗಲೇ ಆಯುಷ್ಮಾನ್ ಹಾಗೂ ಆರೋಗ್ಯ ಭಾರತ್ ಕಾರ್ಡ್‌ಗಳನ್ನು ಮಾಡಿಸಿ ಸೇವಾ ಶುಲ್ಕ ನೀಡದೆ ಇರುವ ಉದಾಹರಣೆ ಎದುರಿಗೆ ಇರುವಾಗ 15 ರೂ. ನೀಡುತ್ತಾರೆ ಎಂಬ ನಂಬಿಕೆ ಇಲ್ಲ. ಗೃಹಲಕ್ಷ್ಮೀ ಯೋಜನೆಯ ಅರ್ಜಿ ಸಲ್ಲಿಸಲು ಸೇವಾ ಶುಲ್ಕವನ್ನು 100 ರೂ. ಗಳಿಗೆ ಏರಿಸಬೇಕು. ಉಚಿತ ನೋಂದಣಿ ಮಾಡದೆ ಇಂತಿಷ್ಟು ದರ ನಿಗದಿ ಮಾಡಿದರೆ ಗ್ರಾಮ ಒನ್ ಕೇಂದ್ರದಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಅನುಕೂಲವಾಗುತ್ತದೆ ಎಂಬ ಒತ್ತಾಯ ಕೇಳಿಬಂದಿದೆ.

ಈಗಾಗಲೇ ಗ್ರಾಮ ಒನ್ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಆಪರೇಟರ್‌ಗಳು ತುಂಬ ಸಂಕಷ್ಟದಲ್ಲಿದ್ದು, ಗೃಹಲಕ್ಷ್ಮೀ ಯೋಜನೆ ನೋಂದಣಿ ಉಚಿತವಾಗಿ ಮಾಡಿರುವುದು ಸರಿಯಲ್ಲ. ಸೂಕ್ತ ದರವನ್ನಾದರೂ ನಿಗದಿ ಮಾಡಬೇಕು.-ಸ್ವಾಮಿ, ಆಪರೇಟರ್, ಗ್ರಾಮ ಒನ್ ಕೇಂದ್ರ, ಕುದೇರು, ಚಾಮರಾಜನಗರ ಹಲವಾರು ಸರ್ಕಾರಿ ಯೋಜನೆಗಳ ನೋಂದಣಿಗಳ ಸೇವಾ ಶುಲ್ಕವೇ ಇನ್ನೂ ಬಂದಿಲ್ಲ. ಆರೋಗ್ಯ ಭಾರತ್ ಕಾರ್ಡ್ ಮಾಡಿ 3 ತಿಂಗಳಾದರೂ ಸೇವಾಶುಲ್ಕ ಬಂದಿಲ್ಲ. ಇದರ ನಡುವೆ ಉಚಿತ ನೋಂದಣಿ ಜವಾಬ್ದಾರಿಯನ್ನು ಗ್ರಾಮ ಒನ್ ಕೇಂದ್ರಗಳಿಗೆ ವಹಿಸುವುದು ಎಷ್ಟು ಸರಿ-ಮಹೇಂದ್ರ, ಗ್ರಾಮ ಒನ್ ಕೇಂದ್ರ, ಇರಸವಾಡಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net