ಮಾದರಿ ನೀತಿ ಸಂಹಿತೆ ಪಾಲಿಸಿ

28raju1
Published on

ಚಾಮರಾಜನಗರ: ಮುಂಬರುವ ವಿಧಾನಸಭಾ ಚುನಾವಣೆಯ ಪೂರ್ವ ಸಿದ್ಧತೆ ಹಾಗೂ ಮಾದರಿ ನೀತಿ ಸಂಹಿತೆ ಪಾಲನೆ ಕಾರ್ಯಗಳನ್ನು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಪರಿಶೀಲಿಸಿದರು.


ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಆಯೋಜಿಸಿದ್ದ ನೋಡಲ್ ಅಧಿಕಾರಿಗಳ ಸಭೆಯಲ್ಲಿ ನಿರ್ವಹಿಸಲಾಗುತ್ತಿರುವ ಕಾರ್ಯಗಳನ್ನು ಪರಿಶೀಲನೆ ಮಾಡಿದರು. ಮತದಾನ ಕೇಂದ್ರಗಳಲ್ಲಿ ಸೂಚನಾ ಫಲಕಗಳ ಅಳವಡಿಕೆ, ದೃಢೀಕರಣ, ಚುನಾವಣಾ ಕಾರ್ಯಗಳಿಗೆ ನಿಯೋಜಿತರಾಗಿರುವ ಸೆಕ್ಟರ್ ಅಧಿಕಾರಿ, ಫ್ಲೈಯಿಂಗ್ ಸ್ಕ್ವಾಡ್, ಇತರೆ ತಂಡಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳಿಗೆ ನಿಯೋಜಿಸಿರುವ ವಾಹನಗಳ ಬಗ್ಗೆ ವಿವರ ಪಡೆದುಕೊಂಡರು.


ಜಿಲ್ಲೆಯಲ್ಲಿ ಚೆಕ್‌ಪೋಸ್ಟ್ ಗಳ ಕಾರ್ಯನಿರ್ವಹಣೆ ಸಕ್ರಿಯವಾಗಿ ಇರಬೇಕು. ಚೆಕ್‌ಪೋಸ್ಟ್‌ಗಳಲ್ಲಿ ಮೂಲ ಸೌಕರ್ಯಗಳು ಇರಬೇಕು. ಚುನಾವಣಾ ಅಕ್ರಮಗಳಿಗೆ ಅವಕಾಶವಾಗದಂತೆ ನಿಗಾ ವಹಿಸುವ ನಿಟ್ಟಿನಲ್ಲಿ ಬಿಗಿ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸೂಚನೆ ನೀಡಿದರು. ನಾಮಪತ್ರ ಸ್ವೀಕಾರ ಪ್ರಕ್ರಿಯೆಗೆ ಸಂಬಂಧಿಸಿದಂತೆ ಅಗತ್ಯವಾದ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿ ಮತ್ತು ಕಂಪ್ಯೂಟರ್ ಅಳವಡಿಕೆಗಳ ಬಗ್ಗೆ ಕೈಗೊಳ್ಳಲಾಗಿರುವ ಬಗ್ಗೆ ವಿವರ ಪಡೆದುಕೊಂಡರು.


ಚುನಾವಣಾ ಮಾದರಿ ನೀತಿ ಸಂಹಿತೆ ಪಾಲನೆಗೆ ನೇಮಕ ಮಾಡಿರುವ ತಂಡಗಳು ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಕಂಡುಬಂದಲ್ಲಿ ತುರ್ತು ಕ್ರಮ ವಹಿಸುವ ಕುರಿತು ನಿರ್ದೇಶನ ನೀಡಿದರು. ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎಸ್. ಪೂವಿತಾ ಮತದಾನ ಮಹತ್ವದ ಜಾಗೃತಿ ಮೂಡಿಸುವ ಕಾರ್ಯ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿರುವ ಕುರಿತು ವಿವರವಾಗಿ ಚರ್ಚಿಸಿದರು. ಸಭೆಗೂ ಮೊದಲು ಜಿಲ್ಲಾಧಿಕಾರಿ ಡಿಎಸ್. ರಮೇಶ್ ಜಿಲ್ಲಾಡಳಿತ ಭವನದಲ್ಲಿರುವ ಸ್ಥಾಯಿ ಸಮಿತಿ ಸಭಾಂಗಣದಲ್ಲಿ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಸ್ಥಾಪಿಸಲಾಗಿರುವ ಮಾಧ್ಯಮ ನಿರ್ವಹಣೆ ಕೇಂದ್ರಕ್ಕೆ ಭೇಟಿ ನೀಡಿ ವೀಕ್ಷಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ ಉದೇಶ, ಉಪವಿಭಾಗಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸರಸ್ವತಿ, ಅಬಕಾರಿ ಉಪ ಆಯುಕ್ತ ನಾಗಶಯನ, ವಿಧಾನಸಭಾವಾರು ಚುನಾವಣಾ ಅಧಿಕಾರಿಗಳಾದ ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಮಲ್ಲಿಕಾರ್ಜುನ, ಆಹಾರ ಇಲಾಖೆ ಉಪನಿರ್ದೇಶಕ ಯೋಗಾನಂದ, ಜಂಟಿ ಕೃಷಿ ನಿರ್ದೇಶಕ ಮಧುಸೂದನ್, ತಹಸೀಲ್ದಾರ್ ಬಸವರಾಜು, ಮಂಜುಳಾ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net