ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿ

15raju1
Published on

ಚಾಮರಾಜನಗರ: ಪ್ರತಿಯೊಬ್ಬರು 30 ವರ್ಷ ದಾಟಿದ ನಂತರ ಕಡ್ಡಾಯವಾಗಿ ಆರೋಗ್ಯ ತಪಾಸಣೆ ಮಾಡಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಕಾರಿ ಡಾ.ಕೆ.ಎಂ.ವಿಶ್ವೇಶ್ವರಯ್ಯ ಸಲಹೆ ನೀಡಿದರು.


ನಗರದ ಬಿ.ರಾಚಯ್ಯ ಜೋಡಿ ರಸ್ತೆಯಲ್ಲಿರುವ ಜೆ.ಎಸ್.ಎಸ್ ಆಸ್ಪತ್ರೆ ಆವರಣದಲ್ಲಿ ಡಾ.ಬಾಬು ಸೋಷಿಯಲ್ ವೆಲ್‌ಫೇರ್ ಚಾರಿಟಬಲ್ ಟ್ರಸ್ಟ್ ಸಹಯೋಗದಲ್ಲಿ ಬುಧವಾರ ಆಯೋಜಿಸಿದ್ದ ಮೂಳೆ ಸಂಬಂತ ಕಾಯಿಲೆಗಳ ಬೃಹತ್ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು. ಇತ್ತೀಚಿನ ದಿನಗಳಲ್ಲಿ ನಮ್ಮ ಊಟದ ಪದ್ಧತಿ ಬದಲಾಗಿದೆ. ಆ ಕಾರಣಕ್ಕೆ 30 ವರ್ಷ ದಾಟಿದ ನಂತರ ಮಂಡಿನೋವು ಸೇರಿ ಹಲವಾರು ನೋವುಗಳು ನಮ್ಮನ್ನು ಕಾಡುತ್ತವೆ. ಹಾಗಾಗಿ, ನಿರ್ಲಕ್ಷ್ಯ ಮಾಡದೆ ಕಾಲಕಾಲಕ್ಕೆ ತಪಾಸಣೆ ಮಾಡಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ಮೂಳೆ ಸಂಬಂತ ಕಾಯಿಲೆಗಳ ಕುರಿತು ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಇದು ಉತ್ತಮವಾದ ಶಿಬಿರವಾಗಿದೆ ಎಂದು ತಿಳಿಸಿದರು.


ಡಾ.ಬಾಬು ಈ ಹಿಂದೆ ಅನೇಕ ಆರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕ್ಯಾನ್ಸರ್ ಕಾಯಿಲೆ ಹೇಗೆ ಬರುತ್ತದೆ ಎಂಬುದೇ ತಿಳಿಯುವುದಿಲ್ಲ, 500 ಜನರಿಗೆ ಕ್ಯಾನ್ಸರ್ ಪರೀಕ್ಷೆ ಮಾಡಿಸಿದಾಗ 5 ಜನರಲ್ಲಿ ಪತ್ತೆಯಾಗಿದೆ. ಈ ಕಾರಣಕ್ಕೆ ಕ್ಯಾನ್ಸರ್ ಕಾಯಿಲೆ ಕುರಿತು ತಪಾಸಣಾ ಶಿಬಿರ ಆಯೋಜಿಸಿ ಎಂದು ಸಲಹೆ ನೀಡಿದ್ದೇನೆ. ಜೆಎಸ್‌ಎಸ್ ಆಸ್ಪತ್ರೆ ಉತ್ತಮ ರೀತಿಯಲ್ಲಿ ಸಹಕಾರ ನೀಡುತ್ತಿದೆ ಎಂದರು.
ಹಿರಿಯ ಮುಖಂಡ ವೆಂಕಟರಮಣಸ್ವಾಮಿ(ಪಾಪು) ಮಾತನಾಡಿ, 1 ಲಕ್ಷಕ್ಕೂ ಅಕ ಜನರಿಗೆ ಕಣ್ಣಿನ ತಪಾಸಣೆ ಮಾಡುವಲ್ಲಿ ಜೆಎಸ್‌ಎಸ್ ಸಂಸ್ಥೆ ಗುರುತರ ಸಾಧನೆ ಮಾಡಿದೆ. ಡಾ.ಬಾಬು ಹಲವಾರು ಜನಪರ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ಬಂದಿದ್ದಾರೆ. ವೈದ್ಯರಾಗಿ ಸಮಾಜಮುಖಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.


ಸೋಶಿಯಲ್ ವೆಲ್‌ಫೇರ್ ಚಾರಿಟಬಲ್ ಸಂಸ್ಥೆಯ ಮುಖ್ಯಸ್ಥ ಡಾ.ಬಾಬು ಮಾತನಾಡಿ, ಪ್ರತಿಯೊಬ್ಬರಿಗೂ ಮೂಳೆ ಸಂಬಂತ ಕಾಯಿಲೆ ಒಂದಲ್ಲ ಒಂದು ರೀತಿಯಲ್ಲಿ ಕಾಣಿಸಿಕೊಳ್ಳುತ್ತದೆ. ಈ ಶಿಬಿರದ ಮೂಲಕ ಹಲವಾರು ಮೂಳೆ ಸಂಬಂತ ಕಾಯಿಲೆ ಕುರಿತು ಅರಿವು, ಸಲಹೆ ಹಾಗೂ ಚಿಕಿತ್ಸೆಯನ್ನು ಎಷ್ಟು ಸಾಧ್ಯವೋ ಅಷ್ಟು ಒದಗಿಸಲಾಗುತ್ತದೆ ಎಂದು ತಿಳಿಸಿದರು. ನಗರಸಭಾ ಅಧ್ಯಕ್ಷೆ ಆಶಾ ನಟರಾಜ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ನಾಗಶ್ರೀಪ್ರತಾಪ್, ಮಾಜಿ ಸದಸ್ಯ ಎ.ಆರ್.ಬಾಲರಾಜ್, ಚುಡಾ ಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ, ಬಿಜೆಪಿ ಗ್ರಾಮಾಂತರ ಮಂಡಲ ಅಧ್ಯಕ್ಷ ಬಸವಣ್ಣ, ಉಪಾಧ್ಯಕ್ಷ ರಾಜು, ಡಾ.ಗುರುಮೂರ್ತಿ, ಡಾ.ಗೋವಿಂದಶೆಟ್ಟಿ, ಬಸವಣ್ಣ, ಗಣೇಶ್ ದಿಕ್ಷೀತ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net