ಚಾಮರಾಜನಗರ: ಮೈಸೂರಿನ ಜೆಎಸ್‌ಎಸ್ ಆಸ್ಪತ್ರೆ, ಡಾ.ಬಾಬು ಸೋಷಿಯಲ್ ವೆಲ್‌ೇರ್ ಆ್ಯಂಡ್ ಚಾರಿಟಬಲ್ ಟ್ರಸ್ಟ್ ವತಿಯಿಂದ ಜ.20ರಂದು ಕಿವುಡುತನ ಹಾಗೂ ಮಾತಿನ ತೊಂದರೆಗಳ ಉಚಿತ ತಪಾಸಣಾ ಶಿಬಿರವನ್ನು ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ, ಕಿವಿ, ಮೂಗು ಮತ್ತು ಗಂಟಲು ತಜ್ಞ ಡಾ.ಎ.ಆರ್.ಬಾಬು ಹೇಳಿದರು.
ನಗರದ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಅಂದು ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಶಿಬಿರ ನಡೆಯಲಿದೆ. ವಿಶೇಷವಾಗಿ ಮಕ್ಕಳು ಮತ್ತು ಹಿರಿಯರ ತಪಾಸಣೆಗೆ ಆದ್ಯತೆ ನೀಡಲಾಗುತ್ತದೆ. ಕಿವುಡುತನ ಪರೀಕ್ಷೆ, ಬುದ್ಧಿಮಾಂದ್ಯತೆ, ಓದಿನಲ್ಲಿ ತೊಂದರೆ ಇರುವ ಮಕ್ಕಳ ಪರೀಕ್ಷೆ, ಉಚ್ಛಾರಣೆ ದೋಷ ಪರೀಕ್ಷೆ, ಮಕ್ಕಳಿಗೆ ಮಾತು ಮತ್ತು ಭಾಷೆಯ ತೊಂದರೆಗಳ ಪರೀಕ್ಷೆ, ಹಿರಿಯರಿಗೆ ಲಕ್ವಾ ಕಾಯಿಲೆಗಳ ನಂತರ ಮಾತಿನ ಪರೀಕ್ಷೆ, ಲಕ್ವಾ ಕಾಯಿಲೆಯ ನಂನುಂಗುವ ತೊಂದರೆಗಳ ಪರೀಕ್ಷೆ ಮತ್ತು ಚಿಕಿತ್ಸೆ ನೀಡಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಶಿಬಿರದಲ್ಲಿ ಗುರುತಿಸಲ್ಪಟ್ಟ 5 ವರ್ಷದೊಳಗಿನ ಮಕ್ಕಳಿಗೆ ಕೇಂದ್ರ ಸರ್ಕಾರದ ಅಡಿಪ್(ಅಸಿಸ್ಟಂಟ್ಸ್ ಟು ಡಿಸೇಬಲ್ ಪರ್ಸನ್ಸ್) ಯೋಜನೆಯಡಿ 7ರಿಂದ 8 ಲಕ್ಷ ರೂ.ಗಳ ಚಿಕಿತ್ಸೆ ನೀಡಬಹುದಾಗಿದೆ. ಕಾಕ್ಲಿಯರ್ ಇಂಪ್ಲಾಂಟ್ ಅಳವಡಿಸಲು ಸಾಧ್ಯವಿದೆ. ಇದೇ ರೀತಿ ರಾಜ್ಯ ಸರ್ಕಾರದ ಸುವರ್ಣ ಆರೋಗ್ಯ ಸುರಕ್ಷಾ ಟ್ರಸ್ಟ್‌ನಿಂದಲೂ ಚಿಕಿತ್ಸೆ ಪಡೆಯುವ ಸೌಲಭ್ಯವಿದೆ. ಈ ಶಿಬಿರವನ್ನು ಅವಶ್ಯಕತೆ ಇರುವವರು ಸದುಪಯೋಗ ಪಡೆಸಿಕೊಳ್ಳಬೇಕೆಂದು ಮನವಿ ಮಾಡಿದರು. ನಗರಸಭೆ ಅಧ್ಯಕ್ಷೆ ಸಿ.ಎಂ.ಆಶಾನಟರಾಜು, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿ.ಎನ್.ಬಾಲರಾಜು, ಬಿಜೆಪಿ ರಾಷ್ಟ್ರೀಯ ಒಬಿಸಿ ಮೋರ್ಚಾ ಕಾರ್ಯದರ್ಶಿ ನೂರೊಂದುಶೆಟ್ಟಿ, ಚುಡಾ ಮಾಜಿ ಅಧ್ಯಕ್ಷ ಬಾಲಸುಬ್ರಹ್ಮಣ್ಯಂ ಇದ್ದರು.