

ಚಾಮರಾಜನಗರ: ಹೊಂಗನೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ವಿರುದ್ಧ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು. ಗ್ರಾಮ ಪಂಚಾಯಿತಿ ಕಚೇರಿ ಮುಂದೆ ಜಮಾಯಿಸಿದ ಪ್ರತಿಭಟನಾನಿರತರು ಪಿಡಿಒ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಗ್ರಾಪಂ ಸದಸ್ಯ ರವಿರಾಮ್ ಮಾತನಾಡಿ, ಗ್ರಾಮ ಪಂಚಾಯಿತಿ ಪಿಡಿಒ ಚನ್ನಪ್ಪ ನಿಗದಿತ ವೇಳೆಗೆ ಕಚೇರಿಗೆ ಬರುತ್ತಿಲ್ಲ. ಸಾರ್ವಜನಿಕರ ಕೆಲಸ ಕಾರ್ಯಗಳನ್ನು ಸರಿಯಾಗಿ ಮಾಡುತ್ತಿಲ್ಲ ಎಂದು ದೂರಿದರು. ಪಿಡಿಒ ಚೆನ್ನಪ್ಪ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಸ್ವ ಇಚ್ಛೆಯಂತೆ ಆಡಳಿತ ನಡೆಸುತ್ತಿದ್ದಾರೆ. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರನ್ನು ಕರೆಯದೆ ಏಕಾಏಕಿ ಗ್ರಾಪಂ ಅಂಗಡಿ ಮಳಿಗೆಗಳಿಗೆ ಬೀಗ ಹಾಕಿದ್ದಾರೆ. ಏಕಪಕ್ಷೀಯ ನಿರ್ಧಾರಗಳನ್ನು ಕೈಗೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಪಿಡಿಒ ವಿರುದ್ಧ ಕ್ರಮಕೈಗೊಳ್ಳುವಂತೆ ತಾಪಂ ಇಒ ಪೂರ್ಣಿಮಾ ಅವರಿಗೆ ಮನವಿ ಸಲ್ಲಿಸಲಾಗಿದೆ. ಮುಂದಿನ ದಿನಗಳಲ್ಲಿ ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೂ ದೂರು ನೀಡಿ ಅವರ ವರ್ಗಾವಣೆಗೆ ಒತ್ತಾಯಿಸಲಾಗುವುದು ಎಂದರು. ಅಂಗಡಿ-ಮಳಿಗೆ ಟೆಂಡರ್ ಪಡೆದಿರುವ ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ಗ್ರಾಮದ ಬಸ್ ನಿಲ್ದಾಣದ ಹತ್ತಿರ ಇರುವ ಮಳಿಗೆಯನ್ನು ಟೆಂಡರ್ ಪಡೆದು ಪ್ರತಿ ತಿಂಗಳು ಬಾಡಿಗೆಯನ್ನು ಕಟ್ಟಿಕೊಂಡು ಬಂದಿರುತ್ತೇವೆ. ಆದರೂ ಪಿಡಿಒ ಏಕಾಏಕಿ ಅಂಗಡಿಗೆ ಬೀಗ ಹಾಕಿದ್ದಾರೆ. ಇದರಿಂದ ತುಂಬಾ ತೊಂದರೆಯಾಗಿದೆ. ಅಂಗಡಿಯನ್ನು ನಂಬಿಕೊಂಡು ಕುಟುಂಬ ನಿರ್ವಹಣೆ ಮಾಡುತ್ತಿದ್ದೇನೆ. ಕೂಡಲೇ ಬೀಗ ತೆಗೆಸಿಕೊಡಿ. ಇಲ್ಲದಿದ್ದರೆ ಗ್ರಾಮ ಪಂಚಾಯಿತಿ ಎದುರು ಕುಟುಂಬ ಸಮೇತ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಎಚ್ಚರಿಕೆ ನೀಡಿದರು.
ಗ್ರಾಮಸ್ಥ ಮಹದೇವಪ್ರಸಾದ್ ಮಾತನಾಡಿ, ತಾಲೂಕಿನಲ್ಲಿ ಹೊಂಗನೂರು ಗ್ರಾಪಂ ಹೆಚ್ಚಿನ ಜನಸಂಖ್ಯೆ ಹೊಂದಿದೆ. ಪೌರಕಾರ್ಮಿಕರು ಇಲ್ಲದೆ ಸ್ವಚ್ಛತೆ ಮಾಯವಾಗಿದೆ. 1ನೇ ಬ್ಲಾಕ್‌ನಲ್ಲಿ ಕುಡಿಯುವ ನೀರು ಸರಿಯಾಗಿ ಬರುತ್ತಿಲ್ಲ. ಕುಡಿಯುವ ನೀರಿನ ಸಮಸ್ಯೆ ಹೇಳಿಕೊಳ್ಳಲು ಗ್ರಾಪಂ ಗೆ ಹೋದರೆ ಪಿಡಿಒ ಇರುವುದಿಲ್ಲ. ನಮ್ಮ ಸಮಸ್ಯೆಯನ್ನು ಯಾರ ಹತ್ತಿರ ಹೇಳಿಕೊಳ್ಳೋಣ ಎಂದು ಅಳಲು ತೋಡಿಕೊಂಡರು. ಗ್ರಾಮಸ್ಥರಾದ ವೆಂಕಟಮ್ಮ, ಪದ್ಮಾ, ಮಹದೇವಮ್ಮ, ಪುಟ್ಟಮ್ಮ, ಎಸ್‌ಡಿಎಂಸಿ ಅಧ್ಯಕ್ಷ ಮಹದೇವಸ್ವಾಮಿ, ಎಸ್.ರಾಜೇಂದ್ರ, ಭರತ್‌ಕುಮಾರ್, ಭಾಸ್ಕರ್ ಇತರರು ಭಾಗವಹಿಸಿದ್ದರು.