ಮಹಿಳೆಯರಿಗೆ ಆರ್ಥಿಕ ಶಿಸ್ತು ಕಲಿಸಿದ ಧರ್ಮಸ್ಥಳ ಸಂಸ್ಥೆ

14raju9
Published on

ಚಾಮರಾಜನಗರ: ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಮಹಿಳೆಯರಲ್ಲಿ ಆರ್ಥಿಕ ಶಿಸ್ತು, ವ್ಯವಹಾರಿಕ ಜ್ಞಾನ ಮೂಡಿಸಿದೆ ಎಂದು ಯೋಜನೆಯ ಜಿಲ್ಲಾ ನಿರ್ದೇಶಕಿ ಲತಾ ಬಂಗೇರ ಹೇಳಿದರು.


ತಾಲೂಕಿನ ಮಾದಾಪುರದಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಮಾದಾಪುರ ವಲಯದಲ್ಲಿ ಶನಿವಾರ ಆಯೋಜಿಸಿದ್ದ ವಲಯ ಮಟ್ಟದ ಒಕ್ಕೂಟಗಳ ಪದಗ್ರಹಣ ಹಾಗೂ ಸಾಧನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಒಂದು ಗ್ರಾಮದಿಂದ ಪ್ರಾರಂಭವಾದ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಂದು ರಾಜ್ಯಾದ್ಯಂತ ಅಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಹೆಸರು ಗಳಿಸಿದೆ. ಯೋಜನೆಯು ಮಹಿಳೆಯರಲ್ಲಿ ಆರ್ಥಿಕ ಸ್ವಾವಲಂಬನೆ, ಆರ್ಥಿಕ ಶಿಸ್ತು, ವ್ಯವಹಾರ ಜ್ಞಾನ, ಮಕ್ಕಳ ಶಿಕ್ಷಣದ ಬಗ್ಗೆ ಒತ್ತು ಕೊಟ್ಟಿದೆ. ಮಹಿಳೆ ಸಮಾಜದ ಮುಖ್ಯ ವಾಹಿನಿಗೆ ಬರುವಲ್ಲಿ ಸಹಕಾರಿಯಾಗಿದೆ ಎಂದು ಹೇಳಿದರು.


ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಅಭಿವೃದ್ಧಿ ಅಧಿಕಾರಿ ಮಂಜುಳಾ ಮಹಿಳೆಯರು ಮಾಡಬಹುದಾದ ಸ್ವಉದ್ಯೋಗದ ಬಗ್ಗೆ ಮಾಹಿತಿ ನೀಡಿದರು. ಮಾದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುಕನ್ಯಾ ಅಧ್ಯಕ್ಷತೆ ವಹಿಸಿದ್ದರು. ವಲಯದ ಮೇಲ್ವಿಚಾರಕಿ ಮಂಜುಳಾ ವಲಯದ ಸಾಧನ ವರದಿ ಮಂಡಿಸಿದರು. ಎಪಿಎಂಸಿ ಮಾಜಿ ಅಧ್ಯಕ್ಷ ಡಿ.ನಾಗೇಂದ್ರ, ಮಂಗಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿರ್ದೇಶಕ ಕ್ಯಾತಶೆಟ್ಟಿ, ಯೋಜನಾಧಿಕಾರಿ ಹರೀಶ್‌ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net