ಭತ್ತ ಕಟಾವು ಯಂತ್ರಕ್ಕೆ ಬಾಡಿಗೆ ದರ ನಿಗದಿ

11raju1
Published on

ಚಾಮರಾಜನಗರ: ಚೈನ್ ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 2400 ರೂ, ಟೈರ್ (ಸಾಮಾನ್ಯ) ಮಾದರಿ ಭತ್ತದ ಕಟಾವು ಯಂತ್ರಕ್ಕೆ ಪ್ರತಿ ಗಂಟೆಗೆ 1500 ರೂ. ನಿಗದಿ ಮಾಡಲಾಯಿತು.


ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅಧ್ಯಕ್ಷತೆಯಲ್ಲಿ ಶನಿವಾರ ಆಯೋಜಿಸಿದ್ದ ರೈತ ಮುಖಂಡರು ಮತ್ತು ಕೃಷಿ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಭತ್ತ ಕಟಾವು ಯಂತ್ರದ ದರ ಸಂಬಂಧ ಚರ್ಚಿಸಲಾಗಿದೆ.


ಜಿಲ್ಲೆಯಲ್ಲಿ 2022-23ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 12,490 ಹೆಕ್ಟೇರ್ ಪ್ರದೇಶದಲ್ಲಿ ಭತ್ತದ ಬೆಳೆ ಬೆಳೆಯಲಾಗಿದ್ದು, ಈಗಾಗಲೇ ಕಟಾವು ಪ್ರಾರಂಭವಾಗಿದೆ. ಕಳೆದ ಸಾಲಿನಲ್ಲಿ ಜಿಲ್ಲೆಯಲ್ಲಿ ಭತ್ತ ಕಟಾವು ಯಂತ್ರದಿಂದ ಕಟಾವು ಮಾಡಲು ಪ್ರತಿ ಗಂಟೆಗೆ ಚೈನ್ ಮಾದರಿಗೆ 2,200 ರೂ. ದರ ನಿಗದಿಪಡಿಸಲಾಗಿತ್ತು. ಆದರೆ ಕಟಾವು ಯಂತ್ರದ ಸರಬರಾಜುದಾರರು ರೈತರಿಂದ ಹೆಚ್ಚಿನ ಹಣವನ್ನು ಪಡೆಯುತ್ತಿರುವುದಾಗಿ ದೂರು ಬಂದಿತ್ತು.


ಸಭೆಯಲ್ಲಿ ಭತ್ತ ಕಟಾವು ಯಂತ್ರದ ಸಂಬಂಧ ರೈತ ಮುಖಂಡರಿಂದ ಅಭಿಪ್ರಾಯ ಪಡೆಯಲಾಯಿತು. ಭತ್ತ ಕಟಾವು ಯಂತ್ರದ ಏಜೆಂಟರಿಂದಲೂ ಅಭಿಪ್ರಾಯ ಪಡೆಯಲಾಯಿತು. ಅತಿವೃಷ್ಠಿ ಸಂಕಷ್ಟದ ಸಂದರ್ಭದಲ್ಲಿ ಕಟಾವು ಯಂತ್ರದ ಮಾಲೀಕರು ಸಹಕರಿಸಬೇಕು ಎಂದು ತಿಳಿಸಲಾಗಿದೆ. ಸಭೆಯಲ್ಲಿ ರೈತ ಮುಖಂಡರಾದ ಹೊನ್ನೂರು ಪ್ರಕಾಶ್, ಡಾ.ಗುರುಪ್ರಸಾದ್, ಅಣಗಳ್ಳಿ ಬಸವರಾಜು, ದಶರಥ್, ಇನ್ನಿತರ ರೈತ ಮುಖಂಡರು, ರೈತ ಸಂಘಟನೆಗಳ ಪ್ರತಿನಿಧಿಗಳು, ಜಂಟಿ ಕೃಷಿ ನಿರ್ದೇಶಕ ಮಧುಸೂದನ್, ಪ್ರಾದೇಶಿಕ ಸಾರಿಗೆ ಅಧಿಕಾರಿ ಸುಧಾಮಣಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net