ಸಾರ್ವಜನಿಕರು ಸ್ವಚ್ಛತೆಗೆ ಆದ್ಯತೆ ನೀಡಿ

20raju2
Published on

ಚಾಮರಾಜನಗರ: ನಗರಸಭೆ ವ್ಯಾಪ್ತಿಯಲ್ಲಿ ಸಾರ್ವಜನಿಕರು ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿ ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಸಲಹೆ ನೀಡಿದರು.

ನಗರದ ನಗರಸಭೆ ಮುಂಭಾಗ ಸ್ವಚ್ಛ ಭಾರತ್ ಯೋಜನೆಯಡಿ ಆಯೋಜಿಸಿದ್ದ ಮರುಬಳಕೆ ಮತ್ತು ಮರುಬಳಕೆ ಕಡಿಮೆಗೊಳಿಸುವ ಕೇಂದ್ರ(ಆರ್‌ಆರ್‌ಆರ್) ಉದ್ಘಾಟನೆ ಕಾರ್ಯಕ್ರಮದಲ್ಲಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ನಗರಸಭೆ, ಪಟ್ಟಣ ಪಂಚಾಯಿತಿ ಹಾಗೂ ಪುರಸಭೆ ವ್ಯಾಪ್ತಿಯಲ್ಲಿ ಸ್ವಚ್ಛತೆ ಬಗ್ಗೆ ಸಾಕಷ್ಟು ಅರಿವು ಮೂಡಿಸುವ ಪ್ರಯತ್ನ ಮಾಡಲಾಗುತ್ತಿದೆ. ಅದಾಗ್ಯೂ ಸ್ವಚ್ಛತೆ ಬಗ್ಗೆ ಅರಿವು ಬಂದಿಲ್ಲ. ಹಾಗಾಗಿ, ನಗರಸಭೆ ವ್ಯಾಪ್ತಿಯಲ್ಲಿ ‘ನನ್ನ ಜೀವನ ನನ್ನ ಸ್ವಚ್ಛ ನಗರ’ ಯೋಜನೆಯಡಿ ಆರ್‌ಆರ್‌ಆರ್ ಕೇಂದ್ರವನ್ನು ತೆರೆಯಲಾಗಿದೆ ಎಂದು ತಿಳಿಸಿದರು.

ತ್ಯಾಜ್ಯ ವಸ್ತುಗಳ ಪುನರ್ಬಳಕೆ, ಮರುಬಳಕೆ ಹಾಗೂ ಕಡಿಮೆಗೊಳಿಸುವ ಉದ್ದೇಶದಿಂದ ನಗರಸಭಾ ವ್ಯಾಪ್ತಿಯಲ್ಲಿ 5 ಕೇಂದ್ರಗಳನ್ನು ತೆರೆಯಲಾಗಿದೆ. ಸಾರ್ವಜನಿಕರು, ಎನ್‌ಜಿಒ, ಸ್ವಸಹಾಯ ಸಂಘಗಳು ಹಾಗೂ ಸ್ವಯಂ ಸೇವಕರು ತಾವು ಬಳಕೆ ಮಾಡಿದ ತ್ಯಾಜ್ಯ ವಸ್ತುಗಳನ್ನು ಆರ್.ಆರ್.ಆರ್ ಕೇಂದ್ರದಲ್ಲಿ ಅದನ್ನು ನೀಡಿ ನೋಂದಣಿ ಮಾಡಿಕೊಂಡು, ಪ್ರಮಾಣ ಪತ್ರವನ್ನು ಪಡೆಯುವುದರ ಜತೆಗೆ ಪೆನ್ನು, ಪೆನ್ಸಿಲ್, ನೋಟ್ ಪುಸ್ತಕ ಹಾಗೂ ಸಾವಯವ ಗೊಬ್ಬರವನ್ನು ಪಡೆದುಕೊಳ್ಳಬಹುದಾಗಿದೆ. ಸಾರ್ವಜನಿಕರು ತಮ್ಮಲ್ಲಿರುವ ಉಪಯೋಗಕ್ಕೆ ಬಾರದ ವಸ್ತುಗಳನ್ನು ಆರ್.ಆರ್.ಆರ್ ಕೇಂದ್ರಗಳಿಗೆ ನೀಡಿದರೆ ತಮ್ಮ ಸುತ್ತಮುತ್ತಲಿನ ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಈ ಮೂಲಕ ನಗರವನ್ನು ಸ್ವಚ್ಛತೆಯ ಕಡೆಗೆ ಕೊಂಡೊಯ್ಯಬಹುದಾಗಿದೆ ಎಂದರು.

ನಗರಸಭಾ ಪೌರಾಯುಕ್ತ ರಾಮದಾಸ್ ಮಾತನಾಡಿ, ನಗರದ 31 ವಾರ್ಡ್‌ಗಳ ತ್ಯಾಜ್ಯ ವಸ್ತುಗಳ ಮರುಬಳಕೆಗೆ ಒತ್ತುನೀಡುವ ಉದ್ದೇಶದಿಂದ ಈ ಕೇಂದ್ರವನ್ನು ತೆರೆಯಲಾಗಿದೆ. ತ್ಯಾಜ್ಯ ವಸ್ತುಗಳಾದ ಪ್ಲಾಸ್ಟಿಕ್ ಚೀಲ, ಕ್ಯಾರಿ ಬ್ಯಾಗ್‌ಗಳು, ಹಳೆಯ ಪುಸ್ತಕ, ದಿನಪತ್ರಿಕೆ, ಬಳಕೆ ಮಾಡಿರುವ ಬಟ್ಟೆ, ಚಪ್ಪಲಿಗಳು ಹಾಗೂ ಎಲೆಕ್ಟ್ರನಿಕ್ ವಸ್ತುಗಳನ್ನು ನೀಡಿ ಪ್ರೋತ್ಸಾಹವಾಗಿ ಲೇಖನಿ ಸಾಮಗ್ರಿ, ಸಾವಯವ ಗೊಬ್ಬರ ಹಾಗೂ ಡಿಜಿಟಲ್ ಪ್ರಮಾಣ ಪತ್ರವನ್ನು ಪಡೆದುಕೊಳ್ಳಬಹುದಾಗಿದೆ ಎಂದರು.
ಯೋಜನ ನಿರ್ದೇಶಕಿ ಸುಧಾ, ಪರಿಸರ ಇಂಜಿನಿಯರ್ ಗಿರಿಜಾ, ಕಂದಾಯ ಅಧಿಕಾರಿ ಶರವಣ, ಸಮುದಾಯ ಸಂಘಟನಾಧಿಕಾರಿ ವೆಂಕಟನಾಯ್ಕ, ಎಇಇ ನಟರಾಜ್, ಹಿರಿಯ ಆರೋಗ್ಯ ನಿರೀಕ್ಷಕಿ ಸುಷ್ಮಾ, ಮಂಜು, ನಗರಸಭಾ ಸದಸ್ಯ ರಾಘವೇಂದ್ರ, ಅಬ್ರಾರ್ ಅಹಮ್ಮದ್, ಮಮತಾ ಹಾಗೂ ಇತರರು ಹಾಜರಿದ್ದರು.

ನಗರಸಭಾ ವ್ಯಾಪ್ತಿಯಲ್ಲಿ 5 ಕೇಂದ್ರಗಳು:
ನಗರಸಭಾ ವ್ಯಾಪ್ತಿಯಲ್ಲಿ 5 ಆರ್‌ಆರ್‌ಆರ್ ಕೇಂದ್ರಗಳನ್ನು ತೆರೆಯಲಾಗಿದೆ. ನಗರಸಭಾ ಕಚೇರಿ ಆವರಣ, ಕರಿನಂಜನಪುರ ಶೂನ್ಯ ತ್ಯಾಜ್ಯ ನಿರ್ವಹಣಾ ಘಟಕ, ಸಂತೇಮರಹಳ್ಳಿ ರಸ್ತೆಯ ಪುಟ್ಟಮ್ಮಣ್ಣಿ ಪಾರ್ಕ್, ಖಾಸಗಿ ಬಸ್ ನಿಲ್ದಾಣದ ಆವರಣ ಹಾಗೂ ರಾಮಸಮುದ್ರ ಬಡಾವಣೆಯ ಪಂಪ್ ಹೌಸ್ ಆವರಣದಲ್ಲಿ ಕೇಂದ್ರವನ್ನು ತೆರೆಯಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net