

ಚಾಮರಾಜನಗರ: ಜಿಲ್ಲೆಯಲ್ಲಿ ಹಮ್ಮಿಕೊಂಡಿರುವ ಸಮಗ್ರ ನೇತ್ರ ತಪಾಸಣೆ ಮತ್ತು ಉಚಿತ ಶಸ್ತ್ರಚಿಕಿತ್ಸಾ ಶಿಬಿರ ಆಶಾಕಿರಣ ಆಂದೋಲನವನ್ನು ಯಶಸ್ವಿಗೊಳಿಸಿ, ಅಂಧತ್ವ ಪ್ರಮಾಣ ತಗ್ಗಿಸಲು ಶ್ರಮವಹಿಸಿ ಎಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಮಗ್ರ ನೇತ್ರ ತಪಾಸಣೆ ಮತ್ತು ಉಚಿತ ಶಸ್ತ್ರ ಚಿಕಿತ್ಸಾ ಶಿಬಿರ ಆಶಾಕಿರಣ ಆಂದೋಲನ ಕುರಿತ ಸೋಮವಾರ ಆಯೋಜಿಸಿದ್ದ ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಅಂಧತ್ವ ಪ್ರಮಾಣವನ್ನು ತಗ್ಗಿಸುವ ಮಹತ್ತರ ಉದ್ದೇಶವನ್ನಿಟ್ಟುಕೊಂಡು ಸಮಗ್ರ ನೇತ್ರ ತಪಾಸಣೆ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ನಡೆಸಲು ಪ್ರಾಯೋಜಿಕ ಯೋಜನೆಯಡಿ ಆಯ್ಕೆಯಾಗಿರುವ ರಾಜ್ಯದ ನಾಲ್ಕು ಜಿಲ್ಲೆಗಳ ಪೈಕಿ ಚಾಮರಾಜನಗರವೂ ಒಂದಾಗಿದೆ. ಕಣ್ಣಿನ ಆರೋಗ್ಯ ರಕ್ಷಣೆಗೆ ಒತ್ತು ನೀಡಲಿರುವ ಇಂತಹ ಸದಾವಕಾಶವನ್ನು ಜಿಲ್ಲೆ ಸಮರ್ಪಕವಾಗಿ ಬಳಸಿಕೊಳ್ಳಬೇಕಿದೆ. ಹೀಗಾಗಿ ಆಶಾಕಿರಣ ಆಂದೋಲನವನ್ನು ಸಮರ್ಪಕವಾಗಿ ಅನುಷ್ಠಾನ ಮಾಡಬೇಕೆಂದು ತಿಳಿಸಿದರು.
ಜಿಲ್ಲೆಯ ನಾಗರಿಕರಿಗೆ ಎರಡು ಹಂತಗಳಲ್ಲಿ ಕಣ್ಣಿನ ತಪಾಸಣೆ ಕಾರ್ಯ ನಡೆಯಲಿದ್ದು, ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ, ಕಣ್ಣಿನ ಇತರ ತೊಂದರೆಗಳಿಗೆ ಉಚಿತವಾಗಿ ಚಿಕಿತ್ಸೆ, ಕನ್ನಡಕ ನೀಡಲಾಗುತ್ತದೆ. ಮನೆ ಮನೆಗೆ ಭೇಟಿ ನೀಡಿ ಕಣ್ಣಿನ ತಪಾಸಣೆ, ನಿರ್ವಹಣೆ ಉತ್ತಮ ದೃಷ್ಟಿಯ ಪ್ರಾಮುಖ್ಯತೆ, ಕಣ್ಣುಗಳ ಸಂರಕ್ಷಣೆ ಕುರಿತು ಕಾರ್ಯ ಚಟುವಟಿಕೆಗಳನ್ನು ನಡೆಸಿ ಅರಿವು ಮೂಡಿಸಲಾಗುತ್ತದೆ ಎಂದರು.
ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ನೇತ್ರ ತಪಾಸಣೆ ಹಾಗೂ ಇದರ ಸಂಬಂಧಿ ಚಟುವಟಿಕೆಗಳಿಗೆ ಪ್ರತ್ಯೇಕ ಕಾರ್ಯ ಯೋಜನೆ ರೂಪಿಸಬೇಕು. ಕಣ್ಣಿನ ಪೊರೆಯಿಂದ ಗುರುತಿಸಲ್ಪಡುವವರಿಗೆ ಹತ್ತಿರದ ಸರ್ಕಾರಿ ಆಸ್ಪತ್ರೆಗಳಲ್ಲಿ ಮತ್ತು ಸರ್ಕಾರೇತರ ಸ್ವಯಂಸಂಸ್ಥೆಗಳ ನೆರವು ಪಡೆದು ಶಸ್ತ್ರಚಿಕಿತ್ಸೆಗೆ ಶಿಫಾರಸು ಮಾಡಬೇಕು. ಶಿಬಿರಗಳ ಆಯೋಜನೆಗೆ ಸ್ವಯಂಸೇವಾ ಸಂಸ್ಥೆಗಳ ಸಹಕಾರ ಪಡೆಯುವುದರೊಂದಿಗೆ ಇತರರ ಸೇವೆಯನ್ನು ಪಡೆಯಬೇಕು ಎಂದು ತಿಳಿಸಿದರು.
ಸಮಗ್ರ ನೇತ್ರ ತಪಾಸಣೆ ಆಂದೋಲನಕ್ಕೆ ವಿವಿಧ ಇಲಾಖೆಗಳು ತೊಡಗಿಕೊಳ್ಳಬೇಕು. ಕಾಡಂಚಿನ ಗ್ರಾಮಗಳು, ಗುಡ್ಡಗಾಡು ಪ್ರದೇಶಗಳಲ್ಲಿಯೂ ತಪಾಸಣಾ ಕಾರ್ಯ ನಡೆಯಲಿರುವುದರಿಂದ ಅರಣ್ಯ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಅಗತ್ಯ ಅನುಕೂಲಗಳನ್ನು ಕಲ್ಪಿಸಬೇಕು. ಆಶಾ ಕಾರ್ಯಕರ್ತೆಯರ ಸಹಕಾರ ಪ್ರಮುಖವಾಗಿದೆ. ಆರೋಗ್ಯ ಇಲಾಖೆ ಅಧಿಕಾರಿಗಳು ಸಿಬ್ಬಂದಿ ಈ ವಿಶೇಷ ಆರೋಗ್ಯ ಕಾರ್ಯಕ್ರಮವನ್ನು ಎಲ್ಲ ರೀತಿಯ ಸಮನ್ವಯದೊಂದಿಗೆ ಫಲಪ್ರದ ಗೊಳಿಸಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸರಸ್ವತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಜಿಲ್ಲಾ ಅಂಧತ್ವ ನಿಯಂತ್ರಣಾಧಿಕಾರಿ ಹಾಗೂ ಕುಷ್ಠರೋಗ ನಿರ್ಮೂಲನಾ ಅಧಿಕಾರಿ ಡಾ. ಪಿ. ಚಂದ್ರಶೇಖರ್, ಹಿರಿಯ ನೇತ್ರ ತಜ್ಞರಾದ ಡಾ. ಎಸ್. ಬಾಲಸುಬ್ರಹ್ಮಣ್ಯ, ಡಾ. ದೈವಿಕ್ ಸಿ.ಎಂ, ಆರ್.ಸಿ.ಎಚ್. ಅಧಿಕಾರಿ ಡಾ. ಮಂಜುನಾಥ್, ಜಿಲ್ಲಾ ಸರ್ವಲೆನ್ಸ್ ಅಧಿಕಾರಿ ಡಾ. ನಾಗರಾಜು, ತಾಲೂಕು ಆರೋಗ್ಯ ಅಧಿಕಾರಿಗಳಾದ ಡಾ. ಪ್ರಕಾಶ್, ಡಾ. ಗೋಪಾಲ್, ಡಾ.ಶ್ರೀನಿವಾಸ್ ಮತ್ತು ಇತರರು ಇದ್ದರು.