

ಚಾಮರಾಜನಗರ: ಅಭಿವೃದ್ಧಿ ವಿಚಾರದಲ್ಲಿ ಈವರೆಗೂ ಭರವಸೆಗಳಲ್ಲೇ ಬದುಕುತ್ತಿರುವ ಗಡಿಜಿಲ್ಲೆ ಚಾಮರಾಜನಗರಕ್ಕೆ ಮತ್ತೊಂದು ಆಶ್ವಾಸನೆ ಸಿಕ್ಕಿದೆ. ನೂತನ ಜಿಲ್ಲಾಧಿಕಾರಿ ಸಿ.ಟಿ.ಶಿಲ್ಪಾನಾಗ್ ಅಧಿಕಾರ ವಹಿಸಿಕೊಂಡ ಮೊದಲ ದಿನವೇ ವಾಗ್ದಾನವೊಂದನ್ನು ನೀಡಿದ್ದಾರೆ.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಜಿಲ್ಲಾ ಪಂಚಾಯಿತಿ ಸಿಇಒ ಮತ್ತು ಪ್ರಭಾರ ಜಿಲ್ಲಾಧಿಕಾರಿ ಎಸ್.ಪೂವಿತಾ ಅವರಿಂದ ನೂತನ ಡಿಸಿ ಶಿಲ್ಪಾನಾಗ್ ಅಧಿಕಾರ ಸ್ವೀಕಾರ ಮಾಡಿದರು. ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಾನು ಇಲ್ಲಿಂದ ವರ್ಗಾವಣೆಯಾಗಿ ಹೋಗುವ ಮೊದಲು ಯಾವ ರೀತಿ ಬದಲಾವಣೆ ತರಬೇಕೆಂದು ಚಿಂತಿಸಿ ಕೆಲಸ ಮಾಡುತ್ತೇನೆ’ ಎಂದರು.
ಮಾನವ ಮತ್ತು ವನ್ಯಜೀವಿ ಸಹಬಾಳ್ವೆಯ ಸುಂದರ ಜಿಲ್ಲೆ ಚಾಮರಾಜನಗರ. ನನಗೆ ಇಲ್ಲಿ ಕೆಲಸ ಮಾಡುವುದು ತುಂಬಾ ಖುಷಿ ತಂದಿದೆ. ಯಾವುದೇ ಅಧಿಕಾರಿ ಇಲ್ಲಿಗೆ ಬಂದರೂ ಒಳ್ಳೆಯ ಕೆಲಸ ಮಾಡಲು ಅವಕಾಶವಿದೆ.ಅಧಿಕಾರಿ ಮತ್ತು ಸಿಬ್ಬಂದಿಯ ಉತ್ತಮ ತಂಡವಿದ್ದು, ಜನಪ್ರತಿನಿಧಿಗಳಿಂದಲೂ ಸಹಕಾರ ಸಿಗುವ ನಿರೀಕ್ಷೆ ಇದೆ. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ಟಾಪ್-3ಗೆ ಆದ್ಯತೆ: ಜಿಲ್ಲೆಗೆ ಬೇಕಾಗಿರುವ ಅವಶ್ಯಕತೆಗಳನ್ನು ತಿಳಿದುಕೊಂಡು ಟಾಪ್-3 ವಿಷಯಗಳಿಗೆ ಮೊದಲ ಆದ್ಯತೆ ನೀಡುತ್ತೇನೆ. ಈ ಸಂಬಂಧ ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದುಕೊಳ್ಳುತ್ತೇನೆ. ಬುಡಕಟ್ಟು ಜನರು ಮತ್ತು ಮಹಿಳೆಯರ ಅಭಿವೃದ್ಧಿ, ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಲಾಗುವುದು. ಸರ್ಕಾರಿ ಕಚೇರಿಗೆ ಬರುವ ಸಾರ್ವಜನಿಕರಿಗೆ ಕೆಲಸ, ಕಾರ್ಯಗಳು ತ್ವರಿತಗತಿಯಲ್ಲಿ ಆಗಬೇಕು. ಯಾರನ್ನೂ ಕಚೇರಿಯಲ್ಲಿ ಕಾಯಿಸುವಂತಿಲ್ಲ. ಸಮಸ್ಯೆಗಳನ್ನು ಆಯಾ ಹಂತದಲ್ಲೇ ಬಗೆಹರಿಸಲು ಸೂಚನೆ ನೀಡುತ್ತೇನೆ ಎಂದರು. ಈ ಸಂದರ್ಭ ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಕೊಳ್ಳೇಗಾಲ ಉಪವಿಭಾಗಾಧಿಕಾರಿ ಮಹೇಶ್ ಇದ್ದರು.