ಸುಳವಾಡಿ ಸಂತ್ರಸ್ತರಿಗೆ 2 ಎಕರೆ ಜಮೀನು ನೀಡಿ

24raju1
Published on

ಚಾಮರಾಜನಗರ:ಹನೂರು ತಾಲೂಕಿನ ಸುಳವಾಡಿಯ ಕಿಚ್ಚುಗುತ್ತಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ಪ್ರಕರಣದಲ್ಲಿ ನೊಂದ ಕುಂಟುಂಬಗಳಿಗೆ ಅಂಬೇಡ್ಕರ್ ಅಭಿವೃದ್ಧಿ ನಿಗಮದ ಯೋಜನೆಯಡಿ 2 ಎಕರೆ ಜಮೀನು ನೀಡಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಆಯೋಜಿಸಿದ್ದ ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಸುಳವಾಡಿ ಪ್ರಕರಣ ಗಂಭೀರ ಪ್ರಕರಣವಾಗಿದ್ದು, ಸಂತ್ರಸ್ತ ಕುಟುಂಬದವರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಆರೋಗ್ಯ ಇಲಾಖೆ ವತಿಯಿಂದ ಶಿಬಿರಗಳನ್ನು ಆಯೋಜಿಸಿ ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸಬೇಕು. ಸಂತ್ರಸ್ತರ ಆರೋಗ್ಯ ತಪಾಸಣೆಯನ್ನು ಕಟ್ಟುನಿಟ್ಟಾಗಿ ಕೈಗೊಳ್ಳಬೇಕು ಎಂದು ತಿಳಿಸಿದರು.

ಕೊಳ್ಳೇಗಾಲ ತಾಲೂಕಿನ ನರೀಪುರ ಗ್ರಾಮದಲ್ಲಿ ಪರಿಶಿಷ್ಟರಿಗೆ ನಿವೇಶನ ನೀಡಿದ್ದು, ಸೂಕ್ತ ದಾಖಲೆಗಳನ್ನು ತಹಸೀಲ್ದಾರ್ ಅವರು ಒದಗಿಸಬೇಕು. ಪರಿಶಿಷ್ಟರ ಮೇಲಿನ ದೌರ್ಜನ್ಯಗಳ ಬಗ್ಗೆ ಸೂಕ್ತ ಕ್ರಮ ವಹಿಸಬೇಕು. ಈ ನಿಟ್ಟಿನಲ್ಲಿ ಯಾವುದೇ ವಿಳಂಬ ಧೋರಣೆ ಬೇಡ. ದೌರ್ಜನ್ಯ ಪ್ರಕರಣಗಳ ಇತ್ಯರ್ಥಕ್ಕೆ ಹಾಗೂ ಬಾಕಿ ಉಳಿದಿರುವ ಪ್ರಕರಣಗಳ ವಿರುದ್ದ ಕ್ರಮ ವಹಿಸಲು ಹೆಚ್ಚು ಒತ್ತು ನೀಡಬೇಕು. ಪರಿಶಿಷ್ಟರ ಮೇಲೆ ಅಮಾನವೀಯ ಪ್ರಕರಣಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ನಿರ್ದೇಶನ ನೀಡಿದರು.

ಜಿಲ್ಲಾ ಜಾಗೃತಿ ಮತ್ತು ಉಸ್ತುವಾರಿ ಸಮಿತಿ ಸಭೆ ಸದಸ್ಯರಾದ ಕೆಂಪನಪಾಳ್ಯ ಸಿದ್ದರಾಜು, ಆಸಿಫ್ ಉಲ್ಲಾ, ಗುಂಡ್ಲುಪೇಟೆ ಸಿದ್ದರಾಜು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಜೆ. ಉದೇಶ್, ಉಪವಿಭಾಗಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯಿತಿ ಮುಖ್ಯ ಯೋಜನಾಧಿಕಾರಿ ಪ್ರಭುಸ್ವಾಮಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಮಲ್ಲಿಕಾರ್ಜುನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಜಿಲ್ಲಾ ಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net