

ಚಾಮರಾಜನಗರ: ಸಾರ್ವಜನಿಕರ ಸಮಸ್ಯೆ, ಕೆಲಸಗಳಿಗೆ ವಿಳಂಬ ಮಾಡದೆ ತುರ್ತಾಗಿ ಸ್ಪಂದಿಸಿ ಪರಿಹರಿಸುವ ಕಾರ್ಯವನ್ನು ಅಧಿಕಾರಿಗಳು ನಿರ್ವಹಿಸಬೇಕೆಂದು ಜಿಲ್ಲಾಧಿಕಾರಿ ಸಿ.ಟಿ. ಶಿಲ್ಪಾನಾಗ್ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಅಧಿಕಾರಿಗಳ ಪರಿಚಯ ಮಾಡಿಕೊಂಡು ಪ್ರತಿ ಇಲಾಖೆಗಳ ಮಾಹಿತಿ ಪಡೆದು ಸಭೆ ನಡೆಸಿದ ಸಂದರ್ಭ ಮಾತನಾಡಿದ ಅವರು, ಜನರು ಅವರ ಕೆಲಸವಾಗಬೇಕೆಂದು ಅಧಿಕಾರಿಗಳ ಮೇಲೆ ಹೆಚ್ಚಿನ ನಿರೀಕ್ಷೆ ಹೊಂದಿರುತ್ತಾರೆ. ಸಾರ್ವಜನಿಕರಿಗೆ ಸ್ಪಂದಿಸಿ ಅವರ ನಿರೀಕ್ಷೆಗೆ ತಕ್ಕಂತೆ ಕೂಡಲೇ ಕೆಲಸ ಮಾಡಿಕೊಡಬೇಕು. ವಿಳಂಬ ಮಾಡಬಾರದು ಎಂದರು.
ಪ್ರತಿ ಇಲಾಖೆಗಳ ಅಧಿಕಾರಿಗಳು ಇಲಾಖಾ ವ್ಯಾಪ್ತಿಯ ಕಾರ್ಯಕ್ರಮಗಳನ್ನು ಜನರಿಗೆ ತಲುಪಿಸಬೇಕು. ಸರ್ಕಾರದ ಸವಲತ್ತುಗಳು ಸಮರ್ಪಕವಾಗಿ ಲಭ್ಯವಾಗಬೇಕು. ಸಕಾರಾತ್ಮಕವಾಗಿ ಹಾಗೂ ಆತ್ಮಸಂತೋಷದಿಂದ ಅಧಿಕಾರಿಗಳು ಕರ್ತವ್ಯ ನಿರ್ವಹಿಸಬೇಕು. ಸವಾಲುಗಳನ್ನು ಸ್ವೀಕರಿಸಿ ಕಾರ್ಯನಿರ್ವಹಿಸುವ ಮನೋಭಾವನೆ ರೂಢಿಸಿಕೊಳ್ಳಬೇಕು ಎಂದು ತಿಳಿಸಿದರು.
ಅಂಗನವಾಡಿಗಳು, ಹಾಸ್ಟೆಲ್‌ಗಳಿಗೆ ಸೂಕ್ತ ಸೌಲಭ್ಯ ನೀಡುವ ಮೂಲಕ ಉತ್ತಮವಾಗಿ ನಿರ್ವಹಣೆ ಮಾಡಬೇಕು. ಮಕ್ಕಳ ಕಲಿಕೆಯಲ್ಲಿ ಸುಧಾರಣೆಯಾಗಬೇಕು. ಗುಣಮಟ್ಟದ ಕಲಿಕಾ ಸಾಮಗ್ರಿ, ಸಾಮರ್ಥ್ಯಾಭಿವೃದ್ಧಿ, ಮೂಲ ಸೌಕರ್ಯ ಬಲಪಡಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಮುಂದಾಗಬೇಕಿದೆ ಎಂದು ತಿಳಿಸಿದರು.
ಕಡತ ವಿಲೇವಾರಿ ಮಾಡಿ:
ಇಲಾಖೆಗಳಲ್ಲಿ ಕಡತ ನಿರ್ವಹಣೆ ಸಮರ್ಪಕವಾಗಿರಬೇಕು. ಕಡತಗಳನ್ನು ಬಾಕಿ ಇರಿಸಿಕೊಳ್ಳದೇ ಆಯಾ ನಿಗದಿತ ಅವಧಿಯಲ್ಲಿ ವಿಲೇವಾರಿ ಮಾಡಬೇಕು. ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಚಟುವಟಿಕೆಗಳಿಗೆ ಪೂರಕವಾದ ಸೌಲಭ್ಯಗಳಿಗೆ ಕೊರತೆಯಾಗಬಾರದು. ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜನರು ಬಳಸಿಕೊಳ್ಳುವಂತೆ ಅಗತ್ಯವಿರುವ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದರು.
ಜಿಪಂ ಸಿಇಒ ಎಸ್. ಪೂವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಉಪವಿಭಾಗಾಧಿಕಾರಿ ಮಹೇಶ್, ತಹಸೀಲ್ದಾರರು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.