ಪ್ರಕೃತಿ ವಿಕೋಪ ತಡೆಗೆ ಸನ್ನದ್ಧರಾಗಿರಿ

23raju5
Published on

ಚಾಮರಾಜನಗರ: ಮಳೆ, ಪ್ರವಾಹ ಸೇರಿದಂತೆ ಪ್ರಕೃತಿ ವಿಕೋಪದಿಂದ ಉಂಟಾಗಬಹುದಾದ ಪರಿಣಾಮಗಳನ್ನು ಸಮರ್ಥವಾಗಿ ಎದುರಿಸಲು ಜಿಲ್ಲೆಯಲ್ಲಿ ಪೂರ್ವ ಸಿದ್ಧತೆಯೊಂದಿಗೆ ಅಧಿಕಾರಿಗಳು ಸನ್ನದ್ಧರಾಗಿರಬೇಕೆಂದು ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸೂಚಿಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಆಯೋಜಿಸಿದ್ದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಈಗಾಗಲೇ ಜಿಲ್ಲಾದ್ಯಂತ ಮಳೆ ಪ್ರಾರಂಭವಾಗಿದೆ. ಮಳೆಯಿಂದ ಆಗಬಹುದಾದ ಹಾನಿ ಬಗ್ಗೆ ಅಧಿಕಾರಿಗಳಿಗೆ ಪೂರ್ವ ಮಾಹಿತಿ ಇರಬೇಕು. ಯಾವ ಪ್ರದೇಶ ಮಳೆ, ಪ್ರಕೃತಿ ವಿಕೋಪದಿಂದ ಬಾಧಿತವಾಗಲಿದೆ ಎಂಬ ಬಗ್ಗೆ ಪೂರ್ಣ ವಿವರ ಹೊಂದಿರಬೇಕು. ಮಳೆಯಿಂದ ಸಂಭವಿಸಬಹುದಾದ ಗಂಭೀರ ಪರಿಸ್ಥಿತಿ ಎದುರಿಸುವ ನಿಟ್ಟಿನಲ್ಲಿ ಪೂರ್ವ ಸಿದ್ಧತೆ ಕೈಗೊಂಡಿರಬೇಕು ಎಂದು ತಿಳಿಸಿದರು.

ಜಿಲ್ಲೆಯಲ್ಲಿ ಸುರಿದಿರುವ ಮಳೆಯಿಂದ ಹಾನಿಗೀಡಾಗಿರುವ ತೋಟಗಾರಿಕೆ, ಕೃಷಿ ಬೆಳೆ ಹಾನಿ ಬಗ್ಗೆ ಕಂದಾಯ, ತೋಟಗಾರಿಕೆ, ಕೃಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಸ್ಥಳ ಪರಿಶೀಲಿಸಿ ಬೆಳೆನಷ್ಟ ಅಂದಾಜು ವರದಿ ಸಲ್ಲಿಸಬೇಕು. ಮನೆಗಳಿಗೆ ಹಾನಿಯಾಗಿದ್ದಲ್ಲಿ ಆ ಕುರಿತು ಕೂಡಲೇ ವರದಿ ನೀಡಬೇಕು. ಮಳೆ ಸಂಬಂಧಿ ಸಂತ್ರಸ್ತರಿಗೆ ಪರಿಹಾರ ನೀಡುವಲ್ಲಿ ವಿಳಂಬ ಮಾಡಬಾರದು ಎಂದು ತಾಕೀತು ಮಾಡಿದರು.

ಜಿಲ್ಲಾ ತುರ್ತು ನಿರ್ವಹಣಾ ಕೇಂದ್ರವು ದಿನದ 24 ಗಂಟೆಯೂ ಕಾರ್ಯ ನಿರ್ವಹಿಸಬೇಕು. ಇದೇ ರೀತಿ ತಾಲೂಕು ಮಟ್ಟದಲ್ಲಿಯೂ ತುರ್ತು ನಿರ್ವಹಣಾ ಕೇಂದ್ರಗಳು ಸಹಾಯವಾಣಿ ಮೂಲಕ ಜನರಿಗೆ ನೆರವಾಗಬೇಕು. ಎಲ್ಲಿಯೇ ಮಳೆ ಸಂಬಂಧಿ ವಿಪತ್ತು ಮಾಹಿತಿ ಬಂದಲ್ಲಿ ತುರ್ತು ಕಾರ್ಯಾಚರಣೆ ನಡೆಸಬೇಕು. ಪರಿಹಾರ ಕಾರ್ಯಗಳಿಗೆ ಚುರುಕಾಗಿ ಸ್ಪಂದಿಸಬೇಕು ಎಂದರು.

ಮಳೆ ಪ್ರಮಾಣ ಜಾಸ್ತಿಯಾಗಿ ಜಲಾಶಯಗಳಿಂದ ಹೆಚ್ಚು ನೀರು ಬಿಡುಗಡೆಯಾದರೆ ಕೊಳ್ಳೇಗಾಲ ಭಾಗದ ಕೆಲ ಗ್ರಾಮಗಳು ಪ್ರವಾಹ ಭೀತಿ ಎದುರಿಸಬೇಕಾಗುತ್ತದೆ. ಇಂತಹ ಗ್ರಾಮಗಳನ್ನು ಈ ಹಿಂದೆಯೂ ಗುರುತಿಸಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಈ ಬಾರಿಯೂ ಪ್ರವಾಹ ಎದುರಾದಲ್ಲಿ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು. ಜಿಲ್ಲೆಯಲ್ಲಿರುವ ಕೆರೆಗಳ ಸಂರಕ್ಷಣೆ ಆಗಬೇಕು. ಅಗ್ನಿಶಾಮಕ, ತುರ್ತು ಸೇವೆಗಳ ಇಲಾಖೆ ಸ್ವಯಂಸೇವಕರೊಂದಿಗೆ ಸನ್ನದ್ಧರಾಗಿರಬೇಕು. ರಕ್ಷಣಾ ಸಲಕರಣೆಗಳನ್ನು ಕ್ರೋಡೀಕರಿಸಿ ಸುಸ್ಥಿತಿಯಲ್ಲಿಟ್ಟುಕೊಳ್ಳಬೇಕು.

ವಿಪತ್ತು ಪರಿಸ್ಥಿತಿ ನಿರ್ವಹಣೆಗೆ ಪ್ರವಾಹ ಬಾಧಿತವಾಗಬಹುದಾದ ಆಯಾ ಗ್ರಾಮಗಳಲ್ಲಿ ಸಮಿತಿ ರಚಿಸಿರಬೇಕು. ಸ್ವಯಂ ಸೇವಕರ ರಕ್ಷಣಾ ತಂಡಗಳಿಗೆ ಸೂಕ್ತ ತರಬೇತಿ ಹಮ್ಮಿಕೊಂಡು ಸಜ್ಜುಗೊಳಿಸಬೇಕು. ಸಂತ್ರಸ್ತ ಪ್ರದೇಶಗಳಲ್ಲಿ ಅಗತ್ಯ ಬಿದ್ದರೆ ಕಾಳಜಿ ಕೇಂದ್ರ, ವೈದ್ಯಕೀಯ ಸೌಲಭ್ಯ, ಸಂತ್ರಸ್ತರಿಗೆ ಆರ್ಥಿಕ ನೆರವು ನೀಡಲು ಎಲ್ಲ ಅವಶ್ಯಕ ಮುಂಜಾಗ್ರತಾ ಕ್ರಮಗಳಿಗೆ ಸಿದ್ಧರಾಗಿರಬೇಕೆಂದು ನಿರ್ದೇಶನ ನೀಡಿದರು.

ಮಳೆ ಸಂದರ್ಭದಲ್ಲಿ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಚರಂಡಿಗಳಲ್ಲಿ ನೀರು ತುಂಬಿ ಜನವಸತಿ ಪ್ರದೇಶಗಳಿಗೆ ನುಗ್ಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಮಳೆ ನೀರು ಸರಾಗವಾಗಿ ಹರಿಯಲು ಚರಂಡಿ, ಕಾಲುವೆ, ಸೇತುವೆ, ಕಲ್ವರ್ಟ್‌ಗಳಲ್ಲಿರುವ ಹೂಳು ತೆಗೆದು ಸ್ವಚ್ಛಗೊಳಿಸಬೇಕು. ತಗ್ಗು ಪ್ರದೇಶಗಳಲ್ಲಿ ನಿಂತ ನೀರನ್ನು ಹೊರಹಾಕಲು ಅಗತ್ಯವಿರುವ ವ್ಯವಸ್ಥೆ ಮಾಡಬೇಕು. ವಿದ್ಯುತ್ ಸರಬರಾಜು ಇಲಾಖೆ ವಿದ್ಯುತ್ ತಂತಿ ಹಾದು ಹೋಗುವ ಮಾರ್ಗಗಳಲ್ಲಿ ಮಳೆ -ಗಾಳಿಗೆ ಯಾವುದೇ ಅನಾಹುತ ಸಂಭವಿಸದಂತೆ ವಹಿಸಬೇಕಿರುವ ಕ್ರಮಗಳಿಗೆ ನಿಗಾ ವಹಿಸಬೇಕೆಂದು ಸೂಚನೆ ನೀಡಿದರು.

ಸಭೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಎಸ್. ಕಾತ್ಯಾಯಿನಿದೇವಿ, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಉದೇಶ, ಉಪವಿಭಾಗಾಧಿಕಾರಿ ಗೀತಾ ಹುಡೇದ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಸರಸ್ವತಿ, ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಆರ್.ಸಿ. ಕೆಂಪರಾಜು, ಕಾವೇರಿ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಮಂಜುನಾಥ್, ಪಂಚಾಯತ್‌ರಾಜ್ ಇಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಇಂಜಿನಿಯರ್ ಇಬ್ರಾಹಿಂ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ನವೀನ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ ಇತರರು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net