ಬಾಲಕಾರ್ಮಿಕ ಪದ್ಧತಿ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ

19raju3
Published on

ಚಾಮರಾಜನಗರ: ಜಿಲ್ಲೆಯ ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ವ್ಯಾಪಕವಾಗಿ ತಪಾಸಣೆ ನಡೆಸಿ ಚಿಕ್ಕ ವಯಸ್ಸಿನಲ್ಲೇ ಮಕ್ಕಳಿಂದ ದುಡಿಸಿಕೊಳ್ಳುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿ ಡಿ.ಎಸ್. ರಮೇಶ್ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಜಿಲ್ಲಾ ಬಾಲಕಾರ್ಮಿಕ ಯೋಜನಾ ಸೊಸೈಟಿಯ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಬಾಲಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ಹೋಗಲಾಡಿಸುವಲ್ಲಿ ವಿಶೇಷ ಪರಿಶ್ರಮ ವಹಿಸಬೇಕು. ಕಾರ್ಮಿಕ ಇಲಾಖೆ ವತಿಯಿಂದ ಹೋಬಳಿವಾರು ತಂಡ ರಚಿಸಿ ಬಾಲ್ಯದಲ್ಲೇ ಮಕ್ಕಳಿಂದ ದುಡಿಸಿಕೊಳ್ಳುವವರು ಎಲ್ಲಿಯೇ ಕಂಡು ಬಂದಲ್ಲಿ ಕೂಡಲೇ ಕಾನೂನು ಪ್ರಕಾರ ಸಂಬಂಧಪಟ್ಟವರ ವಿರುದ್ಧ ಗಂಭೀರ ಕ್ರಮ ತೆಗೆದುಕೊಳ್ಳಬೇಕೆಂದು ಎಂದು ತಿಳಿಸಿದರು.

ಗ್ರಾಮಾಂತರ ಪ್ರದೇಶಗಳಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಬಾಲಕಾರ್ಮಿಕರ ಪತ್ತೆ ಕಾರ್ಯಾಚರಣೆಗೆ ತೊಡಗಿಸಿಕೊಳ್ಳಬೇಕು. ಎಷ್ಟು ಮಕ್ಕಳು ಶಾಲೆ ತೊರೆದಿದ್ದಾರೆ ಎಂಬ ಮಾಹಿತಿ ಸಂಗ್ರಹಿಸಬೇಕು. ಬಾಲಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳನ್ನು ಕೆಲಸದಿಂದ ಬಿಡಿಸಿ ಶಾಲೆಗೆ ದಾಖಲು ಮಾಡಬೇಕು. ಮಕ್ಕಳ ಪಾಲಕರಿಗೆ ತಿಳುವಳಿಗೆ ನೀಡಬೇಕು ಎಂದು ಸೂಚಿಸಿದರು.

ಪಟ್ಟಣ ಪ್ರದೇಶಗಳಲ್ಲಿಯೂ ಬಾಲಕಾರ್ಮಿಕ ಪದ್ಧತಿ ವಿರುದ್ಧ ಅನಿರೀಕ್ಷಿತವಾಗಿ ದಾಳಿ ನಡೆಸಬೇಕು. ಬಾಲಕಾರ್ಮಿಕ ಪದ್ಧತಿ ನಿಷೇಧ ಮತ್ತು ನಿಯಂತ್ರಣ ಕಾಯ್ದೆ ಸೆಕ್ಷನ್-17ರಡಿ ನೇಮಕ ಗೊಂಡಿರುವ ವಿವಿಧ ಇಲಾಖೆಗಳ ನಿರೀಕ್ಷಕರು ಕಾಲಕಾಲಕ್ಕೆ ಬಾಲಕಾರ್ಮಿಕರನ್ನು ಕೆಲಸಕ್ಕೆ ಇಟ್ಟುಕೊಂಡಿರುವವರ ವಿರುದ್ಧ ಕಾನೂನು ಕ್ರಮ ವಹಿಸಲು ಅವಕಾಶವಿದೆ. ಇಲಾಖೆಗಳ ನಿರೀಕ್ಷಕರು ವ್ಯಾಪಕವಾಗಿ ತಪಾಸಣೆ ಕೈಗೊಂಡು ಬಾಲಕಾರ್ಮಿಕ ಪದ್ಧತಿ ವಿರುದ್ಧ ಕ್ರಮ ಜರುಗಿಸಬೇಕೆಂದು ನಿರ್ದೆಶನ ನೀಡಿದರು.

ಸಮಾಜಕ್ಕೆ ಮಾರಕವಾಗಿರುವ ಬಾಲಕಾರ್ಮಿಕ ಪದ್ಧತಿ ತೊಡೆದು ಹಾಕಲು ಹೆಚ್ಚಿನ ಜಾಗೃತಿ ಉಂಟು ಮಾಡಬೇಕಿದೆ. ಶಾಲಾ- ಕಾಲೇಜುಗಳು ಸೇರಿದಂತೆ ವಿವಿಧೆಡೆ ಅರಿವು ಕಾರ್ಯಕ್ರಮಗಳ ಮೂಲಕ ಬಾಲ್ಯದಲ್ಲಿಯೇ ಮಕ್ಕಳನ್ನು ದುಡಿಮೆಗೆ ದೂಡುವುದರಿಂದ ಎದುರಿಸಬೇಕಾದ ಕಾನೂನು ಪರಿಣಾಮಗಳ ಕುರಿತು ಮನವರಿಕೆ ಮಾಡಿಕೊಡಬೇಕಿದೆ. ಈ ನಿಟ್ಟಿನಲ್ಲಿ ಗೋಡೆಬರಹ, ಕರಪತ್ರ, ಬೀದಿ ನಾಟಕ ಸೇರಿದಂತೆ ವಿವಿಧ ವಿಧಾನಗಳ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವಂತೆ ತಿಳಿಸಿದರು.

ಜಿಲ್ಲಾ ಕಾರ್ಮಿಕ ಅಧಿಕಾರಿ ಎಂ.ಸವಿತಾ ಮಾತನಾಡಿ, ಇದೇ ಜೂನ್ ತಿಂಗಳಿನಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ಮಾಸವನ್ನು ಆಚರಿಸಲಾಗುವುದು. ಈ ಅವಧಿಯಲ್ಲಿ ಬಾಲಕಾರ್ಮಿಕ ಪದ್ಧತಿ ನಿರ್ಮೂಲನೆಗೆ ಅಗತ್ಯವಿರುವ ವಿವಿಧ ಕಾರ್ಯಕ್ರಮಗಳನ್ನು ರೂಪಿಸಿ ಅನುಷ್ಠಾನಗೊಳಿಸಲು ಇಲಾಖೆ ವತಿಯಿಂದ ಯೋಜನೆ ಕೈಗೊಳ್ಳಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಸರಸ್ವತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಡಿವೈಎಸ್‌ಪಿ ಅನ್ಸರ್ ಅಲಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಗೀತಾಲಕ್ಷ್ಮೀ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೆಶಕರಾದ ಮಂಜುನಾಥ್, ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸೊಸೈಟಿಯ ಯೋಜನಾ ನಿರ್ದೇಶಕರಾದ ಎಂ. ಮಹೇಶ್, ಕಾರ್ಮಿಕ ನಿರೀಕ್ಷಕರಾದ ನಾರಾಯಣಮೂರ್ತಿ, ಲಕ್ಷ್ಮೀಶ ಇತರರು ಸಭೆಯಲ್ಲಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net