ಚಾ.ನಗರ ದಸರಾ ಮಹೋತ್ಸವಕ್ಕೆ ಚಾಲನೆ ಇಂದು

16chn8
Published on

ಚಾಮರಾಜನಗರ: ಜಿಲ್ಲಾ ದಸರಾ ಮಹೋತ್ಸವ ಸಮಿತಿ ವತಿಯಿಂದ ನಾಲ್ಕು ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ಚಾಮರಾಜನಗರ ಜಿಲ್ಲಾ ದಸರಾ ಮಹೋತ್ಸವಕ್ಕೆ ಅ.17 ರಂದು ಚಾಲನೆ ದೊರೆಯಲಿದೆ.

ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ 10.15 ಗಂಟೆಗೆ ಸಾಂಪ್ರಾದಾಯಿಕ ಪೂಜಾ ಕೈಂಕರ್ಯದೊಂದಿಗೆ ದಸರಾ ಮಹೋತ್ಸವಕ್ಕೆ ಚಾಲನೆ ದೊರೆಯಲಿದೆ. 11 ಗಂಟೆಗೆ ಜಿಲ್ಲಾಡಳಿತ ಭವನದ ಆವರಣದಲ್ಲಿರುವ ವರನಟ ಡಾ. ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಹಾಗೂ ದಸರಾ ಕವಿಗೋಷ್ಠಿ ನಡೆಯಲಿದೆ. 11.15 ಗಂಟೆಗೆ ಪೇಟೆ ಪ್ರೈಮರಿ ಶಾಲಾ ಆವರಣದಲ್ಲಿ ಜಿಲ್ಲೆಯ ವಿವಿಧ ಮಹಿಳಾ ಸ್ವಸಹಾಯ ಸಂಘಗಳ ಉತ್ಪನ್ನಗಳ ಪ್ರದರ್ಶನ ಹಾಗೂ ಮಾರಾಟ ಮಳಿಗೆಗಳ ಉದ್ಘಾಟನೆ ನಡೆಯಲಿದೆ.

11.30 ಗಂಟೆಗೆ ಚಾಮರಾಜೇಶ್ವರ ಉದ್ಯಾನವನದ ಮುಂಭಾಗದಲ್ಲಿ ಚಿತ್ರಕಲಾ ಪ್ರದರ್ಶನವನ್ನು ಏರ್ಪಡಿಸಲಾಗಿದೆ. ಮಧ್ಯಾಹ್ನ 2.30 ಗಂಟೆಗೆ ಜಿಲ್ಲಾಡಳಿತ ಭವನದ ಮುಂಭಾಗದಲ್ಲಿ ಶ್ರೀಚಾಮುಂಡೇಶ್ವರಿ ವಿಗ್ರಹದೊಂದಿಗೆ ದಸರಾ ಮೆರವಣಿಗೆಗೆ ಜಿಲ್ಲೆಯ ವಿವಿಧ ಕಲಾತಂಡಗಳು, ವಿವಿಧ ಇಲಾಖೆಗಳ ಸ್ಥಬ್ದಚಿತ್ರಗಳ (ಟ್ಯಾಬ್ಲೊ) ಮೆರವಣಿಗೆಗೆ ಚಾಲನೆ ನೀಡಲಾಗುವುದು. ಸಂಜೆ 5.30 ಗಂಟೆಗೆ ಚಾಮರಾಜೇಶ್ವಸ್ವಾಮಿ ದೇವಾಲಯ ಮುಂಭಾಗದ ಪ್ರಧಾನ ವೇದಿಕೆಯಲ್ಲಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದೆ.

ಪಶುಸಂಗೋಪನೆ, ರೇಷ್ಮೆ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಸಿ.ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು. ಸಂಸದ ವಿ.ಶ್ರೀನಿವಾಸ ಪ್ರಸಾದ್, ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಚ್.ಎಂ. ಗಣೇಶ್‌ಪ್ರಸಾದ್, ಎಂ.ಆರ್. ಮಂಜುನಾಥ್, ನಗರಸಭಾ ಸದಸ್ಯ ಅಬ್ರಾರ್ ಅಹಮದ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.

ಅ.18ರಂದು ಬೆಳಿಗ್ಗೆ 6.30 ಗಂಟೆಗೆ ಚಾಮರಾಜೇಶ್ವರಸ್ವಾಮಿ ದೇವಾಲಯ ಅವರಣದಲ್ಲಿ ದಸರಾ ಮ್ಯಾರಥಾನ್ ಆಯೋಜಿಸಲಾಗಿದೆ. 10.30 ಗಂಟೆಗೆ ಮಹಿಳಾ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದ ವೇದಿಕೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. 11 ರಿಂದ ಸಂಜೆ 6 ಗಂಟೆಯವರೆಗೆ ನಾಟಕೋತ್ಸವ ನಡೆಯಲಿದೆ.

ಅ. 19ರಂದು ಬೆಳಗ್ಗೆ 10 ಗಂಟೆಗೆ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ರೈತ ದಸರಾ ಕಾರ್ಯಕ್ರಮ ಏರ್ಪಡಿಸಲಾಗಿದೆ. 11 ಗಂಟೆಗೆ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ರೈತ ದಸರಾ ವೇದಿಕೆ ಕಾರ್ಯಕ್ರಮ ನಡೆಯಲಿದ್ದು, 11ರಿಂದ 6 ಗಂಟೆವರೆಗೆ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಅ. 20ರಂದು ಬೆಳಗ್ಗೆ 11ರಿಂದ 6 ಗಂಟೆಯವರೆಗೆ ವರನಟ ಡಾ.ರಾಜ್‌ಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ. ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 9.45ರವರೆಗೆ ಚಾಮರಾಜೇಶ್ವರಸ್ವಾಮಿ ದೇವಸ್ಥಾನದ ಮುಖ್ಯ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಂಜೆ 7ಗಂಟೆಗೆ ದಸರಾ ಮಹೋತ್ಸವದ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net