

ಚಾಮರಾಜನಗರ: ರಾಜ್ಯ ಸರ್ಕಾರದ ಅನ್ನಭಾಗ್ಯ ಯೋಜನೆಗೆ ಅಕ್ಕಿ ಬಿಡುಗಡೆ ಮಾಡದ ಕೇಂದ್ರ ಸರ್ಕಾರದ ಧೋರಣೆಯ ವಿರುದ್ಧ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಹೊರಟು ಶ್ರೀಭುವನೇಶ್ವರಿ ವೃತ್ತದಲ್ಲಿ ರಾಷ್ಟ್ರೀಯ ಹೆದ್ದಾರಿಯನ್ನು ತಡೆದು ಕೆಲಕಾಲ ಪ್ರತಿಭಟನೆ ನಡೆಸಿದರು. ನಂತರ ಬಿ.ರಾಚಯ್ಯ ಜೋಡಿ ರಸ್ತೆ ಮಾರ್ಗವಾಗಿ, ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ ಕೇಂದ್ರ ಸರ್ಕಾರದ ವಿರುದ್ಧ ೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಬಹುಮತದೊಂದಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ. ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಮಹತ್ವದ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿತ್ತು. ಅಂತ್ಯೋದಯ, ಬಿಪಿಎಲ್ ಕಾರ್ಡ್‌ಗಳನ್ನು ಹೊಂದಿರುವ ಬಡ ಕುಟುಂಬಗಳಿಗೆ ಆಹಾರ ಭದ್ರತಾ ಕಾಯ್ದೆಯಡಿ ಉಚಿತ ಅಕ್ಕಿ ನೀಡುವುದು ರಾಜ್ಯ ಸರ್ಕಾರದ ಜವಾಬ್ದಾರಿಯಾಗಿದೆ. ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಲು ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಟ್ಟ ಎ್ಸಿಐ ಹಾಗೂ ಇತರ ದಾಸ್ತಾನು ಮಂಡಳಿಗಳಿಗೆ ಅಕ್ಕಿಯನ್ನು ರಿಯಾಯಿತಿ ದರದಲ್ಲಿ ಒದಗಿಸಲು ಲಿಖಿತ ಮನವಿ ಮಾಡಿದ್ದರೂ ಸರಬರಾಜು ಮಾಡಲು ಸಾಧ್ಯವಿಲ್ಲ ಎಂಬ ಬೇಜವಾಬ್ದಾರಿ ಉತ್ತರ ನೀಡುತ್ತಿದೆ. ರಾಜ್ಯ ಸರ್ಕಾರದ ಬೇಡಿಕೆಯಂತೆ ಪಡಿತರ ಅಕ್ಕಿಯನ್ನು ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಮೂಲಕ ರಾಷ್ಟ್ರಪತಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಶಾಸಕರಾದ ಎ.ಆರ್. ಕೃಷ್ಣಮೂರ್ತಿ, ಎಚ್.ಎಂ. ಗಣೇಶ ಪ್ರಸಾದ್, ಮಾಜಿ ಸಂಸದ ಕಾಗಲವಾಡಿ ಶಿವಣ್ಣ, ಮಾಜಿ ಶಾಸಕರಾದ ಆರ್.ನರೇಂದ್ರ, ಎಸ್.ಜಯಣ್ಣ, ಜಿ.ಎನ್.ನಂಜುಂಡಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿ, ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಾದು, ಆರ್.ಮಹದೇವ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸದಶಿವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸ್ಗರ್ ಮುನ್ನಾ, ಕೊಳ್ಳೇಗಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ತೋಂಟೇಶ್, ಎಚ್.ಎಸ್.ನಂಜುಂಡ ಪ್ರಸಾದ್, ನಾಗೇಂದ್ರ, ಮಹೇಶ್ ಕುದರ್ ಹಾಗೂ ಇತರರು ಭಾಗವಹಿಸಿದ್ದರು.
ಬಿಜೆಪಿ ಅಕ್ಕಿ ಕೊಡದಿದ್ದರೂ ಯೋಜನೆ ಜಾರಿ:
ಕೇಂದ್ರ ಬಿಜೆಪಿ ಸರ್ಕಾರ ರಾಜ್ಯಕ್ಕೆ ಅಕ್ಕಿ ಕೊಡದಿದ್ದರೂ ಅನ್ನಭಾಗ್ಯ ಯೋಜನೆಯನ್ನು ಜಾರಿಗೊಳಿಸಿ ಬಡ ಜನರಿಗೆ ಅಕ್ಕಿ ನೀಡುತ್ತೇವೆ ಎಂದು ಪಶು ಸಂಗೋಪನೆ, ರೇಷ್ಮೆ ಮತ್ತು ಜಿಲ್ಲಾ ಉಸ್ತವಾರಿ ಸಚಿವ ಕೆ.ವೆಂಕಟೇಶ್ ತಿಳಿಸಿದರು.
ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿ, ಕೇಂದ್ರ ಸರ್ಕಾರ ಮೊದಲು ಅಕ್ಕಿ ಕೊಡಲು ಒಪ್ಪಿಗೆ ನೀಡಿತ್ತು, ಆದರೆ ನಂತರದಲ್ಲಿ ಅಕ್ಕಿ ಕೊಡಲು ನಿರಾಕರಿಸಿತು. ನಾವೇನು ಅಕ್ಕಿಯನ್ನು ಉಚಿತವಾಗಿ ಕೇಳಿಲ್ಲ, ದುಡ್ಡು ನೀಡುತ್ತೇವೆ ಅಂದರೂ ಅಕ್ಕಿ ನೀಡುತ್ತಿಲ್ಲ. ಈ ಯೋಜನೆಯ ಮೂಲಕ ಕಾಂಗ್ರೆಸ್ ಸರ್ಕಾರಕ್ಕೆ ಉತ್ತಮ ಹೆಸರು ಬರುತ್ತದೆ ಎಂಬ ಉದ್ದೇಶದಿಂದ ಹೀಗೆ ಮಾಡಿದೆ. ಈ ಮೂಲಕ ಕೇಂದ್ರ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ. ನಾವೇನು ಅಕ್ಕಿಯನ್ನು ಅದಾನಿ, ಅಂಬಾನಿಗೆ ಕೊಡುತ್ತಿಲ್ಲ, ರಾಜ್ಯದ ಬಡವರಿಗೆ ನೀಡುತ್ತಿದ್ದೇವೆ. ಕೇಂದ್ರ ಅಕ್ಕಿ ಕೊಡದಿದ್ದರೂ ನಾವು ಉಚಿತವಾಗಿ 10 ಕೆಜಿ ಅಕ್ಕಿಯನ್ನು ಜನರಿಗೆ ನೀಡುತ್ತೇವೆ. ಬಿಜೆಪಿ ಈ ಮೂಲಕ ಬಡವರ ವಿರೋಧಿಯಾಗಿದೆ ಎಂದು ದೂರಿದರು.
ರಾಜ್ಯ ಸರ್ಕಾರ ಜು.1 ರಿಂದ ಅನ್ನಭಾಗ್ಯ ಯೋಜನೆಯಡಿ 10 ಕೆಜಿ ಅಕ್ಕಿ ನೀಡಲು ನಿರ್ಧರಿಸಿತ್ತು. ಕೇಂದ್ರ ಸರ್ಕಾರ ಅಕ್ಕಿ ನೀಡುವುದನ್ನು ತಡೆಯುವುದರ ಮೂಲಕ ಬಿಜೆಪಿ ಬಡವರ ವಿರೋಧಿ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
>ಸಿ.ಪುಟ್ಟರಂಗಶೆಟ್ಟಿ, ಶಾಸಕ, ಚಾಮರಾಜನಗರ