ಸಚಿವ ಅಶ್ವತ್ಥನಾರಾಯಣ ಹೇಳಿಕೆಗೆ ಕಿಡಿ

17raju4
Published on

ಚಾಮರಾಜನಗರ: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಉನ್ನತ ಶಿಕ್ಷಣ ಸಚಿವ ಡಾ.ಅಶ್ವತ್ಥನಾರಾಯಣ ನೀಡುವ ಹೇಳಿಕೆಯನ್ನು ಖಂಡಿಸಿ ಜಿಲ್ಲಾ ಯುವ ಕಾಂಗ್ರೆಸ್‌ನ ರಾಷ್ಟ್ರೀಯ ವಿದ್ಯಾರ್ಥಿ ಘಟಕ ಹಾಗೂ ಸಾಮಾಜಿಕ ಜಾಲತಾಣದ ಕಾರ್ಯಕರ್ತರು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.


ನಗರದ ಶ್ರೀಚಾಮರಾಜೇಶ್ವರ ದೇವಾಲಯದ ಆವರಣದಲ್ಲಿ ಗುಂಪುಗೂಡಿದ ಪ್ರತಿಭಟನಾಕಾರರು ಅಲ್ಲಿಂದ ಮೆರವಣಿಗೆ ಹೊರಟು ಶ್ರೀಭುವನೇಶ್ವರಿ ವೃತ್ತಕ್ಕೆ ತೆರಳಿ ಕೆಲಕಾಲ ಸಂಚಾರ ತಡೆ ನಡೆಸಿ, ಸಚಿವ ಅಶ್ವತ್ಥನಾರಾಯಣ ವಿರುದ್ಧ ಘೋಷಣೆ ಕೂಗಿ ಅಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ಕನಿಷ್ಠ ವೇತನ ಸಲಹಾ ಸಮಿತಿ ಮಾಜಿ ಅಧ್ಯಕ್ಷ ಎಸ್.ಪಿ.ಕೆ. ಉಮೇಶ್ ಮಾತನಾಡಿ, ಮಂಡ್ಯ ಜಿಲ್ಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವ ಡಾ.ಅಶ್ವತ್ಥನಾರಾಯಣ ಟಿಪ್ಪು ಸುಲ್ತಾನ್ ಮುಗಿಸಿದ ರೀತಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹೊಡೆದು ಹಾಕಿ ಎಂದು ಪ್ರಚೋದನಾಕಾರಿ ಹೇಳಿಕೆ ನೀಡಿರುವುದು ಅತ್ಯಂತ ಖಂಡನೀಯ ಎಂದರು.


ಈ ರೀತಿ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಸಚಿವ ಬಹಿರಂಗವಾಗಿ ಕ್ಷಮೆ ಕೇಳಬೇಕು. ಅವರ ಮೇಲೆ ಪೊಲೀಸ್ ಇಲಾಖೆ ಕೊಲೆ ಪ್ರಕರಣ ದಾಖಲು ಮಾಡಿ ಬಂಸಿ ಕಾನೂನು ಕ್ರಮಕೈಗೊಳ್ಳಬೇಕು. ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಒತ್ತಾಯಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮ್ಮದ್ ಅಸ್ಗರ್ (ಮುನ್ನಾ) ಮಾತನಾಡಿ, ಉನ್ನತ ಸ್ಥಾನದಲ್ಲಿರುವ ಒಬ್ಬ ಜವಾಬ್ದಾರಿಯುತ ಸಚಿವರು ಪರಿಜ್ಞಾನ ಇಲ್ಲದೆ ಮಾಜಿ ಸಿಎಂ ಸಿದ್ದರಾಮಯ್ಯ ಅವರ ಪರೋಕ್ಷ ಕೊಲೆಗೆ ಕರೆ ನೀಡಿದ್ದಾರೆ. ತಾಕತ್ತಿದ್ದರೆ ಸಿದ್ದರಾಮಯ್ಯ ಅವರನ್ನು ಮುಟ್ಟಲಿ. ಮುಂದೆ ಕಾಂಗ್ರೆಸ್ ಕಾರ್ಯಕರ್ತರು ಶಕ್ತಿ ಏನೆಂಬುದನ್ನು ತೋರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ಕಾಂಗ್ರೆಸ್ ಅಸಂಘಟಿತ ಘಟಕದ ನಗರ ಅಧ್ಯಕ್ಷ ಎಂ.ಸ್ವಾಮಿ, ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷ ಎಚ್.ಎಂ.ಮಧು, ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಸಾಯಿಬ್, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಯೋಗೇಂದ್ರ, ಸೋಮೇಶ್, ನಾಗೇಂದ್ರ, ಮುಖಂಡರಾದ ಸಿ.ಆರ್.ಮಹೇಶ್ ಇತರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net