ಕಾಂಗ್ರೆಸ್‌ಗೆ ನೂತನ ಸಾರಥಿ?

07rajesh2
Published on

ಚಾಮರಾಜನಗರ: ಆಡಳಿತಾರೂಢ ಪಕ್ಷ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷರ ಬದಲಾವಣೆ ಕಾಲ ಸನ್ನಿಹಿತವಾಗಿದೆ. ಹಾಲಿ ಅಧ್ಯಕ್ಷ ಪಿ.ಮರಿಸ್ವಾಮಿ ಅವರಿಗೆ ಕಾಡಾ ಅಧ್ಯಕ್ಷ ಸ್ಥಾನ ಸಿಕ್ಕಿರುವ ಹಿನ್ನೆಲೆಯಲ್ಲಿ ಪಕ್ಷಕ್ಕೆ ನೂತನ ಸಾರಥಿಯ ಆಯ್ಕೆ ನಡೆಯಲಿದೆ ಎಂಬ ಮಾತು ಕೇಳಿಬರುತ್ತಿದೆ.

2017ರಿಂದ ಪಿ.ಮರಿಸ್ವಾಮಿ ಜಿಲ್ಲಾಧ್ಯಕ್ಷರಾಗಿದ್ದಾರೆ. ಇಷ್ಟು ಸುದೀರ್ಘ ಅವಧಿಯವರೆಗೆ ಪಕ್ಷವನ್ನು ಮುನ್ನಡೆಸಿರುವ ಹೆಗ್ಗಳಿಕೆಗೆ ಪಿ.ಮರಿಸ್ವಾಮಿ ಅವರಿಗಿದೆ. ವಿಧಾನಸಭೆ ಚುನಾವಣೆಯಲ್ಲಿ ಉತ್ತಮ ಲಿತಾಂಶ ತರುವಲ್ಲಿ, ಎಲ್ಲರನ್ನೂ ಒಗ್ಗೂಡಿಸಿಕೊಂಡು ಹೋಗುವಲ್ಲಿ, ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ರೂಪಿಸುವಲ್ಲಿ ಪಿ.ಮರಿಸ್ವಾಮಿ ಮುಂಚೂಣಿಯಲ್ಲಿದ್ದಾರೆ. ಈ ಕಾರಣಕ್ಕೆ ಇವರಿಗೆ ರಾಜ್ಯ ಸರ್ಕಾರ ಕಾಡಾ ನಿಗಮ ಮಂಡಳಿ ಜವಾಬ್ದಾರಿ ನೀಡಿದ್ದು, ಸಹಜವಾಗಿ ಅಧ್ಯಕ್ಷ ಸ್ಥಾನವನ್ನು ಬೇರೆವರಿಗೆ ನೀಡಲಾಗುತ್ತದೆ.

ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಪ್ರಮುಖರ ಹೆಸರು ಹೇಳಿಬರುತ್ತಿದೆ. ಈ ಕುರಿತು ಅಧ್ಯಕ್ಷ ಪಿ.ಮರಿಸ್ವಾಮಿ ವಿಜಯವಾಣಿಯೊಂದಿಗೆ ಮಾತನಾಡಿ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗುರುಸ್ವಾಮಿ, ತೋಟೇಶ್ ಪ್ರಬಲ ಆಕಾಂಕ್ಷಿಗಳಾಗಿದ್ದಾರೆ ಎಂದು ತಿಳಿಸಿದ್ದಾರೆ. ಇವರಲ್ಲದೆ ಇನ್ನೂ ಕೆಲವರು ಅಪೇಕ್ಷಿತರು ಇದ್ದಾರೆ. ಪಕ್ಷದ ಸೂಚನೆಯಂತೆ ಕೊಟ್ಟ ಜವಾಬ್ದಾರಿಯನ್ನು ನಿಭಾಯಿಸಲು ಆಸಕ್ತಿ ಹೊಂದಿದ್ದಾರೆ.

ಚುನಾವಣೆವರೆಗೂ ಯಥಾಸ್ಥಿತಿ?: ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷರನ್ನು ಲೋಕಸಭೆ ಚುನಾವಣೆವರೆಗೂ ಬದಲಾವಣೆ ಮಾಡದೆ ಯಥಾಸ್ಥಿತಿ ಕಾಯ್ದುಕೊಳ್ಳಲೂಬಹುದು. ಈ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಪೂರಕವಾದ ವಾತಾವರಣವಿದೆ. ಚಾಮರಾಜನಗರ, ಗುಂಡ್ಲುಪೇಟೆ, ಕೊಳ್ಳೇಗಾಲ, ವರುಣ, ಎಚ್.ಡಿ.ಕೋಟೆ, ನಂಜನಗೂಡು, ತಿ.ನರಸೀಪುರ ವಿಧಾನಸಭಾ ಕ್ಷೇತ್ರಗಳಲ್ಲಿ ‘ಕೈ’ ಅಧಿಕಾರದಲ್ಲಿದೆ. ಗ್ಯಾರಂಟಿ ಯೋಜನೆಗಳ ಜನಪ್ರಿಯತೆ ಕುಗ್ಗಿಲ್ಲ. ಮತದಾರರ ವಿಶ್ವಾಸವನ್ನು ಪಕ್ಷ ಉಳಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಗೆಲ್ಲುವ ವಾತಾವರಣವಿದೆ ಎಂದು ಹೇಳಬಹುದಾದರೂ ಅಭ್ಯರ್ಥಿ ಯಾರಾಗುತ್ತಾರೆಂಬುದು ಮುಖ್ಯ. ಪಕ್ಷ ೋಷಿಸಿದ ಅಧಿಕೃತ ಅಭ್ಯರ್ಥಿ ಗೆಲುವಿಗಾಗಿ ಶ್ರಮಿಸಬೇಕಿದೆ. ಈ ಹಿನ್ನೆಲೆಯಲ್ಲಿ ಚುನಾವಣೆ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷರ ಬದಲಾವಣೆಯ ಗೋಜಿಗೆ ಹೋಗುವುದಿಲ್ಲ ಎನ್ನಲಾಗುತ್ತಿದೆ.

ಮುಖಂಡರಿಗೆ ಅಧಿಕಾರ ಭಾಗ್ಯ:
ಜಿಲ್ಲಾಧ್ಯಕ್ಷ ಪಿ.ಮರಿಸ್ವಾಮಿಗೆ ಕಾಡಾ ಅಧ್ಯಕ್ಷ ಸ್ಥಾನ ಸಿಕ್ಕಿದ್ದು, ಅಂತೆಯೇ ಚಾಮರಾಜನಗರ ನಗರಾಭಿವೃದ್ಧಿ ಪ್ರಾಧಿಕಾರ(ಚುಡಾ) ಅಧ್ಯಕ್ಷ ಸ್ಥಾನಕ್ಕೂ ಪ್ರಮುಖರ ಹೆಸರು ಹೇಳಿಬರುತ್ತಿದೆ. ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಹಮದ್ ಅಸ್ಗರ್ ಮುನ್ನಾ, ನಗರಸಭೆ ಮಾಜಿ ಅಧ್ಯಕ್ಷ ಎಸ್.ನಂಜುಂಡಸ್ವಾಮಿ, ಚುಡಾ ಮಾಜಿ ಅಧ್ಯಕ್ಷ ಸೈಯದ್ ರಫಿ ಹೆಸರು ಕೇಳಿಬರುತ್ತಿದೆ.

ನನಗೆ ಕಾಡಾ ಅಧ್ಯಕ್ಷ ಸ್ಥಾನ ಸಿಕ್ಕಿರುವ ಹಿನ್ನೆಲೆಯಲ್ಲಿ ಸಹಜವಾಗಿಯೇ ಜಿಲ್ಲಾಧ್ಯಕ್ಷ ಸ್ಥಾನದಲ್ಲಿ ಬದಲಾವಣೆಯಾಗಲಿದೆ. ಪಕ್ಷದ ವರಿಷ್ಠರು ಲೋಕಸಭೆ ಚುನಾವಣೆವರೆಗೂ ಮುಂದುವರೆಸುತ್ತಾರೋ ಅಥವಾ ಮುಂಚಿತವಾಗಿಯೇ ಬದಲಾವಣೆ ಮಾಡುತ್ತಾರೋ ಗೊತ್ತಿಲ್ಲ.ಪಿ.ಮರಿಸ್ವಾಮಿ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಮತ್ತು ಕಾಡಾ ಅಧ್ಯಕ್ಷ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net