ಕಾಂಗ್ರೆಸ್ ಅಪಪ್ರಚಾರವೇ ಸೋಲಿಗೆ ಕಾರಣ

nagayya
Published on

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಚುನಾವಣೆ ಬಹುಜನ ಸಮಾಜ ಪಕ್ಷದ ವಿರುದ್ಧ ಕಾಂಗ್ರೆಸ್ ಮುಖಂಡರು ಮಾಡಿದ ಅಪಪ್ರಚಾರದಿಂದ ಸೋಲಾಯಿತು ಎಂದು ಬಿಎಸ್ಪಿ ಜಿಲ್ಲಾಧ್ಯಕ್ಷ ಎನ್.ನಾಗಯ್ಯ ಆರೋಪಿಸಿದರು.

ಕ್ಷೇತ್ರದಲ್ಲಿ ಸತತ 2 ವರ್ಷಗಳಿಂದ ನಿರಂತರವಾಗಿ ಪಕ್ಷ ಸಂಘಟನೆ ಮಾಡಿಕೊಂಡು ಬಂದಿದ್ದೆವು. ಕನಿಷ್ಠ 30-40 ಸಾವಿರ ಮತ ಪಡೆಯುವಂತ ವಾತಾವರಣ ನಿರ್ಮಾಣವಾಗಿತ್ತು. ಆದರೆ, ಈ ಚುನಾವಣೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಮತ ಪಡೆಯಲು ಸಾಧ್ಯವಾಗಿಲ್ಲ. ರಾಜ್ಯದಲ್ಲಿರುವಂತೆ ಜಿಲ್ಲೆಯಲ್ಲೂ ಬಿಜೆಪಿ ವಿರೋಧಿ ಅಲೆ ಇತ್ತು. ವಿ.ಸೋಮಣ್ಣ ಅಭ್ಯರ್ಥಿ ಆದಮೇಲೆ ಸಾಕಷ್ಟು ಬದಲಾವಣೆಗಳು ಆದವು. ಕಾಂಗ್ರೆಸ್ ಸೋಲುವಂತ ಭೀತಿಯಿಂದ ಬಿಎಎಸ್ಪಿ ವಿರುದ್ಧ ಅಪಪ್ರಚಾರ ಮಾಡಿ ಅತ್ಯಂತ ಕಡಿಮೆ ಮತಗಳನ್ನು ಪಡೆಯಲು ಕಾರಣವಾಯಿತು ಎಂದರು.

ಕಾಂಗ್ರೆಸ್ ಸೋತರೆ ಬಿಜೆಪಿ ಗೆಲ್ಲುತ್ತದೆ ಎಂದು ನಮ್ಮ ವಿರುದ್ಧ ಕರಪತ್ರ ಹಂಚುವ ಮೂಲಕ ಅಪಪ್ರಚಾರ ಮಾಡಲಾಯಿತು. ವಿ. ಸೋಮಣ್ಣ ಗೆದ್ದರೆ ಗಲಭೆಗಳು ಹೆಚ್ಚಾಗುತ್ತದೆ ಎಂದು ಮತದಾರರ ಮನಸ್ಸನ್ನು ಬದಲು ಮಾಡಿತು. ಬಿಜೆಪಿ ಸೋಲಿಸಲು ಕಾಂಗ್ರೆಸ್‌ಗೆ ಮತದಾರರು ಬೆಂಬಲ ನೀಡಿದರು. ನಮ್ಮ ಕಾರ್ಯಕರ್ತರ ಶ್ರಮಕ್ಕೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ಮುಂದಿನ ಚುನಾವಣೆಗೆ ಸದೃಢವಾಗಿ ಪಕ್ಷ ಸಂಘಟನೆ ಮಾಡುತ್ತೇವೆ. ಶಾಸಕ ಸಿ. ಪುಟ್ಟರಂಗಶೆಟ್ಟಿ ಗೆಲುವಿಗೆ ಅಭಿನಂದನೆ ಸಲ್ಲಿಸುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಲೇ 5 ಗ್ಯಾರೆಂಟಿಗಳನ್ನು ಈಡೇರಿಸುವ ಕೆಲಸ ಮಾಡಬೇಕು. ಜನರ ಹಿತ ಕಾಪಾಡಲು ಹಿಂದೇಟು ಹಾಕಿದರೆ ನಾವು ಹೋರಾಟ ಮಾಡುತ್ತೇವೆ ಎಂದು ಎಚ್ಚರಿಸಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಹ.ರಾ.ಮಹೇಶ್ ಮಾತನಾಡಿ, ನಮ್ಮದು ವೀರೋಚಿತವಾದ ಸೋಲಾಗಿದೆ ಹೊರತು ನಮ್ಮ ಸಿದ್ಧಾಂತ ಸೋತಿಲ್ಲ. ಕ್ಷೇತ್ರದಲ್ಲಿ ಅನೈತಿಕವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಚುನಾವಣೆಯನ್ನು ನಡೆಸಿವೆ. ಬಿಎಸ್ಪಿಗೆ ಮತ ನೀಡಿದರೆ ಬಿಜೆಪಿ ಗೆದ್ದುಬಿಡುತ್ತದೆ ಎಂಬ ಕಾರಣಕ್ಕೆ ಮತದಾರರು ಕಾಂಗ್ರೆಸ್ ಆಯ್ಕೆ ಮಾಡಿಕೊಂಡಿದ್ದಾರೆ. ಹಣದ ಹೊಳೆ ಹಾಗೂ ಅಪಪ್ರಚಾರದ ನಡುವೆ 6 ಸಾವಿರಕ್ಕಿಂತಲೂ ಅಧಿಕ ಮತ ನೀಡಿದ ಸ್ವಾಭಿಮಾನಿ ಮತದಾರರಿಗೆ ಕೃತಜ್ಞತೆ ಸಲ್ಲಿಸುತ್ತೇವೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಬಿಎಸ್ಪಿ ಪ್ರಧಾನ ಕಾರ್ಯದರ್ಶಿ ಬ.ಮ. ಕೃಷ್ಣಮೂರ್ತಿ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ತಾಲೂಕು ಅಧ್ಯಕ್ಷ ಅಮಚವಾಡಿ ಪ್ರಕಾಶ್, ಎಸ್.ಪಿ.ಮಹೇಶ್, ಬಸವರಾಜ್ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net