

ಚಾಮರಾಜನಗರ ; ಈ ಬಾರಿಯ ದಕ್ಷಿಣ ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿರುವ ಬಿಎಸ್ಪಿ ಬೆಂಬಲಿತ ಅಭ್ಯರ್ಥಿ ಡಾ.ಹ.ರಾ.ಮಹೇಶ್ ವಿರುದ್ಧ ಅಪಪ್ರಚಾರ ಮಾಡುತ್ತಿದ್ದು, ಶಿಕ್ಷಕರು, ಉಪನ್ಯಾಸಕರು, ಪ್ರಾಧ್ಯಾಪಕರು ಅಪಪ್ರಚಾರಕ್ಕೆ ಕಿವಿಗೊಡದೆ ಅವರನ್ನು ಬೆಂಬಲಿಸಿ ಎಂದು ಬಿಎಸ್ಪಿ ರಾಜ್ಯ ಉಸ್ತುವಾರಿ ಎಂ.ಕೃಷ್ಣಮೂರ್ತಿ ಮನವಿ ಮಾಡಿದರು.
ಈ ಕ್ಷೇತ್ರದಲ್ಲಿ ಕಳೆದ 30 ವರ್ಷಗಳಿಂದಲೂ ರಾಷ್ಟ್ರೀಯ ಪಕ್ಷಗಳು ಎಸ್ಸಿ, ಎಸ್ಟಿ ಸಮುದಾಯದವರಿಗೆ ಟಿಕೆಟ್ ನೀಡದೆ ಶಿಕ್ಷಕರ ಕ್ಷೇತ್ರದಲ್ಲಿ ಅಸ್ಪೃಶ್ಯತೆ ಆಚರಣೆ ಮಾಡುತ್ತಿದೆ. ಈ ಕ್ಷೇತ್ರದಲ್ಲಿರುವ 8,500 ಮತದಾರರು, ಈ ಬಾರಿ ಆ ಪಕ್ಷಗಳಿಗೆ ಮತ ಹಾಕಬಾರದು. ಹ.ರಾ.ಮಹೇಶ್ ಅವರನ್ನು ಬೆಂಬಲಿಸಿದರೆ ರಾಜ್ಯದ ಸರ್ಕಾರಿ ಪಿಯು ಹಾಗೂ ಪ್ರೌಢಶಾಲೆಗಳಲ್ಲಿ ಅತಿಥಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ 33 ಸಾವಿರ ಶಿಕ್ಷಕರನ್ನು ಕಾಯಂ ಮಾಡಲು ಹೋರಾಟ ಮಾಡುವುದಾಗಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಕಳೆದ ಮೂರು ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿರುವ ಮರಿತಿಬ್ಬೇಗೌಡ ಅವರು 2016ರಲ್ಲಿ ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದ ಎಸ್ಸಿ, ಎಸ್ಟಿ ಜನಾಂಗದ 96 ಉಪನ್ಯಾಸಕರಿಗೆ ಪ್ರಾಂಶುಪಾಲರಾಗಿ ಬಡ್ತಿ ಹೊಂದಲು ಅವಕಾಶ ತಪ್ಪಿಸಿದರು. ವಿಶ್ವವಿದ್ಯಾನಿಲಯ, ಪ್ರಥಮ ದರ್ಜೆ ಕಾಲೇಜುಗಳಲ್ಲಿ ಶೇ.30 ರಷ್ಟು ಮಾತ್ರ ಕಾಯಂ ಬೋಧಕರಿದ್ದು, ಶೇ.70 ರಷ್ಟು ಅತಿಥಿ ಉಪನ್ಯಾಸಕರಿಂದ ಬೋಧನೆ ನಡೆಯುತ್ತಿದೆ. ಕಳೆದ 24 ವರ್ಷಗಳ ಹಿಂದೆ ಶೇ.70 ರಷ್ಟು ಕಾಯಂ ಬೋಧಕರಿದ್ದ ಜಾಗದಲ್ಲಿ ಶೇ.30 ರಷ್ಟು ಇಳಿಕೆಯಾಗಿರುವುದು ಮರಿತಿಬ್ಬೇಗೌಡ ಅವರ ಸಾಧನೆಯೇ ಎಂದು ಪ್ರಶ್ನಿಸಿದರು. ಇವರಿಂದಾಗಿ ವಿಶ್ವವಿದ್ಯಾಲಯಗಳು ಯುಜಿಸಿ, ನ್ಯಾಕ್ ಅನುದಾನದಿಂದ ವಂಚಿತವಾಗುವ ಸ್ಥಿತಿ ನಿರ್ಮಾಣವಾಗಿದೆ ಎಂದು ದೂರಿದರು.
ವಿಶ್ವವಿದ್ಯಾಲಯಗಳು, ಕಾಲೇಜುಗಳಲ್ಲಿ ಕಾಯಂ ಅಧ್ಯಾಪಕರ ನೇಮಕಾತಿ ನಡೆದಿಲ್ಲ. ಕಾಯಂ ಅಧ್ಯಾಪಕರ ನೇಮಕ ಮಾಡಿಸದ ವ್ಯಕ್ತಿ ಮತ್ತೊಮ್ಮೆ ಆಯ್ಕೆಗೆ ಅರ್ಹರಲ್ಲ. ಅನುದಾನಿತ ಶಾಲಾ-ಕಾಲೇಜುಗಳ ಶಿಕ್ಷಕರು ಆರೋಗ್ಯ ವಿಮೆ, ಪಿಂಚಣಿ ಸೌಲಭ್ಯ ಪಡೆಯಲು ಹೋರಾಟ ಮಾಡುತ್ತಿದ್ದಾರೆ. 1995ರಿಂದ ಖಾಸಗಿ ಕನ್ನಡ ಶಾಲಾ, ಕಾಲೇಜುಗಳಿಗೆ ಅನುದಾನಕ್ಕಾಗಿ ಸರ್ಕಾರದ ಬಳಿ ಅಂಗಲಾಚುತ್ತಿವೆ. ಅನುದಾನ ಕೊಡಿಸುವಲ್ಲಿ ಮರಿತಿಬ್ಬೇಗೌಡ ವಿಫಲರಾಗಿದ್ದಾರೆ ಎಂದರು.
ಬಿಜೆಪಿ ಮತ್ತು ಜೆಡಿಎಸ್ ಬೆಂಬಲಿತ ಅಭ್ಯರ್ಥಿಯಾಗಿರುವ ವಿವೇಕಾನಂದ ಅವರು ಕೇವಲ ಎಸ್ಸೆಸ್ಸೆಲ್ಸಿ ಶಿಕ್ಷಣ ಪಡೆದಿದ್ದು, ಪ್ರಥಮ ದರ್ಜೆ ಕಾಲೇಜುಗಳಿಗೆ ತೆರಳಿ ಮತ ಕೇಳುತ್ತಿಲ್ಲ. ಅಡ್ಡ ದಾರಿಯ ಮೂಲಕ ಮತ ಕೇಳುತ್ತಿದ್ದಾರೆ. ರಿಯಲ್ ಎಸ್ಟೇಟ್ ದಂಧೆಯಲ್ಲಿ ತೊಡಗಿರುವ ವ್ಯಕ್ತಿಯನ್ನು ಚುನಾವಣೆಗೆ ನಿಲ್ಲಿಸಿರುವುದು ದುರಂತ ಎಂದು ಬೇಸರ ವ್ಯಕ್ತಪಡಿಸಿದರು. ಅಭ್ಯರ್ಥಿ ಹ.ರಾ.ಮಹೇಶ್, ಜಿಲ್ಲಾಧ್ಯಕ್ಷ ಎನ್.ನಾಗಯ್ಯ, ಉಪಾಧ್ಯಕ್ಷ ಬ್ಯಾಡಮೂಡ್ಲು ಬಸವಣ್ಣ, ಪ್ರಧಾನ ಕಾರ್ಯದರ್ಶಿ ಬ.ಮ.ಕೃಷ್ಣಮೂರ್ತಿ, ಹೊಂಡರಬಾಳು ರಾಜೇಂದ್ರ, ಬಸವಣ್ಣ, ರಾಜಶೇಖರ್, ಪ್ರಕಾಶ್ ಹಾಜರಿದ್ದರು.