

ಚಾಮರಾಜನಗರ: ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಮುಖಂಡರ ವಿಶ್ವಾಸ ಗಳಿಸಿರುವ ಅಭ್ಯರ್ಥಿ ಯಾರೆಂಬುದನ್ನು ತಿಳಿಯಲು ಮುಂದಾಗಿರುವ ಬಿಜೆಪಿ ಅಭಿಪ್ರಾಯ ಸಂಗ್ರಹಕ್ಕಿಳಿಯಲಿದೆ.
ನಗರದ ನೂತನ ಬಿಜೆಪಿ ಕಚೇರಿಯಲ್ಲಿ ಮಾ.31ರಂದು ಮಂಡಲ, ಶಕ್ತಿ ಕೇಂದ್ರಗಳ ಪದಾಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹ ನಡೆಯಲಿದೆ. ಈ ಪ್ರಕ್ರಿಯೆಯಲ್ಲಿ ಆಕಾಂಕ್ಷಿಗಳ ಬೆಂಬಲಿಗರು ಗುಂಪು ಕಟ್ಟಿಕೊಂಡು ಬಂದು ಜೋರು ಧ್ವನಿಯಲ್ಲಿ ಒತ್ತಾಯ ಮಾಡುವುದೋ ಅಥವಾ ಶಕ್ತಿ ಪ್ರದರ್ಶನ ಮಾಡುವುದೋ ನಡೆಯಲ್ಲ. ಬದಲಿಗೆ ಚುನಾವಣೆಯಲ್ಲಿ ಮತದಾನ ಪ್ರಕ್ರಿಯೆ ಹೇಗೆ ನಡೆಯುತ್ತದೆಯೋ ಅದೇ ರೀತಿ ಅಭಿಪ್ರಾಯ ಸಂಗ್ರಹವಾಗಲಿದೆ. ಅಂದರೆ ಬ್ಯಾಲೆಟ್ ಪೇಪರ್‌ನಲ್ಲಿ ತಮಗೆ ಸೂಕ್ತ ಎನಿಸಿದವರ ಹೆಸರು ಬರೆದು ಬಾಕ್ಸ್ ಒಳಗೆ ಹಾಕಲಾಗುತ್ತದೆ. ನಂತರ ಹೆಚ್ಚು ಮತ ಪಡೆದಿರುವ ಅಭ್ಯರ್ಥಿಯ ಹೆಸರನ್ನು ಹೈಕಮಾಂಡ್‌ಗೆ ಕಳುಹಿಸಿಕೊಡಲಾಗುತ್ತದೆ ಎಂದು ತಿಳಿದುಬಂದಿದೆ.
ಕಾಂಗ್ರೆಸ್ ಇತ್ತೀಚೆಗಷ್ಟೇ ತನ್ನ ಮೊದಲ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಚಾಮರಾಜನಗರದಲ್ಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ, ಹನೂರಿನಲ್ಲಿ ಆರ್.ನರೇಂದ್ರ, ಗುಂಡ್ಲುಪೇಟೆಯಲ್ಲಿ ಗಣೇಶ್‌ಪ್ರಸಾದ್ ಕಣಕ್ಕಿಯುತ್ತಿದ್ದಾರೆ. ಮಾಜಿ ಶಾಸಕರಾದ ಎ.ಆರ್.ಕೃಷ್ಣಮೂರ್ತಿ, ಜಯಣ್ಣ, ಎಸ್.ಬಾಲರಾಜು ಈ ಮೂವರೂ ಆಕಾಂಕ್ಷಿಗಳಾಗಿರುವ ಹಿನ್ನೆಲೆಯಲ್ಲಿ ಕೊಳ್ಳೇಗಾಲದಲ್ಲಿ ಬಿಕ್ಕಟ್ಟು ಸೃಷ್ಟಿಯಾಗಿದೆ. ಈ ಕಾರಣಕ್ಕೆ ಪಕ್ಷ ಎರಡನೇ ಪಟ್ಟಿಯಲ್ಲಿ ಅಭ್ಯರ್ಥಿ ೋಷಣೆ ಮಾಡುತ್ತಿದೆ.
ಆದರೆ ಬಿಜೆಪಿಯ ಕಾರ್ಯತಂತ್ರ ವಿಭಿನ್ನವಾಗಿದೆ. ಈವರೆಗೂ ಜಿಲ್ಲೆಯ ಯಾವ ಕ್ಷೇತ್ರದ ಅಭ್ಯರ್ಥಿಯ ಹೆಸರನ್ನೂ ೋಷಣೆ ಮಾಡಿಲ್ಲ. ಗುಂಡ್ಲುಪೇಟೆಯಲ್ಲಿ ಸಿ.ಎಸ್.ನಿರಂಜನ ಕುಮಾರ್ ಮತ್ತು ಕೊಳ್ಳೇಗಾಲದಲ್ಲಿ ಎನ್.ಮಹೇಶ್ ಹಾಲಿ ಶಾಸಕರಾಗಿರುವ ಕಾರಣಕ್ಕೆ ಟಿಕೆಟ್ ಸಿಗುವುದು ಖಚಿತ ಎನ್ನಲಾಗಿದೆ. ಹಾಗಿದ್ದರೂ ಮಾ.31ರಂದು ಬಿಜೆಪಿ ಕಚೇರಿಯಲ್ಲಿ ಈ ಕ್ಷೇತ್ರಗಳ ಮುಖಂಡರಿಂದ ಅಭಿಪ್ರಾಯ ಸಂಗ್ರಹವಾಗಲಿದೆ. ಇನ್ನು ಚಾಮರಾಜನಗರದಲ್ಲಿ ಡಜನ್ ಆಕಾಂಕ್ಷಿಗಳಿದ್ದಾರೆ. ಮಾಧ್ಯಮಗಳಲ್ಲಿ ಒಬ್ಬರ ಹೆಸರು ಹಿಂದೆ ಬಂದರೂ ಅಸಮಾಧಾನಗೊಳ್ಳುವವರಿಂದಾಗಿ ಹೆಸರುಗಳನ್ನು ಪಟ್ಟಿ ಮಾಡಲಾಗದ ಸ್ಥಿತಿ ಇದೆ. ಹನೂರು ಕ್ಷೇತ್ರದಲ್ಲಿ ಡಾ.ದತ್ತೇಶ್‌ಕುಮಾರ್, ಪ್ರೀತನ್ ನಾಗಪ್ಪ, ನಿಶಾಂತ್, ವೆಂಕಟೇಶ್ ಟಿಕೆಟ್ ಬಯಸಿದ್ದಾರೆ. ಹಾಗಾಗಿ ಅಭಿಪ್ರಾಯ ಸಂಗ್ರಹ ಯಾರಿಗೆ ವರವಾಗುವುದೋ, ಮತ್ಯಾರಿಗೆ ಶಾಪವಾಗುವುದೋ ಎಂಬುದನ್ನು ಕಾದುನೋಡಬೇಕಿದೆ.
ಸಚಿವ ಸೋಮಣ್ಣ ಸ್ಪರ್ಧೆ?
ವಸತಿ, ಮೂಲಸೌಕರ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಯಾವ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎನ್ನುವ ಗೊಂದಲಕ್ಕೂ ಉತ್ತರ ಸಿಕ್ಕಿಲ್ಲ. ಚಾಮರಾಜನಗರ ಅಥವಾ ಹನೂರಿನಿಂದ ಅವರು ಸ್ಪರ್ಧೆ ಮಾಡಬಹುದೆಂದು ಹೇಳಲಾಗುತ್ತಿತ್ತು. ಆದರೆ ಕೆಲವು ದಿನಗಳಿಂದ ಚಾಮರಾಜನಗರ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳಲು ಬಯಸಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಕುರಿತು ಸಚಿವರು ಸ್ಪಷ್ಟಪಡಿಸಿದ ಬಳಿಕವಷ್ಟೇ ಸತ್ಯ ತಿಳಿಯಲಿದೆ.
ಇನ್ನು ಬಿಜೆಪಿ ಅಭಿಪ್ರಾಯ ಸಂಗ್ರಹದಲ್ಲಿ ಸಚಿವರ ಪರವಾಗಿಯೂ ಅವರ ಬೆಂಬಲಿಗರು ಬ್ಯಾಟಿಂಗ್ ಮಾಡುವ ಸಾಧ್ಯತೆ ಇದೆ. ವಿ.ಸೋಮಣ್ಣಗೆ ಚುನಾವಣೆ ಉಸ್ತುವಾರಿ, ಟಿಕೆಟ್ ನೀಡಬಾರದು ಎಂಬ ಒತ್ತಾಯಕ್ಕೆ ಪ್ರತಿಯಾಗಿ ದಿನಕ್ಕೊಬ್ಬರು ಸುದ್ದಿಗೋಷ್ಠಿ ಮಾಡಿ ಸಚಿವರು ಈ ಕ್ಷೇತ್ರದಿಂದಲೇ ಸ್ಪರ್ಧೆ ಮಾಡಬೇಕೆಂದು ಆಗ್ರಹಿಸಿದ್ದಾರೆ. ಸಚಿವರು ಮಾತ್ರವಲ್ಲದೆ ಬೇರೆ ಆಕಾಂಕ್ಷಿಗಳೂ ಪ್ರಬಲರಾಗಿದ್ದು, ಮಂಡಲ, ಶಕ್ತಿಕೇಂದ್ರದ ಪದಾಧಿಕಾರಿಗಳು ತಮ್ಮ ಆಯ್ಕೆಯ ಆಕಾಂಕ್ಷಿಗಳ ಪರವಾಗಿ ಅಭಿಪ್ರಾಯ ವ್ಯಕ್ತಪಡಿಸಬಹುದಾಗಿದೆ.
ಬಿಜೆಪಿಯಿಂದ ಸೂಕ್ತ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಸಲುವಾಗಿ ಮಾ. 31ರಂದು ಮಂಡಲ, ಶಕ್ತಿ ಕೇಂದ್ರಗಳ ಪದಾಧಿಕಾರಿಗಳಿಂದ ಅಭಿಪ್ರಾಯ ಸಂಗ್ರಹ ಮಾಡಲಾಗುತ್ತದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಿಂದಲೂ ಅಭಿಪ್ರಾಯ ಸಂಗ್ರಹ ಮಾಡಲಾಗುವುದು.
>ಜಿ.ನಾರಾಯಣಪ್ರಸಾದ್ ಬಿಜೆಪಿ ಜಿಲ್ಲಾಧ್ಯಕ್ಷ, ಚಾಮರಾಜನಗರ