ಸ್ಟ್ರಾಂಗ್ ರೂಂ ಬಳಿ ಸಿಸಿ ಕ್ಯಾಮರಾ ಕೆಲಸ ಮಾಡುತ್ತಿರಲಿಲ್ಲ

S.Balaraju-Aspirant-Congress
Published on

ಕೊಳ್ಳೇಗಾಲ: ಲೋಕಸಭಾ ಚುನಾವಣೆ ಬಳಿಕ 2 ದಿನಗಳ ಕಾಲ ಸ್ಟ್ರಾಂಗ್ ರೂಂ ಬಳಿಯ ಸಿಸಿ ಕ್ಯಾಮರಾ ಕೆಲಸ ಮಾಡುತ್ತಿರಲಿಲ್ಲ ಎಂದು ಚಾಮರಾಜನಗರ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎಸ್.ಬಾಲರಾಜ್ ದೂರಿದರು.

ಪಟ್ಟಣದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೇ 7ರ ಮುಂಚೆಯೇ ನನಗೆ ಸಿಸಿ ಟಿವಿ ಡಿಸ್ಪೈ ಹೋಗಿತ್ತು ಎಂಬ ಮಾಹಿತಿ ತಿಳಿಯಿತು. ಈ ಬಗ್ಗೆ ಪರಿಶೀಲಿಸುವಂತೆ ನಮ್ಮ ಏಜೆಂಟರನ್ನು ಸ್ಥಳಕ್ಕೆ ಕಳುಹಿಸಿದ್ದೆ. ಈ ವೇಳೆ ಸಿಸಿ ಟಿವಿ ಕೆಲಸ ಮಾಡುತ್ತಿಲ್ಲ ಎಂಬ ಮಾಹಿತಿ ತಿಳಿಯಿತು. ನಂತರ ನಮ್ಮ ಏಜೆಂಟರು ಸ್ಥಳದಲ್ಲಿದ್ದ ಮಾಹಿತಿ ಪುಸ್ತಕದಲ್ಲಿ ಷರಾ ಬರೆದು ಬಂದರು. ಆದಾದ ನಂತರ 2 ದಿನದ ಬಳಿಕ ನಾನೇ ಖುದ್ದು ತೆರಳಿ ಪರಿಶೀಲಿಸಿದಾಗ ಸಿಸಿ ಟಿವಿ ವರ್ಕ್ ಮಾಡುತ್ತಿರಲಿಲ್ಲ. ಆ ಮೇಲೆ ನಾನೂ ಕೂಡ ಷರಾ ಬರೆದು 2 ದಿನಗಳಿಂದ ಸಿಸಿ ಟಿವಿ ಕೆಲಸ ಮಾಡುತ್ತಿಲ್ಲ ಈ ಬಗ್ಗೆ ಕೆಲವು ಅನುಮಾನಗಳಿವೆ. ಈ ಕೂಡಲೆ ಸಿಸಿ ಟಿವಿ ಫೋಟೇಜ್ ಹಾಗೂ ಮಾಹಿತಿ ನೀಡುವಂತೆ ಕೇಳಿದ್ದೇನೆ. ಚುನಾವಣಾ ಅಧಿಕಾರಿಗಳು ಇನ್ನೂ ಕೊಟ್ಟಿಲ್ಲ. ಈ ನಡುವೆ ಸ್ಟ್ರಾಂಗ್ ರೂಂ ತೆರೆಯುವ ಸಮಯ 8 ಗಂಟೆಗೆ ಎಂದು ಪತ್ರದ ಮೂಲಕ ತಿಳಿಸಿದ್ದರು.

ಈ ಹಿನ್ನೆಲೆಯಲ್ಲಿ 7.15ಕ್ಕೆ ನಾನು ಸ್ಥಳಕ್ಕೆ ಹೊರಡುವ ವೇಳೆ ನಮ್ಮೊಂದಿಗಿದ್ದ ಏಜೆಂಟ್‌ಗೆ ಸ್ಟ್ರಾಂಗ್ ರೂಂ ಹತ್ತಿರ ಬರುವಂತೆ ಅಧಿಕಾರಿಗಳು ಫೋನ್ ಕರೆ ಮಾಡಿ ತಿಳಿಸಿದ್ದರು. ಅಲ್ಲಿಗೆ ಹೋಗುವಷ್ಟರಲ್ಲಿ ಸ್ಟ್ರಾಂಗ್ ರೂಂ ಓಪನ್ ಆಗಿತ್ತು. ನಮಗೆ ಬೆಳಗ್ಗೆ 8 ಗಂಟೆಗೆ ಬನ್ನಿ ಎಂದು ತಿಳಿಸಿ ಬೆಳಗ್ಗೆ 7.15ಕ್ಕೆ ಸ್ಟ್ರಾಂಗ್ ರೂಂ ತೆರೆದಿದ್ದಾರೆ. ಸಿಸಿ ಟಿವಿ 2 ದಿನ ನಿಂತಿರುವುದಕ್ಕೂ, ನಮಗೆ ತಿಳಿಸಿದ ಸಮಯಕ್ಕೂ ಮುನ್ನ ಸ್ಟ್ರಾಂಗ್ ರೂಂ ತೆರೆದಿರುವುದು ನಮಗೆ ಹಲವು ಅನುಮಾನಗಳನ್ನು ಹುಟ್ಟುಹಾಕಿದೆ ಎಂದರು.
ಈ ಬಗ್ಗೆ ಪಕ್ಷದ ಮುಖಂಡರ ಜತೆ ಮಾತನಾಡಿ ಕಾನೂನು ಹೋರಾಟ ಮಾಡುವ ಚಿಂತನೆ ನಡೆಸಿದ್ದೇನೆ. ಅಧಿಕಾರಿಗಳು ನಿಗಧಿತ ಸಮಯಕ್ಕೂ ಮುನ್ನ ಸ್ಟ್ರಾಂಗ್ ರೂಂ ತೆರೆದಿರುವುದರ ಬಗ್ಗೆ ಅನುಮಾನವಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net