

ಚಾಮರಾಜನಗರ: ಜಿಲ್ಲೆಯಲ್ಲಿ ಬಿಜೆಪಿಗೆ ಗೆಲ್ಲುವ ವಾತಾವರಣವಿರುವುದರಿಂದಲೇ ಆಕಾಂಕ್ಷಿಗಳು ಹೆಚ್ಚಾಗಿದ್ದಾರೆ. ಎಲ್ಲರೂ ಒಗ್ಗಟ್ಟಿನಿಂದ ಬಿಜೆಪಿಯನ್ನು ಗೆಲ್ಲಿಸುವ ಮನಸ್ಸು ಮಾಡಿದ್ದಾರೆ ಎಂದು ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಜಿಲ್ಲಾ ಪ್ರಭಾರಿ ರಾಜೇಂದ್ರನ್ ತಿಳಿಸಿದರು.
ನಗರದ ಬಿಜೆಪಿ ಕಚೇರಿಯಲ್ಲಿ ನೂತನ ಜಿಲ್ಲಾಧ್ಯಕ್ಷ ಜಿ. ನಾರಾಯಣ ಪ್ರಸಾದ್ ಅಕಾರ ಸ್ವೀಕಾರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. ಜಿಲ್ಲೆಯ ನಾಲ್ಕೂ ಕ್ಷೇತ್ರಗಳನ್ನು ಗೆಲ್ಲುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಜನಪರ ಆಡಳಿತಕ್ಕೆ ಇನ್ನೂ ಹೆಚ್ಚಿನ ಶಕ್ತಿ ನೀಡುವ ಕೆಲಸವನ್ನು ನಾವೆಲ್ಲರೂ ಸೇರಿ ಮಾಡಬೇಕಾಗಿದೆ ಎಂದರು. ಬಿಜೆಪಿಯಲ್ಲಿ ಆಕಾಂಕ್ಷಿಗಳ ಸಂಖ್ಯೆ ಹೆಚ್ಚಾಗಿರುವುದು ಸಹ ವರದಾನವಾಗಿದೆ. ಈಗ ಅಧ್ಯಕ್ಷರಾಗಿರುವ ಜಿ. ನಾರಾಯಣ್‌ಪ್ರಸಾದ್ ಆಕಾಂಕ್ಷಿಯಾಗಿರಲಿಲ್ಲ. ಹೀಗಾಗಿ ಅವರಿಗೆ ಅಧ್ಯಕ್ಷ ಪದವಿ ದೊರೆತಿದೆ ಎಂದು ರಾಜೇಂದ್ರನ್ ಹಾಸ್ಯ ಚಟಾಕಿ ಹಾರಿಸಿದರು.
ಗುಂಡ್ಲುಪೇಟೆ ಶಾಸಕ ಸಿ.ಎಸ್.ನಿರಂಜನ್ ಕುಮಾರ್ ಮಾತನಾಡಿ, ದೇಶದ ಹಾಗೂ ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆ ಇದೆ. ಪ್ರಧಾನಿ ನರೇಂದ್ರ ಮೋದಿ ಅವರ ವರ್ಚಸ್ಸು, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಜನಪ್ರಿಯತೆ ಮತ್ತು ಸಿಎಂ ಬಸವರಾಜ ಬೊಮ್ಮಾಯಿ ಅವರ ಆಡಳಿತ ನಮ್ಮೆಲ್ಲರಿಗೂ ಶ್ರೀರಕ್ಷೆಯಾಗಿದೆ. ಸಂಘಟನೆಯಲ್ಲಿ ಬಿಜೆಪಿ ಇತರ ಪಕ್ಷಗಳಿಗಿಂತ ಬಹಳ ಮುಂದೆ ಇದೆ. ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಹತಾಶೆಯಿಂದ ಸುಳ್ಳು ಭರವಸೆಗಳನ್ನು ನೀಡುತ್ತಾ ಜನರನ್ನು ದಿಕ್ಕು ತಪ್ಪಿಸುತ್ತಿವೆ. ಇದ್ಯಾವುದಕ್ಕೂ ನಮ್ಮ ಕಾರ್ಯಕರ್ತರು ಹಾಗೂ ಮುಖಂಡರು ಧೃತಿಗೆಡಬೇಡಿ ಎಂದು ಹೇಳಿದರು.
ನಿಗರ್ಮಿತ ಅಧ್ಯಕ್ಷ ಆರ್. ಸುಂದರ್ ಮಾತನಾಡಿ, ಕಳೆದ ಮೂರು ವರ್ಷಗಳ ಅವಯಲ್ಲಿ ಜಿಲ್ಲೆಯಲ್ಲಿ ಬಿಜೆಪಿ ಸಂಘಟನೆಗೆ ಸಹಕಾರ ನೀಡಿದ ಎಲ್ಲರಿಗೂ ಆಭಾರಿಯಾಗಿದ್ದೇನೆ. ಮೂರು ವರ್ಷಗಳ ಸೇವೆ ತೃಪ್ತಿ ತಂದಿದೆ ಎಂದರು.
ವಿಧಾನ ಪರಿಷತ್ ಮಾಜಿ ಸದಸ್ಯ ಪ್ರೊ. ಕೆ.ಆರ್.ಮಲ್ಲಿಕಾರ್ಜುನಪ್ಪ, ಕಾಡಾ ಅಧ್ಯಕ್ಷ ಜಿ. ನಿಜಗುಣರಾಜು, ಕೇಂದ್ರ ಪರಿಹಾರ ಸಮಿತಿಯ ಮಾಜಿ ಅಧ್ಯಕ್ಷ ಎಂ. ರಾಮಚಂದ್ರು, ಮಾಜಿ ಶಾಸಕಿ ಪರಿಮಳಾ ನಾಗಪ್ಪ,ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ನೂರೊಂದುಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯಧರ್ಶಿಗಳಾದ ಮಂಗಲ ಶಿವಕುಮಾರ್, ಜಿ.ನಾಗಶ್ರೀ ಪ್ರತಾಪ್, ಬಿಜೆಪಿ ರೈತ ಮುಖಂಡ ಅಮ್ಮನಪುರ ಮಲ್ಲೇಶ್, ಚಾಮುಲ್ ಅಧ್ಯಕ್ಷ ವೈ.ಸಿ. ನಾಗೇಂದ್ರ, ಬಿಜೆಪಿ ಉಪಾಧ್ಯಕ್ಷ ಪಿ. ವೃಷಬೇಂದ್ರಪ್ಪ, ಮಂಡಲದ ಅದ್ಯಕ್ಷರಾದ ನಾಗರಾಜು, ಬಸವಣ್ಣ, ಕೊಳ್ಳೇಗಾಲ ಲೋಕೇಶ್ ಇತರರು ಇದ್ದರು.