

ಚಾಮರಾಜನಗರ: ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಎಲ್ಲೆಡೆ ಉತ್ತಮ ಸ್ಪಂದನೆ ಸಿಗುತ್ತಿದ್ದರೆ, ಈ ಗ್ರಾಮಗಳಲ್ಲಿ ಮಾತ್ರ ಆ ಸೌಲಭ್ಯ ದೊರೆಯುತ್ತಿಲ್ಲ. ಏಕೆಂದರೆ, ಇಲ್ಲಿಗೆ ಕೆಎಸ್‌ಆರ್‌ಟಿಸಿ ಬಸ್ಸೇ ಬರಲ್ಲ.
ಚಾಮರಾಜನಗರ ತಾಲೂಕಿನ ಬಿಆರ್‌ಟಿ ಹುಲಿ ಸಂರಕ್ಷಿತಾರಣ್ಯ ಪ್ರದೇಶ ವ್ಯಾಪ್ತಿಯಲ್ಲಿರುವ ಬೇಡಗುಳಿ, ಅತ್ತಿಖಾನೆ ಬೆಟ್ಟಗುಡ್ಡ, ಕಿರಿದಾದ ದಾರಿ, ತಿರುವುಗಳ ದುರ್ಗಮ ಹಾದಿಯಿಂದ ಕೂಡಿವೆ. ಹೀಗಾಗಿ ಇಲ್ಲಿ ಸರ್ಕಾರಿ ಬಸ್ ಸಂಚಾರ ಮಾಡಲು ಸಾಧ್ಯವಾಗುತ್ತಿಲ್ಲ. ಉತ್ತಮ ರಸ್ತೆ ನಿರ್ಮಾಣ ಮಾಡಿಕೊಡಬೇಕೆಂಬುದು ಗ್ರಾಮಸ್ಥರ ಬಹುದಿನಗಳ ಬೇಡಿಕೆ. ಸದ್ಯಕ್ಕಂತೂ ಈ ಬೇಡಿಕೆ ಈಡೇರುವಂತೆ ಕಾಣುತ್ತಿಲ್ಲ. ವರ್ಷದ ಹಿಂದೆ ಈ ಮಾರ್ಗದಲ್ಲಿ ಸುಮಾರು ಏಳೆಂಟು ಕಿ.ಮೀ.ವರೆಗೆ ಡಾಂಬರೀಕರಣ ಮಾಡಲಾಗಿತ್ತು. ಮುಂದುವರಿದು ರಸ್ತೆ ರಿಪೇರಿಯಾಗಲಿಲ್ಲ. ಆದ್ದರಿಂದ ಇಲ್ಲಿ ಸರ್ಕಾರಿ ಬಸ್ ಸಂಚಾರ ಮಾಡಲಾಗದೆ ಶಕ್ತಿ ಯೋಜನೆ ನಿಶ್ಯಕ್ತಗೊಂಡಿದೆ.
ಸರ್ಕಾರಿ ಬಸ್‌ಗಿಂತ ಕೊಂಚ ಚಿಕ್ಕದಾದ ಖಾಸಗಿ ಬಸ್ ಇಲ್ಲಿನ ಏಕೈಕ ಸಂಚಾರ ವಾಹನ. ಚಾಮರಾಜನಗರ-ಬೇಡಗುಳಿ, ಬೇಡಗುಳಿ-ಚಾಮರಾಜನಗರ ಅಂತ ದಿನಕ್ಕೆ ಒಟ್ಟು ಎರಡು ಸಲ ಮಾತ್ರ ಓಡಾಟ ನಡೆಸುತ್ತಿದೆ. ಬೇಡಗುಳಿ, ಅತ್ತಿಖಾನೆ, ಮಾರಿಗುಡಿ ಪೋಡು, ರಾಮಯ್ಯನಪೋಡು, ಅತ್ತಿಖಾನೆ, ಕಾಡಿಗೆರೆ, ಹೊನ್ನಮೇಟಿಯಲ್ಲಿ ವಾಸವಿರುವ ಸೋಲಿಗರಿಗೆ ಇದೊಂದು ಬಸ್ಸೇ ಆಧಾರ. ಇಲ್ಲಿನ ಕಾಫಿ ಎಸ್ಟೇಟ್‌ಗಳಿಗೆ ಬರುವ ವಾಹನಗಳು ಆಗಾಗ್ಗೆ ಸಂಚಾರಕ್ಕೆ ಸಿಗುವ ಸಂಜೀವಿನಿಗಳಾಗಿವೆ.
ಇದು ಜೀವನ ಪ್ರಯಾಣ: ಬೇಡಗುಳಿಗೆ ಬರುವ ಏಕೈಕ ಖಾಸಗಿ ಬಸ್‌ನ ಸಂಚಾರ ಕೇವಲ ಪ್ರಯಾಣದಂತೆ ಭಾಸವಾಗದೆ ಸೋಲಿಗರ ಜೀವನದ ಪಯಣವನ್ನು ತೆರೆದಿಡುತ್ತಿದೆ. ಇಲ್ಲಿನ ಸೋಲಿಗರು ಪೋಡಿನಿಂದ ಬಸ್ ಸಿಗುವ ಜಾಗಕ್ಕೆ ನಡೆದುಕೊಂಡು ಬರಲು ಶ್ರಮ ಹಾಕುತ್ತಾರೆ. ಇಲ್ಲಿಂದ ಬಸ್ ಹತ್ತಿ ಸುಮಾರು 4 ಗಂಟೆಗಳ ಕಾಲ ಬೆಟ್ಟ, ಗುಡ್ಡ ಇಳಿದು, ನಿತ್ಯವೂ ನೋಡುತ್ತಿರುವ ಪ್ರಪಾತದ ತಿರುವುಗಳಲ್ಲಿ ಭಯಪಡದವರು, ಅಡ್ಡಬರುವ ವನ್ಯಪ್ರಾಣಿಗಳಿಗೆ ಬೆದರದವರು, ನಗರಕ್ಕೆ ಆಗಮಿಸುತ್ತಿದ್ದಂತೆಯೇ ಕೊಂಚ ವಿಚಲಿತರಾದಂತೆ ಕಾಣುತ್ತಾರೆ.
ವ್ಯಾಪಾರ-ವಹಿವಾಟುಗಳಲ್ಲಿ ತೊಡಗಿರುವವರು, ಮನೆಯ ದಿನಸಿ ಪದಾರ್ಥಗಳನ್ನು ಖರೀದಿ ಮಾಡಬೇಕಿರುವವರು, ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ಬರುವವರು, ಸ್ವಗ್ರಾಮದಿಂದ ಮತ್ತೊಂದು ಊರಿಗೆ, ಇನ್ನೊಂದು ಊರಿಂದ ಸ್ವಗ್ರಾಮಕ್ಕೆ ಹಿಂದಿರುಗುವವರು ಈ ಬಸ್‌ನಲ್ಲಿ ಕಾಣಸಿಗುತ್ತಾರೆ. ಒಂದೇ ಒಂದು ಬಸ್ ಸಂಚಾರ ಮಾಡುವುದರಿಂದ ಜನರು ಕಿಕ್ಕಿರಿದು ತುಂಬಿರುತ್ತಾರೆ.
ಸರ್ಕಾರದ ಗಮನ ಸೆಳೆದಿತ್ತು:
ಬೇಡಗುಳಿಯ ದುರ್ಗಮ ಹಾದಿ ಈ ಹಿಂದೆ ರಾಜ್ಯ ಸರ್ಕಾರದ ಗಮನ ಸೆಳೆದಿತ್ತು. ಆಗ ವಿಧಾನಪರಿಷತ್ತಿನ ಸದಸ್ಯರಾಗಿದ್ದ ತುಳಸಿ ಮುನಿರಾಜುಗೌಡ ಬೇಡಗುಳಿಗೆ ಭೇಟಿ ನೀಡಿದ್ದರು. ಇಲ್ಲಿನ ರಸ್ತೆಯಲ್ಲಿ ಸಂಚರಿಸಿ ಆದ ಅನುಭವ ಮತ್ತು ಸ್ಥಳೀಯರು ರಸ್ತೆ ನಿರ್ಮಾಣ ಮಾಡಿಕೊಡಬೇಕೆಂದು ಮಾಡಿದ್ದ ಮನವಿಗೆ ಸ್ಪಂದಿಸಿದ್ದರು. ಸದನದಲ್ಲಿ ಈ ಕುರಿತು ಧ್ವನಿ ಎತ್ತಿದ್ದರು. ಚಾಮರಾಜನಗರ ಜಿಲ್ಲೆಯ ಬೇಡಗುಳಿ, ಅತ್ತಿಖಾನೆಯಲ್ಲಿ ತಳ ಸಮುದಾಯಗಳು ವಾಸ ಮಾಡುತ್ತಿದ್ದಾರೆ. ಇಲ್ಲಿನ ರಸ್ತೆಗಳು ಹಲವಾರು ದಶಕಗಳಿಂದ ರಿಪೇರಿಯಾಗಿಲ್ಲ. ಈ ಪ್ರದೇಶವನ್ನು ಸಂಪರ್ಕಿಸಲು ಕೇವಲ ಒಂದು ಖಾಸಗಿ ಬಸ್ ಇದೆ. ಸೋಲಿಗ ಸಮುದಾಯದ ಪ್ರಾಥಮಿಕ ಅವಶ್ಯಕತೆಗಳಾದ ರಸ್ತೆ, ಆರೋಗ್ಯ ಸಮಸ್ಯೆ, ಸಾರಿಗೆ ಸೌಲಭ್ಯ ಕಲ್ಪಿಸಬೇಕೆಂದು ಶೂನ್ಯವೇಳೆಯಲ್ಲಿ ಒತ್ತಾಯಿಸಿದ್ದರು
ಬೇಡಗುಳಿ, ಅತ್ತಿಖಾನೆಗೆ ಸರ್ಕಾರಿ ಬಸ್ ಬರಲ್ಲ. ಹೀಗಾಗಿ ನಮಗೆ ಉಚಿತವಾಗಿ ಪ್ರಯಾಣ ಮಾಡುವ ಸೌಲಭ್ಯ ಸಿಕ್ಕಿಲ್ಲ. ಮಲೆ ಮಹದೇಶ್ವರ ಬೆಟ್ಟಕ್ಕೆ ಕೆಎಸ್‌ಆರ್‌ಟಿಸಿ ಬಸ್‌ಗಳು ಓಡಾಡುತ್ತಿವೆ. ಬೇಡಗುಳಿ ಅದಕ್ಕಿಂತಲೂ ಹತ್ತಿರದಲ್ಲೇ ಇದ್ದರೂ ಬಸ್ ಸೌಲಭ್ಯವಿಲ್ಲ.ನಂಜಮ್ಮ, ಬೇಡಗುಳಿ, ಚಾಮರಾಜನಗರ ಬೇಡಗುಳಿ, ಅತ್ತಿಖಾನೆಗೆ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸಲು ರಸ್ತೆ ಯೋಗ್ಯವಾಗಿಲ್ಲ. ರಸ್ತೆ ಉತ್ತಮವಾಗಿದ್ದರೆ ಬಸ್ ಸೌಲಭ್ಯ ನೀಡಬಹುದಿತ್ತು. ಚಾರ್ಸಿ ಚಿಕ್ಕದಾಗಿರುವ ಖಾಸಗಿ ಬಸ್ ಮಾತ್ರ ಓಡಾಡುತ್ತದೆ.ನಿರ್ಗಮಿತ ಶ್ರೀನಿವಾಸ್, ವಿಭಾಗೀಯ ನಿಯಂತ್ರಣಾಧಿಕಾರಿ, ಕೆಎಸ್‌ಆರ್‌ಟಿಸಿ, ಚಾಮರಾಜನಗರ