

ಚಾಮರಾಜನಗರ: ತಾಲೂಕಿನ ಉಮ್ಮತ್ತೂರು ಗ್ರಾಮದ ಕೊಟ್ಟೂರು ಶ್ರೀಬಸವೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನಿರ್ಮಿಸುವ ಶ್ರೀಬಸವೇಶ್ವರ ಪುತ್ಥಳಿ ನಿರ್ಮಾಣಕ್ಕೆ ವಾಟಾಳ್ ಮಠದ ಡಾ.ಶ್ರೀಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ಹಾಗೂ ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಭೂಮಿಪೂಜೆ ನೆರವೇರಿಸಿದರು.
ಬಳಿಕ ವಾಟಾಳ್‌ಶ್ರೀಗಳು ಮಾತನಾಡಿ, ಅನೇಕ ಕಡೆಗಳಲ್ಲಿ ಶ್ರೀಬಸವೇಶ್ವರರ ಪುತ್ಥಳಿ ಅನಾವರಣಗೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆಯಾಗಿದೆ. ಶಾಸಕ ಎನ್.ಮಹೇಶ್ ಹಾಗೂ ಉಮ್ಮತ್ತೂರು ಗ್ರಾಮದ ಮುಖಂಡರ ನೇತೃತ್ವದಲ್ಲಿ ಗ್ರಾಮದಲ್ಲಿ ಶ್ರೀಬಸವೇಶ್ವರ ಪುತ್ಥಳಿ ಗುದ್ದಲಿಪೂಜೆ ನೇರವೇರಿದೆ. ಶಾಸಕ ಎನ್.ಮಹೇಶ್ ರಾಜಕೀಯ, ಸಾಮಾಜಿಕ, ಧಾರ್ಮಿಕ ಮೂರು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ತುಂಬಾ ಸಂತಸವಾಗಿದೆ ಎಂದರು.
ಬಸವೇಶ್ವರರು ಒಂದು ವರ್ಗಕ್ಕೆ ಸೀಮಿತರಲ್ಲ. 12 ಶತಮಾನದಲ್ಲಿ ಅನುಭವ ಮಂಟಪದಲ್ಲಿ ಎಲ್ಲ ವರ್ಗ ಸಮಾನ ಅವಕಾಶ ಕಲ್ಪಿಸಿಕೊಡುವ ಮೂಲಕ ಎಲ್ಲರನ್ನು ಒಂದೇ ಥರ ಕಾಣುವ ಮೂಲಕ ಸರ್ವರಿಗೂ ಸಮಾನತೆ ನೀಡಿದರು. ಅವರು ಮಾಡಿರುವ ಕಾರ್ಯಕ್ರಮಗಳು, ವಚನಗಳು, ದೇಶ, ನಾಡಿನಲ್ಲಿ ಆಚರಣೆಯಾದರೆ ದೇಶ ಅಭಿವೃದ್ದಿಯಾಗುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದರು.
ಶಾಸಕ ಎನ್.ಮಹೇಶ್ ಮಾತನಾಡಿ, ದೇಶವನ್ನು ಉಳಿಸಲು, ಸಮುದಾಯಗಳನ್ನು ಬೆಸೆಯಲಿಕ್ಕೆ ಮಹಾ ಪುರುಷರಾದ ಬುದ್ದ, ಬಸವ, ಅಂಬೇಡ್ಕರ್ ಅವರ ಪುತ್ಥಳಿಗಳನ್ನು ತುಂಬಾ ಎತ್ತರಕ್ಕೆ ನಿರ್ಮಾಣ ಮಾಡಿ ನಿಲ್ಲಿಸಬೇಕಿದೆ ಎಂದರು.
ಉಮ್ಮತ್ತೂರು ಗ್ರಾಮದಲ್ಲಿ ಕೊಟ್ಟೂರು ದೇವಸ್ಥಾನದ ಮುಂಭಾಗದ ಪಾರ್ಕ್‌ನಲ್ಲಿ ಶ್ರೀಬಸವೇಶ್ವರ ಪುತ್ಥಳಿ ನಿರ್ಮಾಣ ಮಾಡುವುದರ ಮೂಲಕ ನಾವು ಬದುಕುವ ರೀತಿ, ನೀತಿ, ಆಲೋಚನೆ ಮಾಡುವ ರೀತಿ, ನೀತಿ ಬದಲಾಗಬೇಕೆನ್ನುವುದು. ನನ್ನದೊಂದು ಸಂಕಲ್ಪ. ಆ ನಿಟ್ಟಿನಲ್ಲಿ ಇಲ್ಲಿ ಎಲ್ಲರಿಗೂ ಇಷ್ಠವಾಗುವ, ಆಕರ್ಷಣೆ ಮಾಡುವ ಒಂದು ಪ್ರತಿಮೆ, ಮಂಟಪ ಇಲ್ಲಿ ಸ್ಥಾಪನೆ ಮಾಡಲಾಗುವುದು. ಎಲ್ಲರ ಸಹಕಾರದಲ್ಲಿ ಇದು ನಿರ್ಮಾಣ ಮಾಡಲಾಗುತ್ತಿದೆ. ಮಾರ್ಚ್ ತಿಂಗಳೊಳಗೆ ಪುತ್ಥಳಿ ಪೂರ್ಣಗೊಳಿಸಲಾಗುವುದು. ಅನಾವರಣಗೊಳಿಸಲು ಸಂಕಲ್ಪ ಮಾಡಲಾಗಿದೆ ಎಂದರು.
ಮಾಜಿ ಶಾಸಕಿ ಪರಿಮಳಾ ನಾಗಪ್ಪ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಮೂಡ್ಲುಪುರ ನಂದೀಶ್, ಜಿಪಂ ಮಾಜಿ ಅಧ್ಯಕ್ಷೆ ನಾಗಶ್ರೀಪ್ರತಾಪ್, ಗ್ರಾಪಂ ಅಧ್ಯಕ್ಷ ಮಹದೇವಸ್ವಾಮಿ, ಜಿಲ್ಲಾ ಬಸವ ಕೇಂದ್ರ ಅಧ್ಯಕ್ಷ ಎನ್‌ರಿಚ್ ಮಹದೇವಸ್ವಾಮಿ, ತಾಪಂ ಮಾಜಿ ಉಪಾಧ್ಯಕ್ಷ ದಯಾನಿ, ಮಾಜಿ ಸದಸ್ಯ ಸುಧಾ ಮಲ್ಲಣ್ಣ, ಬಿಜೆಪಿ ಮುಖಂಡ ಡಾ.ಎ.ಆರ್.ಬಾಬು, ಚಾಮುಲ್ ಅಧ್ಯಕ್ಷ ನಾಗೇಂದ್ರ, ಕಲಾವಿದ ಬಸವರಾಜು, ಕಾಳನಹುಂಡಿ ಗುರುಸ್ವಾಮಿ, ಅರ್ಜುನ್, ಮಹೇಶ್ ಇತರರು ಇದ್ದರು.