ಚಾಮರಾಜನಗರ: ವೇತನ ಮಂಡಳಿಯ ಆದೇಶದ ವೇತನಗಳನ್ನು ಜಾರಿ ಮಾಡಲು ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ ಎಂದು ಖಂಡಿಸಿ ಮಾ.1ರಂದು ಕೊಳ್ಳೇಗಾಲದ ಕುಂತೂರಿನ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆಯ ಕಾರ್ಮಿಕರ ಸಂಘ ಮುಷ್ಕರ ಮಾಡಲಿದೆ ಎಂದು ಸಂಘದ ಗೌರವ ಅಧ್ಯಕ್ಷ ಚಂದ್ರಶೇಖರ್ ಮೇಟಿ ತಿಳಿಸಿದರು.
2018ರ ಅ.1ರಿಂದ 2022ರ ಮಾ.31ರ ಅವಯ ಬೇಡಿಕೆಗಳನ್ನು ಈಡೇರಿಸುವಂತೆ ನಗರದ ಜಿಲ್ಲಾಡಳಿತ ಭವನದ ಮುಂಭಾಗ ಪ್ರತಿಭಟನೆ ನಡೆಸಿ ಜಿಲ್ಲಾಕಾರಿ ಡಿ.ಎಸ್.ರಮೇಸ್ ಗೆ ಮನವಿ ಕೊಡಲಾಗಿದೆ. ಜಿಲ್ಲಾಕಾರಿಗಳು ಕೂಡ ಸಭೆ ನಡೆಸಿ ಕಾರ್ಖಾನೆ ಆಡಳಿತ ಮಂಡಳಿಯೊಂದಿಗೆ ಶೀಘ್ರದಲ್ಲೇ ಕಾರ್ಮಿಕರ ಬೇಡಿಕೆ ಈಡೇರಿಸುವಂತೆ ತಿಳಿಸಿದರೂ ಕೂಡ ಕಾರ್ಖಾನೆಯವರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದರು. ತಮಿಳುನಾಡಿನಲ್ಲಿ ಕೊಡುವ ಮಾದರಿಯಲ್ಲೇ ವೇತನ ಕೊಡುವುದಾಗಿ ಹಠ ಹಿಡಿದಿದ್ದಾರೆ. ನಮಗೆ ಕರ್ನಾಟಕದ ಮಾದರಿ ಮಾದರಿಯಲ್ಲೇ ನೀಡಬೇಕು ಎಂದು ಒತ್ತಾಯ ಮಾಡಲಾಗಿದೆ. ನಮ್ಮ ಬೇಡಿಕೆಗಳ ಈಡೇರಿಸುವಲ್ಲಿ ಕಾರ್ಖಾನೆ ವಿಳಂಬ ಮಾಡುತ್ತಿದೆ. ಇದರಿಂದ ಕಾರ್ಮಿಕರಿಗೆ ಸಮಸ್ಯೆಯಾಗಿದೆ ಕೂಡಲೇ ಕಾರ್ಮಿಕರ ಬೇಡಿಕೆ ಈಡೇರಿಸುವ ತನಕ ಮುಷ್ಕಾರ ನಡೆಸಲು ಸಂಘ ನಿರ್ಧರಿಸಿದೆ. ರೈತರು ಸಹಕರಿಸಿ ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಬೇಕು ಎಂದು ಚಂದ್ರಶೇಖರ ಮೇಟಿ ಮನವಿ ಮಾಡಿದರು.
ಸಂಘದ ಅಧ್ಯಕ್ಷ ಭೃಂಗೇಶ್ ಮಾತನಾಡಿ, ಮೂಲಸೌಕರ್ಯಗಳಲ್ಲಿ ಒಂದಾದ ವಸತಿಗೃಹಗಳನ್ನೂ ಸಹ ಕೊಟ್ಟಿಲ್ಲ. ಕಾರ್ಖಾನೆಯಲ್ಲಿ ಕರ್ನಾಟಕದ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ತಮಿಳುನಾಡು ಆಹಾರ ಪದ್ದತಿ ಅನುಸರಿಸುತ್ತಿರುವುದರಿಂದ ಸಮಸ್ಯೆಯಾಗಿದೆ. ಆದರಿಂದ ಕರ್ನಾಟಕದ ಆಹಾರ ಪದ್ದತಿ ಜಾರಿ ಮಾಡಬೇಕು ಎಂದು ಒತ್ತಾಯಿಸಿದರು. ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಕಾರ್ಮಿಕರ ಸಂಘದ ಪ್ರಧಾನ ಕಾರ್ಯದರ್ಶಿ, ರಾಜಶೇಖರಮೂರ್ತಿ, ಉಪಾಧ್ಯಕ್ಷ ಪುಟ್ಟಸ್ವಾಮಿ, ಜಂಟಿ ಕಾರ್ಯದರ್ಶಿ ಸಿ.ಹರೀಶ್‌ಕುಮಾರ್, ಖಜಾಂಚಿ ವೈ.ಎಂ.ಬಸವರಾಜು ಹಾಜರಿದ್ದರು.