ಆದಿವಾಸಿಗಳ ಆರೋಗ್ಯ ಕಾರ್ಯಕ್ರಮದಲ್ಲಿ ಚಾ.ನಗರ ಮುಂದು

13raju7
Published on

ಚಾಮರಾಜನಗರ: ಆದಿವಾಸಿಗಳ ಆರೋಗ್ಯ ಸುಧಾರಣೆಗಾಗಿ ವಿನೂತನವಾಗಿ ರೂಪಿಸುವ ಕಾರ್ಯಕ್ರಮ ಅನುಷ್ಠಾನದಲ್ಲಿ ಗಡಿ ಜಿಲ್ಲೆ ಚಾಮರಾಜನಗರ 5 ಜಿಲ್ಲೆಗಳಿಗಿಂತಲೂ ಮುಂದಿದೆ.

ಸಂವಿಧಾನ ಅನುಚ್ಛೇದ 275(1)ರಡಿ ನವದೆಹಲಿಯ ಕೇಂದ್ರ ಬುಡಕಟ್ಟು ವ್ಯವಹಾರಗಳ ಮಂತ್ರಾಲಯ 2019-20ನೇ ಸಾಲಿನಲ್ಲಿ ಚಾಮರಾಜನಗರ, ಮೈಸೂರು, ಕೊಡಗು, ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳ ಆದಿವಾಸಿಗಳ ಆರೋಗ್ಯ ರಕ್ಷಣೆಗಾಗಿ ‘ಟ್ರೈಬಲ್ ಹೆಲ್ತ್ ನ್ಯಾವಿಗೇಷನ್ ಮಾಡಲ್’ ಕಾರ್ಯಕ್ರಮ ರೂಪಿಸಿದೆ. ಆಯಾ ಜಿಲ್ಲೆಗಳ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಈ ಕಾರ್ಯಕ್ರಮದ ಅನುಷ್ಠಾನದ ಜವಾಬ್ದಾರಿ ಹೊತ್ತಿದೆ. ಚಾಮರಾಜನಗರ ಜಿಲ್ಲೆಯಲ್ಲಿ ಈ ಕಾರ್ಯಕ್ರಮ ಈಗಾಗಲೇ ಕಾರ್ಯರೂಪಕ್ಕೆ ಬಂದಿದೆ. ಆದರೆ ಉಳಿದ ಜಿಲ್ಲೆಗಳಲ್ಲಿ ಇನ್ನೂ ಬಂದಿಲ್ಲ.

ಏನಿದು ಕಾರ್ಯಕ್ರಮ?:
5 ಜಿಲ್ಲೆಗಳಲ್ಲಿರುವ ಆದಿವಾಸಿಗಳ ಆರೋಗ್ಯದ ಮೇಲೆ ಕಾಳಜಿ ವಹಿಸಲು ಇದೇ ಸಮುದಾಯದಲ್ಲಿ ನರ್ಸಿಂಗ್ ತರಬೇತಿ ಪಡೆದಿರುವ ಮಹಿಳೆಯರನ್ನು ನೇಮಕ ಮಾಡಲಾಗುತ್ತದೆ. ಆದಿವಾಸಿಗಳು ಆರೋಗ್ಯದ ಬಗ್ಗೆ ಕಾಳಜಿ ಹೊಂದಿಲ್ಲ, ಕಾಯಿಲೆಗಳನ್ನು ನಿರ್ಲಕ್ಷ್ಯ ಮಾಡುತ್ತಾರೆ, ಅನಾರೋಗ್ಯಕ್ಕೊಳಗಾದರೆ ದೇವರ ಮೊರೆ ಹೋಗುತ್ತಾರೆ, ನಿರ್ಣಾಯಕ ಪರಿಸ್ಥಿತಿಯಲ್ಲಿ ಆಸ್ಪತ್ರೆಗೆ ಬಂದರೂ ಎಲ್ಲಿ, ಯಾರ ಬಳಿ ಚಿಕಿತ್ಸೆ ಪಡೆಯಬೇಕೆನ್ನುವ ತಿಳಿವಳಿಕೆ ಇಲ್ಲ. ಹೆಚ್ಚಿನ ಚಿಕಿತ್ಸೆಗೆಂದು ದೊಡ್ಡ ಆಸ್ಪತ್ರೆಗಳಿರುವ ಊರಿಗೆ ಹೋಗುವುದಿಲ್ಲ. ಹೀಗೆ ಆರೋಗ್ಯ ವ್ಯವಸ್ಥೆ ಬಗ್ಗೆ ಅರಿವಿಲ್ಲದ ಆದಿವಾಸಿಗಳನ್ನು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸುವುದು ಸಂಯೋಜಕರು ಹಾಗೂ ಆರೋಗ್ಯ ಕಾರ್ಯಕರ್ತರ ಜವಾಬ್ದಾರಿಯಾಗಿದೆ. ಇದಕ್ಕಾಗಿ ಸಂಯೋಜಕರಿಗೆ 15 ಸಾವಿರ ರೂ. ಹಾಗೂ ಆರೋಗ್ಯ ಕಾರ್ಯಕರ್ತೆಯರಿಗೆ 12 ಸಾವಿರ ರೂ. ಗೌರವಧನ ನೀಡಲಾಗುತ್ತಿದೆ. ಅದರಂತೆ, ಚಾಮರಾಜನಗರ ಜಿಲ್ಲೆಯಲ್ಲಿ ಮೂರು ತಿಂಗಳ ಹಿಂದೆಯೇ ಜಿಲ್ಲಾ ಸಂಯೋಜಕರು, ಮೂರು ತಾಲೂಕುಗಳಿಗೆ ಆರೋಗ್ಯ ಕಾರ್ಯಕರ್ತೆಯರನ್ನು ನೇಮಕ ಮಾಡಿಕೊಳ್ಳಲಾಗಿದೆ. ಇವರಿಗೆ ಎರಡು ತಿಂಗಳ ಸಂಬಳವೂ ಕೈ ಸೇರಿದ್ದು, ಅನಾರೋಗ್ಯ ಪೀಡಿತ ಆದಿವಾಸಿಗಳಿಗೂ ನೆರವಾಗಿದೆ.

ಉಳಿದ ಜಿಲ್ಲೆಗಳಲ್ಲಿ ಏನಾಗಿದೆ?
ಮೈಸೂರಿನಲ್ಲಿ ಒಬ್ಬ ಸಂಯೋಜಕರು, ಮೂರು ತಾಲೂಕುಗಳಿಗೆ ಆರೋಗ್ಯ ಕಾರ್ಯಕರ್ತೆಯರು, ಕೊಡಗು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ತಲಾ ಒಬ್ಬರು ಜಿಲ್ಲಾ ಸಂಯೋಜಕರು, ಎರಡು ತಾಲೂಕುಗಳಿಗೆ ತಲಾ ಒಬ್ಬರು ಆರೋಗ್ಯ ಕಾರ್ಯಕರ್ತರನ್ನು ನೇಮಕ ಮಾಡಿಕೊಳ್ಳಬೇಕಿದೆ.
ಇವರನ್ನು ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ನಿಯೋಜನೆ ಮಾಡಬೇಕು. ನರ್ಸಿಂಗ್ ತರಬೇತಿ ಪಡೆದಿರುವ, ಸ್ಥಳೀಯ ಬುಡಕಟ್ಟು ವಿದ್ಯಾವಂತ ಮಹಿಳೆಯರಿಗೆ ಆದ್ಯತೆ ನೀಡಬೇಕಿದೆ. ಈ ಕಾರ್ಯವನ್ನು ಚಾಮರಾಜನಗರದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಪೂರ್ಣಗೊಳಿಸಿದ್ದು, ಉಳಿದ ಜಿಲ್ಲೆಗಳಲ್ಲಿ ನೇಮಕವಾಗಿಲ್ಲ.
ಈ ಕುರಿತು ಮೈಸೂರು ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮುನಿರಾಜು ‘ವಿಜಯವಾಣಿ’ಯೊಂದಿಗೆ ಮಾತನಾಡಿ, ಜಿಲ್ಲೆಯಲ್ಲಿ ಅರ್ಜಿ ಸಲ್ಲಿಕೆಗೆ ಜು.22 ಕೊನೆಯ ದಿನವಾಗಿದೆ. ನಾವು ಈ ಮೊದಲೇ ನೇಮಕ ಮಾಡಿಕೊಳ್ಳುವುದರೊಳಗೆ ವಿಧಾನಸಭಾ ಚುನಾವಣೆ ಎದುರಾಗಿ ನೀತಿ ಸಂಹಿತೆ ಜಾರಿಯಾಗಿತ್ತು. ಆದಿವಾಸಿಗಳು ಅಧಿಕ ಸಂಖ್ಯೆಯಲ್ಲಿರುವ ಕೊಡಗಿನಲ್ಲೂ ಈ ಕಾರ್ಯಕ್ರಮದ ಅನುಷ್ಠಾನ ಆಮೆಗತಿಯಲ್ಲಿ ಸಾಗುತ್ತಿದೆ. ಇಲ್ಲಿಯೂ ಒಬ್ಬ ಆರೋಗ್ಯ ಸಂಯೋಜಕರು, ಎರಡು ತಾಲೂಕುಗಳಿಗೆ ಇಬ್ಬರು ಆರೋಗ್ಯ ಕಾರ್ಯಕರ್ತೆಯರನ್ನು ನಿಯೋಜಿಸಿಕೊಳ್ಳಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.
ಕೊಡಗು ಜಿಲ್ಲೆಯ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ ಪ್ರತಿಕ್ರಿಯಿಸಿ, ಜಿಲ್ಲೆಯಲ್ಲಿ ಸಂಯೋಜಕರು ಮತ್ತು ಆರೋಗ್ಯ ಕಾರ್ಯಕರ್ತೆಯರ ನೇಮಕಾತಿಗಾಗಿ ಜು.19ರಂದು ಸಂದರ್ಶನ ಏರ್ಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
ಉಡುಪಿಯಲ್ಲಿ ಒಬ್ಬ ಸಂಯೋಜಕರು, ಎರಡು ತಾಲೂಕುಗಳಿಗೆ ಇಬ್ಬರು ಆರೋಗ್ಯ ಕಾರ್ಯಕರ್ತೆಯರನ್ನು ನೇಮಕ ಮಾಡಿಕೊಳ್ಳಬೇಕಿದೆ. ಈ ಜಿಲ್ಲೆಯ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ದೂದ್‌ಪಿರ್ ಮಾತನಾಡಿ, ಅರ್ಜಿಗಳು ಕಡಿಮೆ ಬಂದಿದ್ದವು. ಮತ್ತೆ ಅರ್ಜಿ ಹಾಕಲು ಅವಕಾಶ ನೀಡಿದ್ದೇವೆ. ಈಗ ಮೂವರು ಅಭ್ಯರ್ಥಿಗಳು ಅರ್ಜಿ ಹಾಕಿದ್ದು, ಇವರ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದಿದ್ದಾರೆ.
ದಕ್ಷಿಣ ಕನ್ನಡದ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೇಮಚಂದ್ರ ಉತ್ತರಿಸಿ, ನಮ್ಮ ಜಿಲ್ಲೆಯಲ್ಲಿ ‘ಆರೋಗ್ಯ ಪ್ರೇರಕರು’ ಹೆಸರಿನಲ್ಲಿ ಸಂಯೋಜಕರು ಈಗಾಗಲೇ ಕೆಲಸ ಮಾಡುತ್ತಿದ್ದು, ನಾನು ಈಗಷ್ಟೇ ವರ್ಗಾವಣೆಯಾಗಿ ಬಂದಿದ್ದೇನೆ. ಈ ಹೊಸ ಕಾರ್ಯಕ್ರಮದ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಜೀವ ರಕ್ಷಣೆಗೆ ಇಲ್ಲಿಗೆ ಉದಾಹರಣೆ:
ಜಿಎನ್‌ಎಂ ನರ್ಸಿಂಗ್ ಮಾಡಿ, ಆದಿವಾಸಿಗಳ ಆರೋಗ್ಯ ರಕ್ಷಣೆಗಾಗಿ ನೇಮಕಗೊಂಡಿರುವ ಚಾಮರಾಜನಗರ ಜಿಲ್ಲಾ ಸಂಯೋಜಕಿ ಬೇಬಿ ತಮ್ಮ ಸಮುದಾಯವರ ಆರೋಗ್ಯ ರಕ್ಷಣೆ ಮಾಡಿರುವ ಸಾರ್ಥಕತೆಯಲ್ಲಿದ್ದಾರೆ.
ಕೆಲವು ದಿನಗಳ ಹಿಂದೆ ಕಾಡಿನೊಳಗಿರುವ ಕೆರೆದಿಂಬದಲ್ಲಿ 9 ತಿಂಗಳು ಕಳೆದರೂ ಆಸ್ಪತ್ರೆಗೆ ದಾಖಲಾಗದ, ರಕ್ತಹೀನತೆಯಿಂದ ಬಳಲುತ್ತಿದ್ದ ಗರ್ಭಿಣಿಯನ್ನು ಇವರು ಆಸ್ಪತ್ರೆಗೆ ದಾಖಲಿಸಿದ್ದರು. ಗರ್ಭಿಣಿ ಮತ್ತು ಮಗು ಉಳಿವಿಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಆಸ್ಪತ್ರೆಗೆ ರವಾನಿಸಬೇಕಾಗಿತ್ತು. ಈ ವಿಷಯ ತಿಳಿದ ಮನೆಯವರು ಗರ್ಭಿಣಿಯನ್ನು ಮರಳಿ ಕಾಡಿಗೆ ಕರೆದುಕೊಂಡು ದೇವರಿಗೆ ಪೂಜೆ ಸಲ್ಲಿಸಿದರೆ ಎಲ್ಲವೂ ಸರಿಹೋಗುತ್ತದೆ ಎಂದಿದ್ದರು. ಈ ಮನಸ್ಥಿತಿ ಬದಲಾಯಿಸಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿ ತಾಯಿ ಮತ್ತು ಮಗುವಿನ ಆರೋಗ್ಯ ಕಾಪಾಡಿದ್ದಾರೆ. ಪ್ರಸ್ತುತ ಹನೂರಿನ ಕಗ್ಗಲಿಗುಂದಿ ಗ್ರಾಮದಲ್ಲಿ ಚಿರತೆ ದಾಳಿಗೆ ಒಳಗಾಗಿರುವ ಸುಶೀಲಾ(6) ಎಂಬ ಬಾಲಕಿಯ ಆರೋಗ್ಯದ ಮೇಲ್ವಿಚಾರಣೆಯನ್ನು ಜಿಲ್ಲಾ ಸಂಯೋಜಕಿ ಬೇಬಿ ಮಾಡುತ್ತಿದ್ದಾರೆ.

ಹಿಂದಿನ ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರ ಕಾಳಜಿಯಿಂದಾಗಿ ಚಾಮರಾಜನಗರದಲ್ಲಿ ಆದಿವಾಸಿಗಳ ಆರೋಗ್ಯ ರಕ್ಷಣೆಗಾಗಿ ಜಿಲ್ಲಾ ಸಂಯೋಜಕರು, ಆರೋಗ್ಯ ಕಾರ್ಯಕರ್ತೆಯರನ್ನು ನೇಮಕ ಮಾಡಲಾಗಿದೆ. ಇವರು ಎರಡು ತಿಂಗಳ ಸಂಬಳವನ್ನೂ ಪಡೆದುಕೊಂಡು ಮೂರನೇ ತಿಂಗಳು ಕೆಲಸ ಮಾಡುತ್ತಿದ್ದಾರೆ. ಬುಡಕಟ್ಟು ಜನರಿಗೆ ಆರೋಗ್ಯ ಸೌಲಭ್ಯದ ನೆರವು ಸಿಗುತ್ತಿದೆ.-ಮಂಜುಳಾ, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ, ಚಾಮರಾಜನಗರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net