

ಚಾಮರಾಜನಗರ:ತಾಲೂಕಿನ ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಸದಸ್ಯರ ಚಿನ್ನಾಭರಣದ ಮೇಲೆ ಸಾಲ ನೀಡುವ ಮೂಲಕ ಸುಮಾರು 3 ಕೋಟಿ ರೂ.ಗಳಿಗೂ ಹೆಚ್ಚು ವಂಚನೆ ಮಾಡಿದ್ದಾರೆ ಎಂದು ಆರೋಪಿಸಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ನೇತೃತ್ವದಲ್ಲಿ ಸಂಘದ ಸದಸ್ಯರು ಹಾಗೂ ಮಹಿಳೆಯರು ಪ್ರತಿಭಟನೆ ನಡೆಸಿದರು.
ನಗರದ ಶ್ರೀಚಾಮರಾಜೇಶ್ವರ ದೇವಸ್ಥಾನದ ಮುಂಭಾಗ ಗುರುವಾರ ಜಮಾಯಿಸಿದ ಪ್ರತಿಭಟನಾಕಾರರು, ಅಲ್ಲಿಂದ ಮೆರವಣಿಗೆ ಹೊರಟು ಶ್ರೀಭುವನೇಶ್ವರಿ ವೃತ್ತದಲ್ಲಿ ಕೆಲಕಾಲ ರಾಷ್ಟ್ರೀಯ ಹೆದ್ದಾರಿ ತಡೆದರು. ನಂತರ ಬಿ.ರಾಚಯ್ಯ ಜೋಡಿರಸ್ತೆ ಮೂಲಕ ಜಿಲ್ಲಾಡಳಿತ ಭವನಕ್ಕೆ ತೆರಳಿ ಸಹಕಾರ ಸಂಘದ ವಿರುದ್ಧ ಧಿಕ್ಕಾರ ಕೂಗಿ, ಜಿಲ್ಲಾಡಳಿತ ಭವನಕ್ಕೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಾಧ್ಯಕ್ಷ ಹಳ್ಳಿಕೆರೆಹುಂಡಿ ಭಾಗ್ಯರಾಜ್ ಮಾತನಾಡಿ, ಮಲೆಯೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಎಲ್. ಶಿವಪ್ಪ, ಕಾರ್ಯದರ್ಶಿ ನಾಗೇಂದ್ರ ಹಾಗೂ ಆಡಳಿತ ಮಂಡಳಿಯ ನಿರ್ದೆಶಕರು ಶೂನ್ಯ ಬಡ್ಡಿ ದರದಲ್ಲಿ ರೈತರ ಚಿನ್ನಾಭರಣದ ಮೇಲೆ ಸಾಲ ನೀಡುತ್ತೇವೆ ಎಂದು ಚಿನ್ನಾರಭರಣಗಳನ್ನು ಪಡೆದುಕೊಂಡು ಸಾಲ ನೀಡಿದ್ದು, ಮತ್ತೆ ಹಣ ಕಟ್ಟಿಸಿಕೊಂಡು ಸಂಘದ ಸದಸ್ಯರ ಚಿನ್ನಾಭರಣವನ್ನು ವಾಪಸ್ ನೀಡಲು ಹಿಂದೇಟು ಹಾಕಿದ್ದಾರೆ. ಚಿನ್ನಾಭರಣಗಳನ್ನು ಅಧ್ಯಕ್ಷ, ಕಾರ್ಯದರ್ಶಿ ಹಾಗೂ ಆಡಳಿತ ಮಂಡಳಿ ಸದಸ್ಯರು ಇತರೇ ಖಾಸಗಿ ಬ್ಯಾಂಕುಗಳಲ್ಲಿ ಇಟ್ಟು, ಹೆಚ್ಚಿನ ಹಣ ಪಡೆದು, ರೈತರು, ಮಹಿಳೆಯರನ್ನು ವಂಚನೆ ಮಾಡಿದ್ದಾರೆ. ಈ ಕೂಡಲೇ ಇವರ ವಿರುದ್ದ ಕ್ರಿಮಿನಲ್ ಪ್ರಕರಣ ದಾಖಲು ಮಾಡಬೇಕು ಎಂದು ಒತ್ತಾಯಿಸಿದರು.
ಮಲೆಯೂರು, ಮುಕ್ಕಡಹಳ್ಳಿ, ಹಿರಿಬೇಗೂರು, ಚಿಕ್ಕಬೇಗೂರು, ಕುಲಗಾಣ, ಅರಳಿಕಟ್ಟೆ, ಮೇಗಲಹುಂಡಿ, ಕೀಳಲಿಪುರ ಸೇರಿದಂತೆ 10ಕ್ಕು ಹೆಚ್ಚು ಗ್ರಾಮಗಳ ರೈತರು ವಂಚನೆಗೆ ಒಳಗಾಗಿದ್ದಾರೆ. ರೈತರು ಕಾರ್ಯದರ್ಶಿಯನ್ನು ವಿಚಾರಿಸಿದರೆ ಉಢಾಪೆ ಉತ್ತರ ನೀಡುತ್ತಿದ್ದಾರೆ.
ಇದೊಂದು ದೊಡ್ಡ ವಂಚನೆ ಪ್ರಕರಣವಾಗಿದ್ದು, ಸಹಕಾರ ಸಂಘಗಳ ನಿಬಂಧಕರು ಹಾಗೂ ಸಬ್ ರಿಜಿಸ್ಟಾರ್ ಪ್ರಕರಣ ದಾಖಲು ಮಾಡಿ ಸಂಘವನ್ನು ಸೂಪರ್ ಸೀಡ್ ಮಾಡಬೇಕು ಎಂದು ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ಪಿ. ಸೋಮಶೇಖರ್, ಕಾರ್ಯದರ್ಶಿ ಕೆ. ಮೂಕಹಳ್ಳಿ ಮಹದೇವಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಪಟೇಲ್ ಶಿವಮೂರ್ತಿ, ತಾಲೂಕು ಅಧ್ಯಕ್ಷ ಮೂಡ್ಲುಪುರ ಹಾಲಿನನಾಗರಾಜು, ತಾಲೂಕು ಪ್ರಧಾನ ಕಾರ್ಯದರ್ಶಿ ಮಲೆಯೂರು ಹರ್ಷ, ಕಾರ್ಯದರ್ಶಿ ನಾಗರಾಜು, ಮಲೆಯೂರು ಗ್ರಾಮ ಘಟಕ ಅಧ್ಯಕ್ಷ ಬಸವರಾಜಪ್ಪ, ಉಡಿಗಾಲ ಮಂಜುನಾಥ್, ಕುರುಬೂರು ಸಿದ್ದೇಶ್, ಪ್ರದೀಪ್, ಹಿರಿಬೇಗೂರು ಗುರುಸ್ವಾಮಿ, ಮುಕ್ಕಡಹಳ್ಳಿ ಗಿರಿಜಾ, ಲಕ್ಷ್ಮಮ್ಮ,ಕಮಲಮ್ಮ, ಸುವರ್ಣಮ್ಮ ಹಾಗೂ ಇತರರು ಭಾಗವಹಿಸಿದ್ದರು.