

ಚಾಮರಾಜನಗರ:ಮಾತೃಭಾಷೆಯಲ್ಲಿ ಪಡೆದ ಶಿಕ್ಷಣ ಅತ್ಯಂತ ಪರಿಣಾಮಕಾರಿಯಾಗಿರುತ್ತದೆ ಎಂದು ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮೀಜಿ ಅಭಿಮತ ವ್ಯಕ್ತಪಡಿಸಿದರು.
ಗಡಿನಾಡು ತಾಳವಾಡಿಯ ಕ್ಲಾಸಿಕ್ ಫಂಕ್ಷನ್ ಹಾಲ್ ನಲ್ಲಿ ಜೆಎಸ್‌ಎಸ್ ಮಹಾ ವಿದ್ಯಾಪೀಠ, ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಸಹಯೋಗದಲ್ಲಿ ಭಾರತ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸವಿ ನೆನಪಿನಲ್ಲಿ ಬುಧವಾರ ಆಯೋಜಿಸಿದ್ದ ಗಡಿನಾಡು ಸಾಂಸ್ಕೃತಿಕ ಉತ್ಸವವನ್ನು ಉದ್ಘಾಟಿಸಿ ಮಾತನಾಡಿದರು.
ಕರ್ನಾಟಕ ಸಾಂಸ್ಕೃತಿಕವಾಗಿ ಸಂಪನ್ನವಾಗಿರುವ ರಾಜ್ಯವಾಗಿದ್ದು, ಪ್ರತಿಯೊಬ್ಬರಿಗೂ ಆಶ್ರಯ ಸಿಗುವಂತಹ ಜಾಗ ಎಂಬ ಮಾತಿದೆ. ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ ಮತ್ತು ರಾಜಕೀಯವಾಗಿ ನೆಲೆಯನ್ನು ಒದಗಿಸಿಕೊಡುವ ರಾಜ್ಯವಾಗಿದೆ. ಈ ಹಿಂದೆ ತಳವಾಡಿ ಕರ್ನಾಟಕಕ್ಕೆ ಸೇರಬೇಕು ಎಂದು ಸಾಕಷ್ಟು ಹೋರಾಟಗಳು ನಡೆದಿತ್ತು. ತಮಿಳು ಮತ್ತು ಕನ್ನಡ ಸೋದರ ಭಾಷೆಗಳಾಗಿದ್ದು, ಭಾಷೆಯ ಮೂಲ ಸೆಳೆ ಒಂದೇ ಆಗಿದೆ. ಕರ್ನಾಟಕ ಮತ್ತು ತಮಿಳುನಾಡಿನ ಸೇತುವೆಯಂತಿರುವ ತಾಳವಾಡಿಯಲ್ಲಿ ಕಾರ್ಯಕ್ರಮ ನಡೆಯುತ್ತಿರುವುದು ಅತ್ಯಂತ ಸಂತಸವನ್ನು ಉಂಡುಮಾಡಿದೆ ಎಂದು ತಿಳಿಸಿದರು.
ನಾವು ಎಲ್ಲೇ ಇದ್ದರೂ, ನಮ್ಮ ಮಾತೃಭಾಷೆಯನ್ನು ಉಳಿಸಿಕೊಳ್ಳಬೇಕಾಗದ ಕರ್ತವ್ಯ ಎಲ್ಲರ ಮೇಲಿದೆ. ನಮ್ಮ ಭಾಷೆಯ ಸಂಸ್ಕೃತಿ, ಜಾನಪದ ಕಲೆ, ಸಾಹಿತ್ಯವನ್ನು ಜೀವಂತವಾಗಿ ಇಟ್ಟುಕೊಳ್ಳಬೇಕು. ತಾಳವಾಡಿ ಭಾಗದಲ್ಲಿ ವ್ಯಾವಹಾರಿಕವಾಗಿ ತಮಿಳು ಬಳಕೆ ಮಾಡಿದರು, ಕನ್ನಡ ಭಾಷೆಯನ್ನು ಹೃದಯದ ಭಾಷೆ ಮಾಡಿಕೊಂಡಿರುವುದೇ ಹೆಮ್ಮೆಯ ವಿಷಯ. ತಾಳವಾಡಿಯಲ್ಲಿ ಕನ್ನಡ ಶಾಲೆಗಳಿಗೆ ಸೇರುವ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದೆ. ರಾಜ್ಯದಲ್ಲೂ ಕನ್ನಡ ಶಾಲೆಗೆ ಸೇರುವವರ ಸಂಖ್ಯೆ ಕ್ಷೀಣಿಸುತ್ತಿದೆ. ಇಂಗ್ಲಿಷ್ ವ್ಯಾಮೋಹದಿಂದ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ.ಸಿ.ಸೋಮಶೇಖರ್ ಮಾತನಾಡಿ, ಗಡಿಭಾಗದಲ್ಲಿ ಕನ್ನಡದ ಅಸ್ಮಿತೆ, ಜಾಗೃತಿ, ಸಂರಕ್ಷಣೆ ಮಾಡುವುದೇ ಈ ಕಾರ್ಯಕ್ರಮದ ಉದ್ದೇಶವಾಗಿದೆ. ಗಡಿನಾಡು ಕನ್ನಡಿಗರಲ್ಲಿ ಆತ್ಮವಿಶ್ವಾಸವನ್ನು ಉಂಟುಮಾಡುವುದು ನಮ್ಮ ಜವಾಬ್ದಾರಿಯಾಗಿದೆ. ತಾಳವಾಡಿ ಭೌಗೋಳಿಕವಾಗಿ ತಮಿಳುನಾಡಿಗೆ ಸೇರಿದ್ದರೂ ಸಹ, ಸಾಂಸ್ಕೃತಿಕ ಅಸ್ಮಿತೆ ಹಾಗೆಯೇ ಉಳಿದುಕೊಂಡಿದೆ. ಗಡಿನಾಡು ಸಂಘರ್ಷಕ್ಕೆ ಒಳಗಾಗುವ ಪ್ರದೇಶ, ಅದಾಗ್ಯೂ ಅಖಂಡ ಭಾರತದ ನಿಲುವುನಲ್ಲಿ ರಾಜ್ಯಗಳು ಬೆಸುಗೆಯಿಂದಲೇ ಸಾಗುತ್ತಿವೆ. ನಾವೆಲ್ಲರೂ ಸಾಮರಸ್ಯದಿಂದ ಬದುಕೋಣ, ಮಾನವೀಯ ನೆಲೆಯಲ್ಲಿ ಸಾಗೋಣ ಎಂದರು.
ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಪ್ರಕಾಶ್ ಮತ್ತೀಕೆರೆ ಮಾತನಾಡಿ, ಗಡಿನಾಡು ಪ್ರದೇಶದಲ್ಲಿ ವಾಸಿಸುವ ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಹಲವು ಸಮಸ್ಯೆಗಳನ್ನು ಎದರಿಸುತ್ತಾರೆ. ಕಾಸರಗೋಡು, ಗೋವಾ, ತಮಿಳುನಾಡು, ಆಂಧ್ರ ಪ್ರದೇಶ, ಕೇರಳ ಹಾಗೂ ಇನ್ನಿತರೆ ಗಡಿ ಪ್ರದೇಶದಲ್ಲಿ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಕಲ್ಪಿಸುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಸಾಂಸ್ಕೃತಿಕ ಭವನ ನಿರ್ಮಾಣಕ್ಕೆ ಸಿದ್ದತೆ ನಡೆಸಲಾಗಿದೆ. ಗಡಿನಾಡು ಕನ್ನಡಿಗರ ಸಮಸ್ಯೆಗಳನ್ನು ಬಗೆಹರಿಸಲು ಶ್ರಮವಹಿಸುತ್ತೇವೆ ಎಂದರು.
ಕಾರ್ಯಕ್ರಮದಲ್ಲಿ ಬೆಂಗಳೂರಿನ ಮಾಜಿ ಉಪಮೇಯರ್ ಬಿ.ಎಸ್.ಪುಟ್ಟರಾಜು, ತಾಳವಾಡಿ ಪಂಚಾಯತ್ ಯೂನಿಯನ್ ಚೇರ್‌ಮನ್ ರತ್ನಮ್ಮ ಕಾಳನಾಯ್ಕ, ಗ್ರಾ.ಪಂ ಅಧ್ಯಕ್ಷೆ ದಾಕ್ಷಾಯಣಿ ಕುಮಾರ್, ಕ್ಷೇತ್ರ ಶಿಕ್ಷಣಾಧಿಕಾರಿ ಎಂ.ಭಾಗೀರಥಿ, ಬಸವ ಸಮಿತಿ ಅಧ್ಯಕ್ಷ ಎಂ.ಜೆ. ವೀರಭದ್ರಸ್ವಾಮಿ, ಇತರರು ಉಪಸ್ಥಿತರಿದ್ದರು.