ವಾರ್ಡ್‌ಗಳ ಮಾರ್ಗಸೂಚಿ ಫಲಕಗಳು ಖಾಲಿ

005
Published on

ಕೊಳ್ಳೇಗಾಲ:ಇಲ್ಲಿನ ನಗರಸಭೆ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ರಸ್ತೆಗಳಲ್ಲೂ ಸಾರ್ವನಿಕರಿಗೆ ಮಾಹಿತಿ ನೀಡುವ ಸಲುವಾಗಿ ಅಳವಡಿಸಲಾಗಿರುವ ಮಾರ್ಗಸೂಚಿ ಫಲಕಗಳಿಗೆ ಬಿಳಿ ಬಣ್ಣ ಬಳಿದು ಖಾಲಿ ಬಿಟ್ಟಿರುವುದರಿಂದ ಸಾರ್ವಜನಿಕರಿಗೆ ತೊಂದರೆಯಾಗಿದೆ.

ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿವೆ. ಪ್ರತಿ ವಾರ್ಡ್‌ನಲ್ಲಿರುವ ಎಲ್ಲ ರಸ್ತೆಗಳಿಗೂ ಈ ಹಿಂದೆ ನಗರಸಭೆ ಸಾರ್ವಜನಿಕರ ಅನುಕೂಲಕ್ಕಾಗಿ ಲಕ್ಷಾಂತರ ರೂಪಾಯಿ ವ್ಯಯಿಸಿ ಮಾರ್ಗಸೂಚಿ ಫಲಕಗಳನ್ನು ಅಳವಡಿಸಿದೆ. ಫಲಕಗಳಲ್ಲಿ ಸಂಸದರ ಹೆಸರು, ವಿಧಾನಸಭಾ ಕ್ಷೇತ್ರದ ಶಾಸಕರು, ಸ್ಥಳೀಯ ವಾರ್ಡ್ ಸದಸ್ಯರ ಹೆಸರು ಹಾಗೂ ಬಡಾವಣೆ ಹಾಗೂ ರಸ್ತೆ ಬಗ್ಗೆ ಮಾಹಿತಿ ಹಾಕಲಾಗಿತ್ತು. ಇದರಿಂದ ಹೊಸದಾಗಿ ಪಟ್ಟಣಕ್ಕೆ ಭೇಟಿ ಕೊಟ್ಟ ಜನರಿಗೆ ಮಾಹಿತಿ ದೊರೆಯುತ್ತಿತ್ತು. ಇಲ್ಲಿನ ಸಂಸದರು, ಶಾಸಕರು ಹಾಗೂ ಸದಸ್ಯರ ಹೆಸರು ಸಹ ತಿಳಿಯುತ್ತಿತ್ತು. ಆದರೆ, ಇದೀಗ ಜನರಿಗೆ ಉಪಯೋಗಬೇಕಾದ ನಾಮಫಲಕಗಳು ಮಾಹಿತಿ ಇಲ್ಲದೆ ಬರಿದಾಗಿದೆ. ಪರಿಣಾಮ ಸಾರ್ವಜನಿಕರಿಗೆ ತೊಂದರೆಯಾಗಿದೆ.

ಒಂದೂವರೆ ತಿಂಗಳ ಹಿಂದೆ ನಡೆದ ವಿಧಾನಸಭಾ ಚುನಾವಣೆ ನೀತಿ ಸಂಹಿತೆ ಜಾರಿಯಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿ ಫಲಕಗಳಿಗೆ ಬಿಳಿ ಬಣ್ಣ ಬಳಿಸಲಾಗಿತ್ತು. ಇದೀಗ ಚುನಾವಣೆ ಮುಗಿದು ಕ್ಷೇತ್ರಕ್ಕೆ ನೂತನ ಶಾಸಕರಾಗಿ ಎ.ಆರ್.ಕೃಷ್ಣಮೂರ್ತಿ ಆಯ್ಕೆಯಾಗಿದ್ದಾರೆ. ನೂತನ ಶಾಸಕರ ಆಯ್ಕೆಯಾಗಿ ಒಂದೂವರೆ ತಿಂಗಳು ಕಳೆದರೂ ನಾಮಫಲಕದಲ್ಲಿ ಅವರ ಹೆಸರಿಲ್ಲ. ಸಂಸದರ ಹಾಗೂ ವಾರ್ಡ್ ಸದಸ್ಯರ ಮಾಹಿತಿಯೂ ಇಲ್ಲ. ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯ, ಇಚ್ಛಾಶಕ್ತಿ ಕೊರತೆಯಿಂದ ಇಂತಹ ಅನೇಕ ಸಮಸ್ಯೆಗಳು ಪಟ್ಟಣದಲ್ಲಿ ಸಾಮಾನ್ಯ ಎಂಬುದು ಸಾರ್ವಜನಿಕರು ದೂರಿದ್ದಾರೆ.

ನಗರಸಭೆ ಆಯುಕ್ತರು ಹಾಗೂ ಅಧಿಕಾರಿಗಳು ಬೀದಿಗಳಿದು ಜನರಿಗಾಗುತ್ತಿರುವ ಸಮಸ್ಯೆಗಳನ್ನು ನೋಡಬೇಕು. ಆದರೆ ಅವರು ಕಚೇರಿಯ ಕುರ್ಚಿಗೆ ಅಂಟಿಕೊಂಡಿದ್ದಾರೆ. ಖಾತೆ ಮಾಡಿಕೊಡುವ ಕೆಲಸದಲ್ಲಿ ಮಗ್ನರಾಗಿದ್ದಾರೆ. ಚುನಾವಣೆ ಮುಗಿದು ಒಂದೂವರೆ ತಿಂಗಳಾದರೂ ನಾಮಫಲಕದಲ್ಲಿ ಮಾಹಿತಿ ಬರೆಸದಿರುವುದು ವಿಪರ್ಯಾಸ.ಶಾಂತರಾಜು ಬಸ್ತೀಪುರ, ನಗರಸಭೆ ಸದಸ್ಯ ವಾರ್ಡ್‌ನ ಮಾರ್ಗಸೂಚಿ ಫಲಕಗಳಿಗೆ ಮಾಹಿತಿ ಬರೆಸಲು ಟೆಂಡರ್ ಆಗಬೇಕಿದೆ. ಈಗಾಗಲೇ ತಡವಾಗಿದ್ದು ಮೇಲಧಿಕಾರಿಗಳ ಗಮನಕ್ಕೆ ತಂದು ಕ್ರಮವಹಿಸಲಾಗುವುದು.ರಾಜಣ್ಣ, ನಗರಸಭೆ ಆಯುಕ್ತರು, ಕೊಳ್ಳೇಗಾಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net