ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಮೀಸಲು ಪ್ರಕಟಿಸಲು ಡಿಸಿಗೆ ಮನವಿ

22raju3
Published on

ಚಾಮರಾಜನಗರ: ನಗರಸಭೆ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನದ ಮೊದಲ ಅವಧಿ ಮುಕ್ತಾಯಗೊಂಡಿದ್ದು, ಎರಡನೇ ಅವಧಿ ಆಯ್ಕೆಗೆ ಮೀಸಲಾತಿ ಪ್ರಕಟಿಸಬೇಕೆಂದು ಎಸ್‌ಡಿಪಿಐನಿಂದ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಲಾಯಿತು.

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಡಿಸಿ ಡಿ.ಎಸ್.ರಮೇಶ್‌ಗೆ ಶುಕ್ರವಾರ ಮನವಿ ಸಲ್ಲಿಸಿದ ನಗರಸಭೆ ಎಸ್‌ಡಿಪಿಐ ಸದಸ್ಯರು, ನಗರಸಭೆ ಅಧ್ಯಕ್ಷರು / ಉಪಾಧ್ಯಕ್ಷರು ಸ್ಥಾನಕ್ಕೆ ಮೀಸಲಾತಿ ಪ್ರಕಟಣೆ ಆಗಿಲ್ಲದ ಕಾರಣ ಕಳೆದ 2 ತಿಂಗಳಿಂದ ಜಿಲ್ಲಾಧಿಕಾರಿಗಳು ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾರ್ವಜನಿಕರ ಕೆಲಸ ಕಾರ್ಯಗಳು ಸುಗಮವಾಗಿ ಆಗುತ್ತಿಲ್ಲವೆಂದು ಅನೇಕ ದೂರುಗಳು ಬರುತ್ತಿವೆ ಎಂದರು.

ಅಲ್ಲದೇ ವಿವಿಧ ಪ್ರಗತಿ ಕಾಮಗಾರಿಗಳು ಸಹ ಆಮೆಗತಿಯಲ್ಲಿ ನಡೆಯುತ್ತಿವೆ. ಇನ್ನು ಕೆಲವು ಪ್ರಗತಿ ಕಾಮಗಾರಿಗಳು ಪ್ರಾರಂಭವೇ ಆಗಿಲ್ಲ. ಈ ಎಲ್ಲ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಸಂದರ್ಭಕ್ಕೆ ಅನುಗುಣವಾಗಿ ನಗರಸಭೆಯಲ್ಲಿ ಸಭೆಗಳು ಮಾಡಬೇಕಾಗಿರುತ್ತದೆ. ಆದರೆ ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಸ್ಥಾನ ಖಾಲಿ ಇರುವುದರಿಂದ ಸಭೆಗಳು ಸಹ ಮಾಡಲು ಆಗುತ್ತಿಲ್ಲ. ಹೀಗಾಗಿ ತಕ್ಷಣ ಮೀಸಲಾತಿ ಪ್ರಕಟಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ಡಿ.ಎಸ್.ರಮೇಶ್ ಆಡಳಿತಾಧಿಕಾರಿಯಾಗಿರುವುದರಿಂದ ನಗರಸಭೆಯಲ್ಲಿ ಸಾಮಾನ್ಯಸಭೆಯನ್ನು ಕರೆಯಬೇಕೆಂದು ಕೋರಿದರು. ನಗರಸಭೆ ಸದಸ್ಯರಾದ ಅಬ್ರಾಹರ್ ಅಹಮದ್, ಎಂ.ಮಹೇಶ್, ಕಲೀಲ್‌ವುಲ್ಲಾ, ಮೊಹಮ್ಮದ್ ಅಮೀಕ್, ಎಸ್‌ಡಿಪಿಐ ಜಿಲ್ಲಾ ಕಾರ್ಯದರ್ಶಿ ಜಬೀನೂರ್, ಖಜಾಂಚಿ ನಯಾಜ್‌ವುಲ್ಲಾ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net