

ಹನೂರು: ತಾಲೂಕಿನಾದ್ಯಂತ ಭಾನುವಾರ ರಾತ್ರಿ ಅಬ್ಬರಿಸಿದ ಜೋರು ಮಳೆ ಹಲವೆಡೆ ಜನರನ್ನು ಸಂಕಷ್ಟಕ್ಕೆ ದೂಡಿತು.
ಭಾನುವಾರ ರಾತ್ರಿ 11ರ ವೇಳೆಯಲ್ಲಿ ಸುರಿದ ಜೋರು ಮಳೆಯಿಂದ ವೈಶಂಪಾಳ್ಯ ಗ್ರಾಮದಲ್ಲಿ ರಾಮಸ್ವಾಮಿ ಅವರ ಮನೆ ಅರ್ಧ ಭಾಗ ಹಳ್ಳದಲ್ಲಿ ಹರಿದ ನೀರಿನ ರಭಸಕ್ಕೆ ಕೊಚ್ಚಿ ಹೋಗಿದೆ. ಮನೆ ಸಮೀಪದಲ್ಲಿನ ಅರಕನಹಳ್ಳದ ಸೇತುವೆ ಮೇಲೆ ಯಥೇಚ್ಛವಾದ ನೀರು ಹರಿಯಲಾರಂಭಿಸಿತು. ಈ ವೇಳೆ ನುಗ್ಗಿದ ಮಳೆ ನೀರಿನಿಂದ ಮನೆಯಲ್ಲಿ ಮಲಗಿದ್ದ ನಾಲ್ವರು ಗಾಬರಿಯಿಂದ ಹೊರಬಂದಿದ್ದಾರೆ. ಅಷ್ಟೋತ್ತಿಗಾಗಲೇ ನೀರಿನ ರಭಸ ಹೆಚ್ಚಾದ್ದರಿಂದ ಮನೆಯ ಅರ್ಧ ಭಾಗ ಕಣ್ಣೆದುರೆ ನೀರು ಪಾಲಾಗಿದೆ.
ಚಿನ್ನಾಭರಣ, ನಗದು, ಗೃಹೋಪಯೋಗಿ ವಸ್ತುಗಳು ಹಾಗೂ ಆಹಾರ ಪದಾರ್ಥಗಳು ನೀರಿನಲ್ಲಿ ಕೊಚ್ಚಿ ಹೋಗಿದೆ. ಸದ್ಯ ಸಮಯ ಪ್ರಜ್ಞೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದೇವೆ ಎಂದು ಮಾಲೀಕ ರಾಮಸ್ವಾಮಿ ವಿಜಯವಾಣಿಗೆ ತಿಳಿಸಿದರು.
ಇನ್ನು ಬಂಡಳ್ಳಿ ಗ್ರಾಮದಲ್ಲಿ ಪರಶಿವ ಅವರ ಕೊಟ್ಟಿಗೆ ಶೆಡ್ ಸಂಪೂರ್ಣ ನೆಲಕ್ಕುರುಳಿದ್ದು, 15 ದಿನದ ಹಿಂದೆಯಷ್ಟೇ ಕರು ಹಾಕಿದ್ದ 1 ಹಸು ಸ್ಥಳದಲ್ಲೇ ಮೃತಪಟ್ಟಿದ್ದರೆ, 4 ಹಸುಗಳಿಗೆ ಗಾಯವಾಗಿದೆ. ರಾಮಾಪುರ ಗ್ರಾಮದಲ್ಲಿ ಸೆಸ್ಕ್ ಕಚೇರಿ ಆವರಣದಲ್ಲಿ ಹಳೆಯದಾದ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಸುತ್ತುಗೋಡೆ ನೆಲಕ್ಕಚ್ಚಿದೆ. ಸದ್ಯ ರಾತ್ರಿಯಾದ್ದರಿಂದ ಯಾವುದೇ ಅನಾಹುತ ಸಂಭವಿಸಿಲ್ಲ. ಅರಣ್ಯ ಹಾಗೂ ಸೆಸ್ಕ್ ಸಿಬ್ಬಂದಿ ಸ್ಥಳಕ್ಕಾಗಮಿಸಿ ಮರವನ್ನು ತೆರೆವುಗೊಳಿಸಿದರು.
2ನೇ ಬಾರಿಗೆ ಕೊಚ್ಚಿಹೋದ ತಾತ್ಕಾಲಿಕ ರಸ್ತೆ: ಕಳೆದ 3 ದಿನದ ಹಿಂದೆ ಸುರಿದ ಮಳೆಗೆ ಹನೂರಿನಿಂದ ಮಣಗಳ್ಳಿಗೆ ಸಂಪರ್ಕ ಕಲ್ಪಿಸುವ ಚಂಗವಾಡಿ ಸಮೀಪ ಸೇತುವೆ ನಿರ್ಮಾಣ ಕಾಮಗಾರಿ ಸ್ಥಳದಲ್ಲಿ ನಿರ್ಮಿಸಿದ್ದ ತಾತ್ಕಾಲಿಕ ಮಣ್ಣಿನ ರಸ್ತೆ ಸಂಪೂರ್ಣ ಕೊಚ್ಚಿ ಹೋಗಿತ್ತು. ಈ ವೇಳೆ ಈ ಮಾರ್ಗದಲ್ಲಿ ವಾಹನ ಸಂಚಾರವನ್ನು ಸ್ಥಗಿತಗೊಳಿಸಿ ಮತ್ತೆ ತಾತ್ಕಾಲಿಕ ರಸ್ತೆಯನ್ನು ನಿರ್ಮಿಸಲಾಗಿತ್ತು.
ರಾತ್ರಿ ಸುರಿದ ಮಳೆಗೆ ರಸ್ತೆ ಮತ್ತೆ ಕೊಚ್ಚಿ ಹೋಗಿದೆ. ಇದರಿಂದ ಈ ಮಾರ್ಗವನ್ನು ಬಂದ್ ಮಾಡಲಾಗಿದ್ದು, ವಾಹನಗಳು ಚಿಂಚಳ್ಳಿ ಮಾರ್ಗವಾಗಿ ಸಂಚರಿಸಿದವು. ಇನ್ನು ಮಳೆ ಆರ್ಭಟದಿಂದ ಲೊಕ್ಕನಹಳ್ಳಿ ಗ್ರಾಮದಲ್ಲಿ ಕೆಲವು ಮನೆಗಳಿಗೆ ನೀರು ನುಗ್ಗಿತು. ಜನರು ನೀರನ್ನು ಹೊರ ಹಾಕಲು ಹರ ಸಾಹಸ ಪಟ್ಟರು. ಮುಖ್ಯ ರಸ್ತೆಯಲ್ಲಿ ಯಥೇಚ್ಛವಾಗಿ ನೀರು ಹರಿದ ಪರಿಣಾಮ ಸಂಚಾರಕ್ಕೆ ತೊಡಕಾಗಿ ಪರಿಣಮಿಸಿತ್ತು. ಇದರಿಂದ ಸಾರ್ವಜನಿಕರು ಸಮಸ್ಯೆ ಎದುರಿಸಿದರು. ಇನ್ನು ಕೆಲ ಜಮೀನುಗಳಲ್ಲಿ ನೀರು ನೂಗ್ಗಿದ ಪರಿಣಾಮ ಕೆರೆಯಂತಾಗಿತ್ತು. ಮಳೆಯ ಆರ್ಭಟಕ್ಕೆ ಲಾಸರ್‌ದೊಡ್ಡಿ ಸಮೀಪದಲ್ಲಿನ ಚೆಕ್‌ಡ್ಯಾಂ ನೀರು ಪಾಲಾಗಿದೆ.